Advertisement

ಫೈನಲ್‌ ಮೊದಲು ಸಮಾರೋಪ ಸಮಾರಂಭ; ರಣವೀರ್‌ ಸಿಂಗ್‌, ಎ.ಆರ್‌, ರೆಹಮಾನ್‌ರಿಂದ ಕಾರ್ಯಕ್ರಮ

10:28 PM May 28, 2022 | Team Udayavani |

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ಐಪಿಎಲ್‌ ಕೂಟದ ಫೈನಲ್‌ ಹೋರಾಟ ನಡೆಯಲಿದೆ. ಹೊಸ ತಂಡವಾದ ಗುಜರಾತ್‌ ಟೈಟಾನ್ಸ್‌ ತಂಡವು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ಫೈನಲ್‌ ಪಂದ್ಯ ಆರಂಭವಾಗುವ ಮೊದಲು ಅದ್ದೂರಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

Advertisement

ಈ ಮೊದಲು ಕೋವಿಡ್‌ನಿಂದಾಗಿ ಸಮಾರೋಪ ನಡೆಯುವುದು ಅನುಮಾನವಾಗಿತ್ತು.2019ರ ಐಪಿಎಲ್‌ ಬಳಿಕ ಭಾರತದಲ್ಲಿ ಐಪಿಎಲ್‌ ನಡೆಯುವ ವೇಳೆ ಇದು ಮೊದಲ ಸಮಾರೋಪ ಸಮಾರಂಭವಾಗಿದೆ. 2019ರಲ್ಲಿ ಮುಂಬೈ ಇಂಡಿಯನ್ಸ್‌ ಪ್ರಶಸ್ತಿ ಜಯಿಸಿತ್ತು. ಆಬಳಿಕ ಕೋವಿಡ್‌ನಿಂದಾಗಿ ಐಪಿಎಲ್‌ ಕೂಟ ಯುಎಇಗೆ ಸ್ಥಳಾಂತರಗೊಂಡಿತ್ತು. ಇದೀಗ ಮೂರು ವರ್ಷಗಳ ಬಳಿಕ ಶ್ರೀಮಂತ ಕೂಟದ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವ ಸೌಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದೆ.ಮಾತ್ರವಲ್ಲದೇ ಸಮಾರೋಪ ಸಮಾರಂಭದ ಸಂಭ್ರವೂ ಅವರಿಗೆಲ್ಲ ಸಿಗಲಿದೆ.

ಸಮಾರೋಪ ಸಮಾರಂಭದಲ್ಲಿ ಬಾಲಿವುಡ್‌ನ‌ ದೊಡ್ಡ ಕಲಾವಿದರು ಭಾಗವಹಿಸಿ ಕಾರ್ಯಕ್ರಮ ನೀಡಲಿದ್ದಾರೆ. ಈ ವರ್ಷ ನಡೆಯುವ ಸಮಾರೋಪದಲ್ಲಿ ಬಾಲಿವುಡ್‌ ತಾರೆ ರಣವೀರ್‌ ಸಿಂಗ್‌ ಮತ್ತು ಆಸ್ಕರ್‌ ವಿಜೇತ ಸಂಗೀತಗಾರ ಎ.ಆರ್‌. ರೆಹಮಾನ್‌ ಕಾರ್ಯಕ್ರಮ ನೀಡಲಿದ್ದಾರೆ. ಝಾರ್ಖಂಡ್‌ನ‌ ಪ್ರಸಿದ್ಧ ಛಾವು ನೃತ್ಯವೂ ಅಭಿಮಾನಿಗಳ ಗಮನ ಸೆಳೆಯಲಿದೆ. 10 ಸದಸ್ಯರ ತಂಡ ನೃತ್ಯ ಕಾರ್ಯಕ್ರಮ ನೀಡಲಿದೆ.

ಗಂಗೂಲಿ ಉಪಸ್ಥಿತಿ
ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಮಂಡಳಿಯ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ಇಷ್ಟರವರೆಗೆ ಸಾಗಿದ ಪ್ರಯಾಣದ ಪ್ರದರ್ಶನ ಇರಲಿದೆ.

Advertisement

ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ಗೆ ಇದು ಮೊದಲ ಫೈನಲ್‌. ತನ್ನ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದರೆ ಇದು ಗುಜರಾತ್‌ ತಂಡದ ಅದ್ಭುತ ಸಾಧನೆಯಾಗಲಿದೆ.

ಇದೇ ವೇಳೆ ಸಂಜು ಸ್ಯಾಮ್ಸನ್‌ ನೇತೃತ್ವದ ರಾಜಸ್ಥಾನ್‌ ರಾಯಲ್ಸ್‌ ಐದ್ಘಾಟನಾ ಐಪಿಎಲ್‌ ಗೆದ್ದ ಬಳಿಕ ಇದೇ ಮೊದಲ ಬಾರಿ ಫೈನಲಿನಲ್ಲಿ ಆಡುತ್ತಿದೆ. ಉದ್ಘಾಟನಾ ಐಪಿಎಲ್‌ ಗೆದ್ದ ರಾಜಸ್ಥಾನ್‌ ತಂಡವನ್ನು ಶೇನ್‌ ವಾರ್ನ್ ಮುನ್ನಡೆಸಿದ್ದರು.

ವಿಜೇತರಿಗೆ 20 ಕೋಟಿ ರೂ.
2008ರ ಚೊಚ್ಚಲ ಐಪಿಎಲ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ರಾಜಸ್ಥಾನ್‌ ರಾಯಲ್ಸ್‌ಗೆ ಸಿಕ್ಕಿದ ಬಹುಮಾನದ ಮೊತ್ತ ಕೇವಲ 4.8 ಕೋಟಿ ರೂ. ರನ್ನರ್ ಅಪ್‌ಗೆ 2.4 ಕೋಟಿ ರೂ. ಲಭಿಸಿತ್ತು. ತೃತೀಯ ಸ್ಥಾನಿಗೆ 1.2 ಕೋಟಿ ರೂ. ನೀಡಲಾಗಿತ್ತು.

ವಿಶ್ವದ ಈ ಕ್ಯಾಶ್‌ ರಿಚ್‌ ಕ್ರಿಕೆಟ್‌ ಲೀಗ್‌ ಆರಂಭಗೊಂಡು 15 ವರ್ಷ ಉರುಳಿದೆ. ಹಾಗೆಯೇ ಬಹುಮಾನದ ಮೊತ್ತದಲ್ಲೂ ಏರಿಕೆ ಆಗುತ್ತಲೇ ಇದೆ.

ಈ ವರ್ಷದ ಚಾಂಪಿಯನ್‌ ತಂಡಕ್ಕೆ ಲಭಿಸುವ ಮೊತ್ತ 20 ಕೋಟಿ ರೂ. ಇದು ಕಳೆದ ಸಲದಷ್ಟೇ ಮೊತ್ತ. ಆದರೆ ರನ್ನರ್‌ ಅಪ್‌ ತಂಡಕ್ಕೆ ನೀಡುವ ಬಹುಮಾನದ ಮೊತ್ತದಲ್ಲಿ 50 ಲಕ್ಷ ರೂ. ಏರಿಕೆಯಾಗಿದೆ. 12.5 ಕೋಟಿ ರೂ. ಬದಲು 13 ಕೋಟಿ ರೂ. ಸಿಗಲಿದೆ. ತೃತೀಯ ಸ್ಥಾನಿ ಆರ್‌ಸಿಬಿಗೆ ಸಿಕ್ಕಿದ್ದು 7 ಕೋಟಿ ರೂ.

ಐಪಿಎಲ್‌ ಬಹುಮಾನದ ಯಾದಿ
ಪ್ರಶಸ್ತಿ                ಮೊತ್ತ
ಚಾಂಪಿಯನ್‌ 20 ಕೋ. ರೂ.
ರನ್ನರ್ ಅಪ್‌ 13 ಕೋ. ರೂ.
ತೃತೀಯ ಸ್ಥಾನ (ಆರ್‌ಸಿಬಿ) 7 ಕೋ.ರೂ.
4ನೇ ಸ್ಥಾನ (ಲಕ್ನೋ) 6.5 ಕೋ. ರೂ.
ಉದಯೋನ್ಮುಖ ಆಟಗಾರ 20 ಲಕ್ಷ ರೂ.
ಆರೇಂಜ್‌ ಕ್ಯಾಪ್‌ 15 ಲಕ್ಷ ರೂ.

Advertisement

Udayavani is now on Telegram. Click here to join our channel and stay updated with the latest news.

Next