ಮುಂಬಯಿ: ಬಿಗ್ ಹಿಟ್ಟರ್‌ಗಳನ್ನು ಒಳಗೊಂಡಿರುವ ರಾಜಸ್ಥಾನ್ ರಾಯಲ್ಸ್ ಶುಕ್ರವಾರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಗೆದ್ದು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸುವುದು ಸಂಜು ಸ್ಯಾಮ್ಸನ್ ಪಡೆಯ ಗುರಿ.
ಇನ್ನೊಂದೆಡೆ, ಈಗಾಗಲೇ ಕೂಟದಿಂದ ನಿರ್ಗಮಿಸಿರುವ ಧೋನಿ ಪಡೆಗೂ ಇದು ಕೊನೆಯ ಪಂದ್ಯ. 5ನೇ ಗೆಲುವನ್ನು ಸಂಭ್ರಮಿಸುವುದು ಚೆನ್ನೈ ಗುರಿ. ಆದರೆ ಗೆದ್ದರೂ ಸೋತರೂ ಚೆನ್ನೈ ಉಳಿಯುವುದು ಮಾತ್ರ 9ರಷ್ಟು ಕೆಳ ಸ್ಥಾನದಲ್ಲೇ.
ರಾಜಸ್ಥಾನ್ ರಾಯಲ್ಸ್ ಸಾಮಾನ್ಯ ಗೆಲುವು ಸಾಧಿಸಿದರೂ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆಯುತ್ತದೆ. ಸದ್ಯ ಅದು 16 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಗೆದ್ದರೆ ಉತ್ತಮ ರನ್‌ರೇಟ್ ಆಧಾರದಲ್ಲಿ ಲಕ್ನೋವನ್ನು ಮೂರಕ್ಕೆ ಇಳಿಸಲಿದೆ. ರಾಜಸ್ಥಾನ್ +0.304 ರನ್‌ರೇಟ್ ಹೊಂದಿದ್ದರೆ, ಲಕ್ನೋ +0.251 ರನ್‌ರೇಟ್ ಗಳಿಸಿದೆ.
ಅಕಸ್ಮಾತ್ ಸೋತದ್ದೇ ಆದರೆ ರಾಜಸ್ಥಾನ್‌ಗೆ ನಷ್ಟವೇನೂ ಇಲ್ಲ ಎಂಬುದು ಸದ್ಯದ ಲೆಕ್ಕಾಚಾರ. ಆಗ ಅದು ಮೂರರಲ್ಲೇ ಉಳಿಯಬಹುದು ಅಥವಾ ನಾಲ್ಕಕ್ಕೆ ಇಳಿಯಲೂಬಹುದು.
Related Articles
ಬಟ್ಲರ್ ಫಾರ್ಮ್ :
627 ರನ್ನುಗಳೊಂದಿಗೆ “ಆರೇಂಜ್ ಕ್ಯಾಪ್’ ಏರಿಸಿಕೊಂಡಿರುವ ಆರಂಭಕಾರ ಜಾಸ್ ಬಟ್ಲರ್ ರಾಜಸ್ಥಾನ್ ತಂಡದ ಪಿಲ್ಲರ್. ಈಗಾಗಲೇ 3 ಸೆಂಚುರಿ, 3 ಹಾಫ್ ಸೆಂಚುರಿ ಬಾರಿಸಿ ಎದುರಾಳಿಗಳ ಪಾಲಿಗೆ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಆದರೆ ಬಟ್ಲರ್ ಕಳೆದ 4 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದನ್ನು ಮರೆಯುವಂತಿಲ್ಲ ಗಳಿಸಿದ್ದು 22, 30, 7 ಮತ್ತು 2 ರನ್ ಮಾತ್ರ. ಹಾಗೆಯೇ ಬಟ್ಲರ್ ಬೇಗ ಔಟಾದರೂ ತಂಡ ಆತಂಕಕ್ಕೆ ಒಳಗಾಗದು ಎಂಬುದು ಕೂಡ ಸತ್ಯ. ಅಲ್ಲಿ ಒಬ್ಬರಲ್ಲ ಒಬ್ಬರು ಕ್ರೀಸ್ ಆಕ್ರಮಿಸಿಕೊಂಡು ಸವಾಲಿನ ಮೊತ್ತ ಪೇರಿಸುವಲ್ಲಿ ಟೊಂಕ ಕಟ್ಟುತ್ತಾರೆ.
ರಾಜಸ್ಥಾನ್ ಕಳೆದ 4 ಪಂದ್ಯಗಳಲ್ಲಿ ಮಿಶ್ರ ಫಲ ಅನುಭವಿಸಿದೆ. ಎರಡನ್ನು ಗೆದ್ದು ಎರಡರಲ್ಲಿ ಸೋತಿದೆ. ಕೊನೆಯ ಮುಖಾಮುಖೀಯಲ್ಲಿ ಲಕ್ನೋ ವಿರುದ್ಧ 24 ರನ್ನುಗಳಿಂದ ಜಯಿಸಿದೆ. ಅಲ್ಲಿ ಯಶಸ್ವಿ ಜೈಸ್ವಾಲ್ ಟಾಪ್ ಸ್ಕೋರರ್ ಆಗಿದ್ದರು (41). ಸ್ಯಾಮ್ಸನ್, ಪಡಿಕ್ಕಲ್ ಕೂಡ ಉತ್ತಮ ನಿರ್ವಹಣೆ ತೋರಿದ್ದರು.
ಪರ್ಪಲ್ ಕ್ಯಾಪ್ ಹೀರೋ ಚಹಲ್ ಕೂಡ ರಾಜಸ್ಥಾನ್ ತಂಡದಲ್ಲೇ ಇರುವುದು ವಿಶೇಷ. ಈ ಲೆಗ್‌ಸ್ಪಿನ್ನರ್ 24 ವಿಕೆಟ್ ಕೆಡವಿದ್ದಾರೆ. ಜತೆಗೆ ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆಡ್ ಮೆಕಾಯ್, ಆರ್. ಅಶ್ವಿನ್ ಬೌಲಿಂಗ್ ವಿಭಾಗದ ಅಪಾಯಕಾರಿ ಅಸ್ತ್ರಗಳು.
ವ್ಯತ್ಯಾಸ ಮಾಡೀತೇ ಚೆನ್ನೈ? :
ಚೆನ್ನೈ ಸತತ 2 ಪಂದ್ಯಗಳನ್ನು ಸೋತು ತನ್ನ ಅಂತಿಮ ಲೀಗ್ ಪಂದ್ಯವನ್ನು ಆಡಲಿಳಿಯುತ್ತಿದೆ. ಮುಂಬೈ ವಿರುದ್ಧ 5 ವಿಕೆಟ್, ಗುಜರಾತ್ ವಿರುದ್ಧ 7 ವಿಕೆಟ್‌ಗಳಿಂದ ಎಡವಿದೆ. “ಯೆಲ್ಲೋ ಬ್ರಿಗೇಡ್’ನ ವೈಫಲ್ಯಕ್ಕೆ ಕಾರಣಗಳನ್ನು ಅವಲೋಕಿಸಿ ಪ್ರಯೋಜನವಿಲ್ಲ. ಕೊನೆಯ ಅವಕಾಶದಲ್ಲಿ ಅದು ರಾಜಸ್ಥಾನವನ್ನು ಕೆಡವಿ ಅಂಕಪಟ್ಟಿಯಲ್ಲೇನಾದರೂ ವ್ಯತ್ಯಾಸ ಮಾಡೀತೇ ಎಂಬುದೊಂದು ಕುತೂಹಲ.