Advertisement

ಬೆಂಗಳೂರಿನಲ್ಲಿ ಮಳೆ ಆರ್‌ಸಿಬಿ ಪಂದ್ಯ ರದ್ದು

02:26 PM Apr 26, 2017 | Team Udayavani |

ಬೆಂಗಳೂರು: ಸತತವಾಗಿ ಸುರಿಯುತ್ತಲೇ ಇದ್ದ ಮಳೆಯ ಕಾರಣ ಇಲ್ಲಿನ ‘ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಮಂಗಳವಾರ ರಾತ್ರಿ ನಡೆಯಬೇಕಿದ್ದ ಆತಿಥೇಯ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್‌ ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳ ನಡುವಿನ ದ್ವಿತೀಯ ಸುತ್ತಿನ ಐಪಿಎಲ್‌ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರಿಂದ ಎರಡೂ ತಂಡಗಳಿಗೆ ಒಂದೊಂದು ಅಂಕ ಹಂಚಲಾಯಿತು.

Advertisement

ಇದು 10ನೇ ಐಪಿಎಲ್‌ನಲ್ಲಿ ರದ್ದುಗೊಂಡ ಮೊದಲ ಪಂದ್ಯ. ಮಳೆಯಿಂದ ಟಾಸ್‌ ಹಾರಿಸುವ, ತಂಡಗಳನ್ನು ಅಂತಿಮಗೊಳಿಸುವ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ಅಂತಿಮವಾಗಿ ರಾತ್ರಿ 11 ಗಂಟೆಗೆ ಪಂದ್ಯ ರದ್ದುಗೊಂಡಿದೆ ಎಂದು ಘೋಷಿಸಲಾಯಿತು. ಈ ಒಂದು ಅಂಕದಿಂದಾಗಿ ಅಂತಿಮ ಸ್ಥಾನದಲ್ಲಿದ್ದ ಆರ್‌ಸಿಬಿ ಈಗ 6ನೇ ಸ್ಥಾನಕ್ಕೆ ಏರಿದೆ. ಹೈದರಾಬಾದ್‌ 3ನೇ ಸ್ಥಾನದಲ್ಲೇ ನೆಲೆಸಿದೆ.

ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪಾಲಿಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿತ್ತು. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ವಿರುದ್ಧ ರನ್‌ ಚೇಸಿಂಗ್‌ನಲ್ಲಿ ಸಂಪೂರ್ಣ ಎಡವಿ, ಐಪಿಎಲ್‌ನಲ್ಲೇ ಅತ್ಯಂತ ನಿಕೃಷ್ಟ ವಾದ 49 ರನ್ನಿಗೆ ಉದುರಿ ಕಂಗಾಲಾಗಿದ್ದ ಆರ್‌ಸಿಬಿ ತವರಿನ ಈ ಮುಖಾಮುಖೀಯಲ್ಲಿ ಗೆಲುವಿನ ಲಯಕ್ಕೆ ಮರಳಲೇಬೇಕಿತ್ತು. ಪ್ಲೇ-ಆಫ್ ಸುತ್ತು ಪ್ರವೇಶಿಸಬೇಕಾದರೆ ಇಲ್ಲಿಂದಲೇ ಗೆಲುವಿನ ಟ್ರ್ಯಾಕ್‌ ಹತ್ತಬೇಕಿತ್ತು. 

8 ಪಂದ್ಯಗಳಲ್ಲಿ ಕೇವಲ ಎರಡನ್ನು ಗೆದ್ದಿರುವ ರಾಯಲ್‌ ಚಾಲೆಂಜರ್ಸ್ ಪ್ಲೇ-ಆಫ್ ಪ್ರವೇಶಿಸಬೇಕಾದರೆ ಉಳಿದ 6 ಸ್ಪರ್ಧೆಗಳಲ್ಲಿ ಕನಿಷ್ಠ ಐದರಲ್ಲಿ ಗೆಲುವು ಸಾಧಿಸಲೇ ಬೇಕಾದ ಒತ್ತಡದಲ್ಲಿದೆ. 4ನೇ ಸ್ಥಾನಿಯಾಗಿ ಮುಂದಿನ ಸುತ್ತಿಗೆ ಹೋಗಬೇಕಾದರೂ ಕೈಯಲ್ಲಿ 14 ಅಂಕ ಇರಲೇಬೇಕಾಗುತ್ತದೆ. ಈ ಬಾರಿಯ ಐಪಿಎಲ್‌ ಆರ್‌ಸಿಬಿ-ಹೈದರಾಬಾದ್‌ ಕದನದೊಂದಿಗೆ ಮೊದಲ್ಗೊಂಡಿತ್ತು. ಇದನ್ನು ವಾರ್ನರ್‌ ಪಡೆ 35 ರನ್ನುಗಳಿಂದ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next