Advertisement

ಐಪಿಎಲ್ 2022: ಅಗ್ರಸ್ಥಾನವೇ ಗುಜರಾತ್‌ ಟೈಟಾನ್ಸ್‌ ಗುರಿ

01:01 AM May 15, 2022 | Team Udayavani |

ಮುಂಬಯಿ: ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಗುಜರಾತ್‌ ಮತ್ತು ಕೂಟದಿಂದ ನಿರ್ಗಮಿಸಿರುವ ಚೆನ್ನೈ ತಂಡಗಳು ರವಿವಾರದ ಮೊದಲ ಪಂದ್ಯದಲ್ಲಿ ಎದುರಾಗಲಿವೆ.

Advertisement

ಮೇಲ್ನೋಟಕ್ಕೆ ಇದು ಲೆಕ್ಕದ ಭರ್ತಿಯ ಪಂದ್ಯ. ಆದರೆ ಗುಜರಾತ್‌ಗೆ ಮಹತ್ವದ್ದು. ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ ಪ್ಲೇ ಆಫ್ ಸುತ್ತಿಗೆ ಲಗ್ಗೆ ಹಾಕಿರುವ ಹಾರ್ದಿಕ್‌ ಪಾಂಡ್ಯ ಪಡೆಯ ಮುಂದಿನ ಗುರಿಯೆಂದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವುದು. ಉಳಿದೆರಡೂ ಪಂದ್ಯಗಳನ್ನು ಗೆದ್ದರೆ ಈ ಯೋಜನೆ ಸಾಕಾರಗೊಳ್ಳಲಿದೆ. ಆಗ ಗುಜರಾತ್‌ ಅಂಕ 22ಕ್ಕೆ ಏರಲಿದೆ. ಬೇರೆ ಯಾವುದೇ ತಂಡಕ್ಕೂ 20, 18 ಅಂಕಗಳ ಗಡಿ ದಾಟಲು ಸಾಧ್ಯವಿಲ್ಲ.

ಗುಜರಾತ್‌ ಹೊರತುಪಡಿಸಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿರುವ ಏಕೈಕ ತಂಡವೆಂದರೆ ಲಕ್ನೋ. ಅಕಸ್ಮಾತ್‌ ಗುಜರಾತ್‌ ಒಂದನ್ನು ಸೋತರೆ, ಲಕ್ನೋ ಉಳಿದೆರಡೂ ಪಂದ್ಯಗಳನ್ನು ಗೆದ್ದರೆ ಇದು ಸಾಧ್ಯ. ಹೀಗಾಗಿ ಚೆನ್ನೈ ವಿರುದ್ಧ ಗೆಲ್ಲಲು ಗುಜರಾತ್‌ ಶಕ್ತಿಮೀರಿ ಪ್ರಯತ್ನಿಸುವುದರಲ್ಲಿ ಅನುಮಾನವಿಲ್ಲ.

ಗುಜರಾತ್‌ ಹಿಂದಿನೆರಡು ಮುಖಾಮುಖಿಗಳಲ್ಲಿ ಒಂದು ಸೋಲು, ಒಂದು ಗೆಲುವು ದಾಖಲಿಸಿದೆ. ಮುಂಬೈ ಎದುರು 5 ವಿಕೆಟ್‌ಗಳಿಂದ ಎಡವಿದರೆ, ಲಕ್ನೋ ಎದುರು 4ಕ್ಕೆ 144 ರನ್‌ ಗಳಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯವನ್ನು ಗೆದ್ದೊಡನೆ ಪಾಂಡ್ಯ ಬಳಗ ಪ್ಲೇ ಆಫ್ ತಲುಪಿತ್ತು.

ಗುಜರಾತ್‌ ಹಾರ್ಡ್‌ ಹಿಟ್ಟರ್ ಅಥವಾ ಟಿ20 ಸ್ಟಾರ್‌ ಆಟಗಾರರನ್ನು ಹೊಂದಿರುವ ತಂಡವೇನೂ ಅಲ್ಲ. ಆದರೆ ತಂಡವಾಗಿ ಅದು ತೋರ್ಪಡಿಸಿದ ನಿರ್ವಹಣೆ ಅಮೋಘ. ಹೀಗಾಗಿ ಗುಜರಾತ್‌ ಟೈಟಾನ್ಸ್‌ ಈ ಬಾರಿಯ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ಹಾರ್ದಿಕ್‌ ಪಾಂಡ್ಯ ನಾಯಕತ್ವ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಚೆನ್ನೈಗೆ ಪ್ರತಿಷ್ಠೆಯ ಪಂದ್ಯ
ಹಾಲಿ ಚಾಂಪಿಯನ್‌ ಚೆನ್ನೈಯದ್ದು ಇದಕ್ಕೆ ತದ್ವಿರುದ್ಧ ಆಟ. ಕೆಲವು ಸ್ಟಾರ್‌ ಆಟಗಾರರು ದೂರಗೊಂಡ ಪರಿಣಾಮ ಹಾಗೂ ಅರ್ಧದಷ್ಟು ಮಂದಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರ್ಪಡಿಸದೇ ಇದ್ದುದರಿಂದ ಚೆನ್ನೈಗೆ ಈ ಗತಿ ಬಂದಿದೆ. ರವೀಂದ್ರ ಜಡೇಜ ನಾಯಕತ್ವದಲ್ಲಿ ವಿಫ‌ಲರಾದದ್ದು, ಈಗ ತಂಡದಿಂದ ಬೇರ್ಪಟ್ಟಿದ್ದೂ ತಂಡಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ನಡುವೆ ಅಂಬಾಟಿ ರಾಯುಡು ಅವರ “ನಿವೃತ್ತಿ ಟ್ವೀಟ್‌’ ಕೂಡ ಸದ್ದು ಮಾಡಿದೆ. ಒಟ್ಟಾರೆ, ಚೆನ್ನೈ ತಂಡದಲ್ಲಿ ಯಾವುದೂ ಸರಿ ಇಲ್ಲ ಎಂಬುದು ಮಾತ್ರ ಸುಳ್ಳಲ್ಲ!

ಮುಂಬೈ ಎದುರಿನ ಹಿಂದಿನ ಪಂದ್ಯವನ್ನು ಜಯಿಸಿದ್ದೇ ಆದಲ್ಲಿ ಚೆನ್ನೈಗೆ ಮುಂದುವರಿಯುವ ಕ್ಷೀಣ ಅವಕಾಶವೊಂದಿತ್ತು. ಧೋನಿ ಪಡೆ ಈ ಅವಕಾಶವನ್ನು ಕಳೆದುಕೊಂಡಿದೆ. ಅಗ್ರಸ್ಥಾನಿ ಗುಜರಾತ್‌ಗೆ ಸೋಲುಣಿಸಿ ಪ್ರತಿಷ್ಠೆ ಕಾಯ್ದುಕೊಳ್ಳುವುದೊಂದೇ ಉಳಿದಿರುವ ಮಾರ್ಗ. ಆಗ, ಮೊದಲ ಸುತ್ತಿನಲ್ಲಿ ಅನುಭವಿಸಿದ 3 ವಿಕೆಟ್‌ ಸೋಲಿಗೆ ಸೇಡನ್ನೂ ತೀರಿಸಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next