Advertisement

ಈ ಐಪಿಎಲ್‌ನ ಕೊನೆಯ ಕೆಲವು ಪಂದ್ಯಗಳಲ್ಲಿ ತನ್ನ ಫಾರ್ಮ್ ಬಗ್ಗೆ ನಿರಾಶೆಯಾಗಿದೆ: ಬಟ್ಲರ್‌

05:29 PM May 24, 2022 | Team Udayavani |

ಕೋಲ್ಕತಾ: ಈ ಐಪಿಎಲ್‌ನ ಕೊನೆಯ ಕೆಲವು ಪಂದ್ಯಗಳಲ್ಲಿ ತನ್ನ ಫಾರ್ಮ್ ಬಗ್ಗೆ ನಿರಾಶೆಯಾಗಿದೆ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ಸ್ಟಾರ್‌ ಆಟಗಾರ ಜಾಸ್‌ ಬಟ್ಲರ್‌ ಹೇಳಿದ್ದಾರೆ. ಆದರೆ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಪಡೆದ ಆತ್ಮವಿಶ್ವಾಸವನ್ನು ಪ್ಲೇ ಆಫ್ ಹಂತದಲ್ಲೂ ಮುಂದುವರಿಸಲು ಬಯಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Advertisement

ಈ ಋತುವಿನಲ್ಲಿ ಬಟ್ಲರ್‌ ಭರ್ಜರಿ ಆಟದ ಪ್ರದರ್ಶನ ನೀಡಿದ್ದಾರೆ. ಆಡಿದ ಪಂದ್ಯಗಳಿಂದ ಮೂರು ಶತಕ ಮತ್ತು ಮೂರು ಅರ್ಧಶತಕ ಸಹಿತ 147 ಸ್ಟ್ರೈಕ್‌ ರೇಟ್‌ನೊಂದಿಗೆ 629 ರನ್‌ ಪೇರಿಸಿದ್ದಾರೆ. ಆದರೆ ಲೀಗ್‌ ಹಂತ ಮುಗಿಯುವ ವೇಳೆ ಅವರ ಬ್ಯಾಟಿಂಗ್‌ ಅತ್ಯಂತ ಕಳಪೆಯಾಗಿತ್ತು. ಕೊನೆಯ ಮೂರು ಪಂದ್ಯಗಳಲ್ಲಿ ಅವರು 2, 2 ಮತ್ತು 7 ರನ್‌ ಬಾರಿಸಿದ್ದರು.

ಐಪಿಎಲ್‌ನಲ್ಲಿ ನನ್ನ ಭರ್ಜರಿ ಫಾರ್ಮ್ ನೋಡಿ ನಿಜವಾಗಿಯೂ ರೋಮಾಂಚನಗೊಂಡಿದ್ದೇನೆ. ಆದರೆ ಕೊನೆಯ ಕೆಲವು ಪಂದ್ಯಗಳಲ್ಲಿ ಕಳಪೆಯಾಗಿ ಆಡಿದ್ದರಿಂದ ನಿರಾಶೆಯಾಗಿದೆ. ಎಂದು ಪ್ಲೇ ಆಫ್ ಪಂದ್ಯದ ಮೊದಲು 31ರ ಹರೆಯದ ಬಟ್ಲರ್‌ ಹೇಳಿದ್ದಾರೆ.

ಲೀಗ್‌ ಹಂತದಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿ ಪ್ಲೇ ಆಫ್ಗೆ ತೇರ್ಗಡೆಯಾಗಿದೆ. ಮಂಗಳವಾರ ನಡೆಯುವ ಮೊದಲ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್‌ ಅಗ್ರಸ್ಥಾನಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲಿದೆ.

ಕಲಿಕೆ ನಿರಂತರ: ಸಂಜು ಸ್ಯಾಮ್ಸನ್‌
ಕೋಲ್ಕತಾ, ಮೇ 23: ನಾಯಕ ಸಂಜು ಸ್ಯಾಮ್ಸನ್‌ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎರಡನೇ ಬಾರಿ ಪೂರ್ಣ ಋತುವಿಗೆ ಮುನ್ನಡೆಸಿದ್ದಾರೆ. ಕಲಿಯುವುದನ್ನು ಎಂದಿಗೂ ನಿಲ್ಲಿಸಿಲ್ಲ ಮತ್ತು ಸಂವಹನವು ನಾಯಕತ್ವದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಸ್ಯಾಮ್ಸನ್‌ ಹೇಳಿದ್ದಾರೆ.

Advertisement

ನಿರಂತರ ಕಲಿಕೆಯಿಂದಾಗಿ ಬ್ಯಾಟ್ಸ್‌ಮನ್‌ ಮತ್ತು ನಾಯಕನಾಗಿ ಬಹಳಷ್ಟು ಅಭಿವೃದ್ಧಿ ಹೊಂದಿದ್ದೇನೆ. ತಂಡದಲ್ಲಿ ವಿಶೇಷವಾಗಿ ಬಹಳಷ್ಟು ಅನುಭವಿ ಹೊಂದಿರುವ ಆಟಗಾರರು ಇರುವ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿಜಯವಾಗಿಯೂ ಆನಂದಿಸುತ್ತಿದ್ದೇನೆ ಎಂದವರು ತಿಳಿಸಿದರು.

ನೀವು ತಂಡವನ್ನು ಮುನ್ನಡೆಸುವ ವೇಳೆ ಒಂದು ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಅತೀ ಮುಖ್ಯವೆಂಬುದು ನನ್ನ ಅಭಿಪ್ರಾಯ. ಒತ್ತಡದ ಸಂದರ್ಭಗಳಲ್ಲಿ ಆಟಗಾರರ ಅಭಿಪ್ರಾಯವನ್ನು ಹೇಳಲು ನಾವು ಅವಕಾಶ ಕಲ್ಪಿಸುತ್ತೇವೆ. ನಾನು ಬಹಳಷ್ಟು ಮಾಹಿತಿ, ಸಲಹೆಗಳನ್ನು ಪಡೆಯುತ್ತೇನೆ. ತಂಡದ ಉತ್ತಮ ಸಾಧನೆಗಾಗಿ ಪ್ರತಿಯೊಬ್ಬರು ಮುಕ್ತವಾಗಿ ಕೊಡುಗೆ ನೀಡುವುದನ್ನು ನಾನು ಇಷ್ಟಪಡುತ್ತೇನೆ ಎಂದು ಸ್ಯಾಮ್ಸನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next