Advertisement

ಹೃತಿಕ್‌,ಪ್ರಭು,ತಮನ್ನಾಗುಂಗು; ಮಿಕಾ ಸಾಂಗು

06:00 AM Apr 08, 2018 | |

ಮುಂಬಯಿ: ಶನಿವಾರ ಸಂಜೆ ಮುಂಬಯಿಯ ವಾಂಖೇಡೆ ಮೈದಾನದಲ್ಲಿ ಸಂಗೀತ, ನೃತ್ಯಗಳ ಸಂಭ್ರಮ. ಇದಕ್ಕೆ ಕಾರಣವೇನೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ಐಪಿಎಲ್‌ 11ರ ಉದ್ಘಾಟನಾ ಸಮಾರಂಭ. 

Advertisement

ಪ್ರಭುದೇವ್‌, ಹೃತಿಕ್‌ ರೋಷನ್‌, ತಮನ್ನಾ ಭಾಟಿಯಾ, ಜಾಕ್ವೆಲಿನ್‌ ಫೆರ್ನಾಂಡಿಸ್‌, ವರುಣ್‌ ಧವನ್‌ ನೃತ್ಯ, ಮಿಕಾ ಸಿಂಗ್‌ ಗಾಯನದಲ್ಲಿ ಕ್ರಿಕೆಟ್‌ ಅಭಿಮಾನಿಗಳು ತೇಲಿ ಹೋದರು. ವೇದಿಕೆ ಮೇಲೆ ಮೊದಲು ಕಾಣಿಸಿಕೊಂಡಿದ್ದು ವರುಣ್‌ ಧವನ್‌. ಅವರದ್ದೇ ಸಿನಿಮಾದ ಕೆಲವು ಗೀತೆಗಳಿಗೆ ಹೆಜ್ಜೆ ಹಾಕಿದರು. ಪ್ರೇಕ್ಷಕರು ಇದರ ಗುಂಗಿನಲ್ಲಿ ಇದ್ದಾಗಲೇ ಭಾರತದ ಮೈಕಲ್‌ ಜಾಕ್ಸನ್‌ ಎನಿಸಿಕೊಂಡಿರುವ ಪ್ರಭುದೇವ್‌ ವೇದಿಕೆ ಮೇಲೇರಿ ಕಾಲು ಕುಣಿಸಿದರು. ಕಡೆಗೆ ಇಬ್ಬರೂ ಒಟ್ಟಿಗೆ ಕುಣಿದು ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದರು.

ಆಗ ಬಂದವರು ತಮನ್ನಾ ಭಾಟಿಯಾ. ತಮಿಳು, ತೆಲುಗು ಚಿತ್ರರಂಗದ ಹೆಸರಾಂತ ನಾಯಕಿಯಾಗಿರುವ ಆಕೆ ನೃತ್ಯದಲ್ಲೂ ಎತ್ತಿದ ಕೈ. ಅವರು “ಬಾಜಿರಾವ್‌ ಮಸ್ತಾನಿ’ ಸೇರಿ ಇನ್ನೊಂದಷ್ಟು ಹಾಡುಗಳಿಗೆ ಬಳ್ಳಿಯಂತೆ ಬಳುಕಿ ವೇದಿಕೆಯಿಳಿದರು. ಮುಂದೆ ಬಂದಿದ್ದು ಜಾಕ್ವೆಲಿನ್‌ ಫೆರ್ನಾಂಡಿಸ್‌.

ಅಂತಿಮವಾಗಿ ಎಲ್ಲರೂ ಬಹುಹೊತ್ತಿನಿಂದ ಕಾತುರರಾಗಿ ಕಾಯುತ್ತಿದ್ದ ಹೃತಿಕ್‌ ರೋಷನ್‌ ಕಾಣಿಸಿಕೊಂಡರು. ಇವರೂ ತಮ್ಮದೇ ಸಿನಿಮಾದ ಕೆಲ ಹಾಡು ಸೇರಿ ಇನ್ನೊಂದಷ್ಟು ಗೀತೆಗಳಿಗೆ ಕಾಲುಗಳನ್ನು ಕುಣಿದಾಡಿಸಿದರು. ಈ ಅಬ್ಬರದಲ್ಲಿ ಪ್ರೇಕ್ಷಕರು ಸೇರಿಕೊಂಡರು. ಮೈದಾನದಲ್ಲಿ ಕುಳಿತಿದ್ದ ಪ್ರೇಕ್ಷಕರೂ ಈ ಗೀತೆಗಳಿಗೆ ನೃತ್ಯ ಮಾಡಿದ್ದು ವಿಶೇಷ. ಇದಕ್ಕೆ ಕಾರಣ ತಮಗೆ ನೀಡಿದ್ದ ಆಸನದಲ್ಲಿ ಇಕ್ಕಟ್ಟಿನ ನಡುವೆಯೇ ಅವರೂ ಉದ್ಘಾಟನಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ನರ್ತಕರಿಗೆ ಭರ್ಜರಿ ಹಣ
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಾಲಿವುಡ್‌ ನಟ, ನಟಿಯರು ಭರ್ಜರಿ ಹಣ ಪಡೆದಿದ್ದಾರೆಂದು ಹೇಳಲಾಗಿದೆ. ಕೇವಲ 10 ನಿಮಿಷದ ಕಾರ್ಯಕ್ರಮಕ್ಕಾಗಿ ತಮನ್ನಾ ಭಾಟಿಯಾ 50 ಲಕ್ಷ ರೂ. ಪಡೆದಿದ್ದಾರೆ. ಕೊನೆಯವರಾಗಿ ಕಾಣಿಸಿಕೊಂಡ ಹೃತಿಕ್‌ ರೋಷನ್‌ 7 ಕೋಟಿ ರೂ. ಪಡೆದಿದ್ದಾರೆಂದು ಹೇಳಲಾಗಿದೆ. ಪ್ರಭುದೇವ್‌ಗೆ ಕೂಡ ಭಾರೀ ಮೊತ್ತ ನೀಡಲಾಗಿದೆಯೆಂದು ಹೇಳಲಾಗಿದ್ದರೂ ಎಷ್ಟು ಮೊತ್ತವೆನ್ನುವುದು ಇನ್ನೂ ಖಚಿತವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next