Advertisement

ಹೈದರಾಬಾದ್‌ಗೆ ದೂರದಲ್ಲಿ ಪ್ಲೇ ಆಫ್ ಆಸೆ; ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ ಗೆಲುವು

12:12 AM May 18, 2022 | Team Udayavani |

ಮುಂಬೈ: ಅತ್ಯಂತ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕವಾಗಿ ಗೆದ್ದಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಪ್ಲೇಆಫ್ ಪೈಪೋಟಿಯಲ್ಲಿ ಉಳಿದುಕೊಂಡಿದೆ.

Advertisement

ಆದರೂ ಅದರ ರನ್‌ದರ ಮೈನಸ್‌ನಲ್ಲಿರುವುದರಿಂದ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಅದು ತನ್ನ ಅಂತಿಮ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಭರ್ಜರಿಯಾಗಿ ಗೆದ್ದರೆ, ಡೆಲ್ಲಿ, ಆರ್‌ಸಿಬಿ ತಂತಮ್ಮ ಕೊನೆಯ ಪಂದ್ಯಗಳಲ್ಲಿ ಹೀನಾಯವಾಗಿ ಸೋತರೆ ಮಾತ್ರ ಹೈದರಾಬಾದ್‌ಗೆ ಒಂದು ಅವಕಾಶವಿದೆ.

ಮಂಗಳವಾರ ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟಿಗೆ 193 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 190 ರನ್‌ ಗಳಿಸಿತು. ಮುಂಬೈ ರೋಹಿತ್‌ ಶರ್ಮ (48), ಇಶಾನ್‌ ಕಿಶನ್‌ (43), ಟಿಮ್‌ ಡೇವಿಡ್‌ (46) ಅತ್ಯುತ್ತಮವಾಗಿ ಬ್ಯಾಟ್‌ ಮಾಡಿದರು. ಆದರೆ ಉಮ್ರಾನ್‌ ಮಲಿಕ್‌ (23ಕ್ಕೆ 3) ಅವರ ಪ್ರಬಲ ದಾಳಿಯಿಂದ ಮುಂಬೈ ಹಿಮ್ಮೆಟ್ಟಿತು.

ಹೈದರಾಬಾದ್‌ ಬೃಹತ್‌ ಮೊತ್ತ: ಬೃಹತ್‌ ಮೊತ್ತ ಗಳಿಸಬೇಕಾದ ಗುರಿಯಿಂದಲೇ ಬ್ಯಾಟಿಂಗ್‌ಗಿಳಿದ ಹೈದರಾಬಾದ್‌ಗೆ ರಾಹುಲ್‌ ತ್ರಿಪಾಠಿ, ಪ್ರಿಯಂ ಗರ್ಗ್‌ ಮತ್ತು ನಿಕೋಲಸ್‌ ಪೂರನ್‌ ನೆರವಾದರು.

ಆದರೆ ಹೈದರಾಬಾದ್‌ ಓಪನಿಂಗ್‌ ಮತ್ತೆ ವೈಫ‌ಲ್ಯ ಕಂಡಿತ್ತು. ಅಭಿಷೇಕ್‌ ಶರ್ಮ ಕೇವಲ 9 ರನ್‌ ಮಾಡಿ ಡೇನಿಯಲ್‌ ಸ್ಯಾಮ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಆದರೂ ಈ ಋತುವಿನಲ್ಲಿ 400 ರನ್‌ ಪೂರೈಸಿದ ಸಾಧನೆ ಶರ್ಮ ಅವರದ್ದಾಯಿತು. ಕೇನ್‌ ವಿಲಿಯಮ್ಸನ್‌ ಬದಲು ಇನಿಂಗ್ಸ್‌ ಆರಂಭಿಸಿದ ಪ್ರಿಯಂ ಗರ್ಗ್‌ ಮತ್ತು ಒನ್‌ಡೌನ್‌ನಲ್ಲಿ ಬಂದ ರಾಹುಲ್‌ ತ್ರಿಪಾಠಿ ಭರ್ಜರಿಯಾಗಿ ಬ್ಯಾಟ್‌ ಬೀಸತೊಡಗಿದರು. ಪವರ್‌ ಪ್ಲೇ ಅವಧಿಯಲ್ಲಿ ಸ್ಕೋರ್‌ 1 ವಿಕೆಟಿಗೆ 57ಕ್ಕೆ ಏರಿತು.

Advertisement

ತ್ರಿಪಾಠಿ ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ ಅವರನ್ನು ಟಾರ್ಗೆಟ್‌ ಮಾಡಿಕೊಂಡರು. ಗರ್ಗ್‌ 10 ರನ್‌ ಆಗಿದ್ದಾಗ ಜೀವದಾನ ಪಡೆದು ಇದರ ಲಾಭವೆತ್ತಿದರು. ಸಂಜಯ್‌ ಯಾದವ್‌, ಮಾಯಾಂಕ್‌ ಮಾರ್ಕಂಡೆ ಚೆನ್ನಾಗಿ ದಂಡಿಸಿಕೊಂಡರು. ಇನ್ನೇನು 10 ಓವರ್‌ ಪೂರ್ತಿಗೊಳ್ಳಲು ಒಂದು ಎಸೆತ ಇದೆ ಎನ್ನುವಾಗ ರಮಣದೀಪ್‌ ಸಿಂಗ್‌ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 26 ಎಸೆತಗಳಿಂದ 42 ರನ್‌ ಮಾಡಿದ ಗರ್ಗ್‌ ರಿಟರ್ನ್ ಕ್ಯಾಚ್‌ ನೀಡಿದರು. ಸಿಡಿಸಿದ್ದು 4 ಬೌಂಡರಿ, 2 ಸಿಕ್ಸರ್‌. ದ್ವಿತೀಯ ವಿಕೆಟಿಗೆ 7.1 ಓವರ್‌ಗಳಿಂದ 78 ರನ್‌ ಹರಿದು ಬಂತು.

ರಾಹುಲ್‌ ತ್ರಿಪಾಠಿ-ನಿಕೋಲಸ್‌ ಪೂರನ್‌ ಜೋಡಿ ಕೂಡ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಹತ್ತರ ಸರಾಸರಿಯಲ್ಲಿ ರನ್‌ ಹರಿದುಬರತೊಡಗಿತು. ತ್ರಿಪಾಠಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 15 ಓವರ್‌ ಅಂತ್ಯಕ್ಕೆ 2ಕ್ಕೆ 148 ರನ್‌ ಪೇರಿಸಿದ ಹೈದರಾಬಾದ್‌ ಬೃಹತ್‌ ಮೊತ್ತದ ಸೂಚನೆ ನೀಡಿತು. ಆದರೆ ಇಲ್ಲಿ ಮುಂಬೈ ವಿಕೆಟ್‌ ಬೇಟೆಯಲ್ಲಿ ತೊಡಗಿತು.

ತ್ರಿಪಾಠಿ-ಪೂರನ್‌ 3ನೇ ವಿಕೆಟಿಗೆ ಭರ್ತಿ 7 ಓವರ್‌ ನಿಭಾಯಿಸಿ 76 ರನ್‌ ಪೇರಿಸಿದರು. ತ್ರಿಪಾಠಿ ಕೇವಲ 44 ಎಸೆತಗಳಿಂದ 76 ರನ್‌ ಬಾರಿಸಿದರು.ಸಿಡಿಸಿದ್ದು 9 ಫೋರ್‌, 3 ಸಿಕ್ಸರ್‌. ಇದು ಪ್ರಸಕ್ತ ಋತುವಿನಲ್ಲಿ ಹೈದರಾಬಾದ್‌ ಪರ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆ. ಇದಕ್ಕೂ ಮುನ್ನ ಅಭಿಷೇಕ್‌ ಶರ್ಮ ಚೆನ್ನೈ ವಿರುದ್ಧ 75 ರನ್‌ ಹೊಡೆದಿದ್ದರು. ಪೂರನ್‌ ಗಳಿಕೆ 38 ರನ್‌. 22 ಎಸೆತಗಳ ಈ ಸೊಗಸಾದ ಆಟದಲ್ಲಿ 3 ಸಿಕ್ಸರ್‌, 2 ಬೌಂಡರಿ ಒಳಗೊಂಡಿತ್ತು. ಎರಡೇ ರನ್‌ ಅಂತರದಲ್ಲಿ ಈ 2 ವಿಕೆಟ್‌ ಉರುಳಿತು.

ಮಾರ್ಕಂಡೆ ಸೇರ್ಪಡೆ: ಮುಂಬೈ ತಂಡದಲ್ಲಿ 2 ಬದಲಾವಣೆ ಕಂಡುಬಂತು. ಹೃತಿಕ್‌ ಶೊಕೀನ್‌ ಮತ್ತು ಕುಮಾರ ಕಾರ್ತಿಕೇಯ ಅವರನ್ನು ಕೈಬಿಟ್ಟು ಮಾಯಾಂಕ್‌ ಮಾರ್ಕಂಡೆ ಹಾಗೂ ಸಂಜಯ್‌ ಯಾದವ್‌ ಅವರನ್ನು ಆಡಿಸಿತು. ಹೈದರಾಬಾದ್‌ ತಂಡದಲ್ಲೂ 2 ಪರಿವರ್ತನೆ ಸಂಭವಿಸಿತು. ಶಶಾಂಕ್‌ ಸಿಂಗ್‌ ಬದಲು ಪ್ರಿಯಂ ಗರ್ಗ್‌, ಮಾರ್ಕೊ ಜಾನ್ಸೆನ್‌ ಬದಲು ಅಫ್ಘಾನಿಸ್ತಾನದ ಪೇಸ್‌ ಬೌಲರ್‌ ಫ‌ಜಲ್‌ ಫಾರೂಖೀ ಆಡಲಿಳಿದರು.

ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌ 20 ಓವರ್‌, 193/6 (ರಾಹುಲ್‌ ತ್ರಿಪಾಠಿ 76, ಪ್ರಿಯಂ ಗರ್ಗ್‌ 42, ರಮಣ್‌ದೀಪ್‌ ಸಿಂಗ್‌ 20ಕ್ಕೆ 3). ಮುಂಬೈ 20 ಓವರ್‌ 190/7 (ರೋಹಿತ್‌ 48, ಟಿಮ್‌ ಡೇವಿಡ್‌ 46, ಉಮ್ರಾನ್‌ ಮಲಿಕ್‌ 23ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next