ಹೊಸದಿಲ್ಲಿ: ಹದಿಮೂರನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ಗೆ (ಇಸಿಬಿ) ಬಿಸಿಸಿಐ ಅಂಗೀಕಾರ ಪತ್ರವನ್ನು ರವಾನಿಸಿದೆ.
ಇದನ್ನು ಸ್ವೀಕರಿಸಿದ್ದಾಗಿ ಇಸಿಬಿ ಹೇಳುವುದರೊಂದಿಗೆ 2020ನೇ ಸಾಲಿನ ಐಪಿಎಲ್ ಸಂಘಟನೆಗೆ ಅಧಿಕೃತ ಚಾಲನೆ ಲಭಿಸಿದಂತಾಗಿದೆ.
ಕೋವಿಡ್ 19 ಕಾರಣದಿಂದಾಗಿ ಭಾರತದಲ್ಲಿ ಐಪಿಎಲ್ ನಡೆಸುವುದು ಅಸಾಧ್ಯವಾದರೆ ಅದನ್ನು ತಾನು ಸಂಘಟಿಸುವುದಾಗಿ ಯುಎಇ ಮುಂದೆ ಬಂದಿತ್ತು.
ಆದರೆ ಇದಕ್ಕೆ ಬಿಸಿಸಿಐ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮೂರು ದಿನಗಳ ಹಿಂದೆ ಐಪಿಎಲ್ ಚೇರ್ಮನ್ ಬೃಜೇಶ್ ಪಟೇಲ್ ಕೂಟದ ದಿನಾಂಕವನ್ನು ಪ್ರಕಟಿಸುವುದರ ಜತೆಗೆ ಇದನ್ನು ಪೂರ್ಣ ಪ್ರಮಾಣದಲ್ಲಿ ಯುಎಇಯಲ್ಲಿ ನಡೆಸಲಾಗುವುದು ಎಂದಿದ್ದರು.
Related Articles
ಇದನ್ನು ಯುಎಇ ಸ್ವಾಗತಿಸಿತ್ತು. ಆದರೆ ರವಿವಾರವಷ್ಟೇ ಪ್ರತಿಕ್ರಿಯಿಸಿದ ಇಸಿಬಿ ಪ್ರಧಾನ ಕಾರ್ಯದರ್ಶಿ ಮುಬಾಶಿರ್ ಉಸ್ಮಾನಿ, ಕೂಟಕ್ಕೆ ನಾವು ಸಜ್ಜಾಗಿದ್ದೇವೆ, ಆದರೆ ಬಿಸಿಸಿಐಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದಿದ್ದರು. ಇದೀಗ ಇತ್ಯರ್ಥಗೊಂಡಿದೆ. ಅಂಗೀಕಾರ ಪತ್ರ ರವಾನಿಸಿದ್ದಾಗಿ ಬೃಜೇಶ್ ಪಟೇಲ್ ನೀಡಿದ ಹೇಳಿಕೆಯನ್ನು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
‘ನಮಗೆ ಬಿಸಿಸಿಐಯಿಂದ ಪತ್ರ ಬಂದಿದೆ. ಇನ್ನು ಭಾರತ ಸರಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ನಾವು ಮುಂದುವರಿಯಲಿದ್ದೇವೆ’ ಎಂದು ಉಸ್ಮಾನಿ ಹೇಳಿದ್ದಾರೆ.
ಸುರಕ್ಷಿತ ಅಭ್ಯಾಸ
ಐಪಿಎಲ್‌ನಲ್ಲಿ ಭಾಗವಹಿಸಲಿರುವ ಎಲ್ಲ ತಂಡಗಳ ಆಟಗಾರರು ಜೈವಿಕ ಸುರಕ್ಷಾ ವಲಯದಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಬೃಜೇಶ್ ಪಟೇಲ್ ಹೇಳಿದ್ದಾರೆ. ಪಂದ್ಯಾವಳಿಗೂ ಮುನ್ನ ಆಟಗಾರರೆಲ್ಲ ಯುಎಇಯಲ್ಲಿ 3ರಿಂದ 4 ವಾರಗಳ ತನಕ ಅಭ್ಯಾಸ ಮಾಡುವರೆಂದೂ ಪಟೇಲ್ ತಿಳಿಸಿದರು.
ಮೂಲ ವೇಳಾಪಟ್ಟಿ ಪ್ರಕಾರ ಈ ವರ್ಷದ ಐಪಿಎಲ್ ಮಾ. 29ರಂದು ಮುಂಬೈ-ಚೆನ್ನೈ ಮುಖಾಮುಖಿಯೊಂದಿಗೆ ಆರಂಭವಾಗಬೇಕಿತ್ತು. ಆದರೆ ಕೋವಿಡ್ 19ನಿಂದಾಗಿ ಕೂಟ ಮುಂದೂಡಲ್ಪಟ್ಟಿತು.
ಆಸ್ಟ್ರೇಲಿಯದಲ್ಲಿ ನಡೆಯಬೇಕಿದ್ದ ವರ್ಷಾಂತ್ಯದ ಟಿ20 ವಿಶ್ವಕಪ್ ಮುಂದೂಡಲ್ಪಟ್ಟಿದ್ದರಿಂದ ಐಪಿಎಲ್‌ಗೆ ಕಿಂಡಿಯೊಂದು ತೆರೆಯಲ್ಪಟ್ಟಿತು. ಅದರಂತೆ 51 ದಿನಗಳ ಈ ಹಣಾಹಣಿಯನ್ನು ಸೆ. 19ರಿಂದ ನ. 8ರ ತನಕ ಯುಎಇಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.