Advertisement

ಇಂದು ಪುಣೆ ಮತ್ತು ಮುಂಬೈ ನಡುವೆ 10ನೇ ಐಪಿಎಲ್‌ ಪ್ರಶಸ್ತಿ ಸಮರ

03:45 AM May 21, 2017 | Team Udayavani |

ಹೈದರಾಬಾದ್‌: 47 ದಿನಗಳ ಐಪಿಎಲ್‌ ಟಿ20 ಸಮರಕ್ಕೆ ಭಾನುವಾರವೇ ಅಂತ್ಯ. ಐಪಿಎಲ್‌ 10ನೇ ಆವೃತ್ತಿಯ ಕಿರೀಟವನ್ನು ಮೊದಲ ಬಾರಿಗೆ ಫೈನಲ್‌ಗೆ ಲಗ್ಗೆ ಹಾಕಿರುವ ಪುಣೆ ಏರಿಸಿಕೊಳ್ಳುತ್ತಾ? ಇಲ್ಲವೆ, 4ನೇ ಬಾರಿಗೆ ಫೈನಲ್‌ಗೇರಿರುವ ಮುಂಬೈ ಪಡೆಯುತ್ತಾ? ಅನ್ನುವ ಪ್ರಶ್ನೆಗೆ ಉತ್ತರ ಮಾತ್ರ ಬಾಕಿ ಉಳಿದಿದೆ.

Advertisement

ಎರಡೂ ತಂಡದಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ದಂಡು ಜತೆಗೆ ಯುವ ಆಟಗಾರರ ಪಡೆ ಇದೆ. ಹೀಗಾಗಿ ಬಲಾಬಲದ ದೃಷ್ಟಿಯಲ್ಲಿ ನೋಡಿದರೆ ಭರ್ಜರಿ ಹೋರಾಟವನ್ನು ನಿರೀಕ್ಷಿಸಬಹುದು. ಈ ಮುನ್ನ ಇದೇ ಐಪಿಎಲ್‌ನಲ್ಲಿ 3 ಬಾರಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ಮತ್ತು ಮುಂಬೈ ಇಂಡಿಯನ್ಸ್‌ ಮುಖಾಮುಖೀಯಾಗಿವೆ. ಎಲ್ಲಾ ಪಂದ್ಯದಲ್ಲೂ ಪುಣೆ ತಂಡವೇ ಗೆದ್ದಿರುವುದು ವಿಶೇಷ.

ಪುಣೆಗೆ ದಿಗ್ಗಜರ ಬಲ: ಕಳೆದ ವರ್ಷದ ಐಪಿಎಲ್‌ ಆವೃತ್ತಿಯಲ್ಲಿ ಪ್ರವೇಶ ಪಡೆದಿರುವ ಪುಣೆ ತಂಡಕ್ಕೆ ಇದು 2ನೇ ಆವೃತ್ತಿ. ಕಳೆದ ಆವೃತ್ತಿಯಲ್ಲಿ ದಿಗ್ಗಜ ಆಟಗಾರರಿದ್ದರೂ ಕಳಪೆ ಪ್ರದರ್ಶನದಿಂದ ಲೀಗ್‌ನಲ್ಲಿಯೇ ಹೊರಬಿದ್ದಿತ್ತು. ಆದರೆ ಈ ಬಾರಿ ಆಟಗಾರರ ಭರ್ಜರಿ ಪ್ರದರ್ಶನದ ನೆರವಿನಿಂದ ಫೈನಲ್‌ಗೆ ಲಗ್ಗೆ ಹಾಕಿದೆ.

ಬ್ಯಾಟಿಂಗ್‌ ವಿಭಾಗದಲ್ಲಿ ನಾಯಕ ಸ್ಟೀವನ್‌ ಸ್ಮಿತ್‌ (421), ಎಂ.ಎಸ್‌.ಧೋನಿ(280), ಅಜಿಂಕ್ಯ ರಹಾನೆ (338), ರಾಹುಲ್‌ ತ್ರಿಪಾಠಿ (388), ಮನೋಜ್‌ ತಿವಾರಿ (317) ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಎಂತಹ ಪಂದ್ಯವನ್ನಾದರೂ ತಿರುಗಿಸುವ ತಾಕತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗಿದೆ. ಗ್ರೇಟ್‌ ಫಿನಿಷರ್‌ ಧೋನಿ ತಂಡಕ್ಕೆ ದೊಡ್ಡ ಶಕ್ತಿ ಅಂದರೆ ತಪ್ಪಾಗದು. ಮುಂಬೈ ವಿರುದ್ಧ ನಡೆದ ಕ್ವಾಲಿಫೈಯರ್‌ 1ರಲ್ಲಿ ಪುಣೆಗೆ ಗೆಲುವು ತಂದಿದ್ದೆ ಧೋನಿ. ಕೊನೆಯ 2 ಓವರ್‌ನಲ್ಲಿ ಧೋನಿ ಮತ್ತು ಮನೋಜ್‌ ತಿವಾರಿ 5 ಸಿಕ್ಸರ್‌ ಬಾರಿಸುವ ಮೂಲಕ ತಂಡ ಮೊತ್ತವನ್ನು ಹೆಚ್ಚಿಸಿದ್ದರು. ನಾಯಕ ಸ್ಮಿತ್‌ಗೆ ಅಗತ್ಯ ಸಂದರ್ಭದಲ್ಲಿ ನೆರವು ನೀಡುತ್ತಿರುವುದು ಧೋನಿ. ಆದರೆ ಒಮ್ಮೊಮ್ಮೆ ಬ್ಯಾಟಿಂಗ್‌ ವಿಭಾಗ ಲೀಗ್‌ನಲ್ಲಿ ಕೈಕೊಟ್ಟಿದ್ದೂ ಇದೆ.

ಬೌಲಿಂಗ್‌ ವಿಭಾಗ ಲೀಗ್‌ನ ಆರಂಭದಲ್ಲಿ ಏನೂ ಇರಲಿಲ್ಲ. ಆದರೆ ಪಂದ್ಯಗಳು ಸಾಗಿದಂತೆ ಜೈದೇವ್‌ ಉನಾಡ್ಕತ್‌(22), ಶಾದೂìಲ್‌ ಠಾಕೂರ್‌(11), ವಾಷಿಂಗ್ಟನ್‌ ಸುಂದರ್‌ (8), ಡೇನಿಯಲ್‌ ಕ್ರಿಸ್ಟಿಯನ್‌(9) ಉತ್ತಮ ದಾಳಿ ಪ್ರದರ್ಶಿಸುತ್ತಿದ್ದಾರೆ. ಆದರೆ ಡೆತ್‌ ಓವರ್‌ನಲ್ಲಿ ಮುಂಬೈಗೆ ಹೋಲಿಸಿದರೆ ಪುಣೆ ದಾಳಿ ದುರ್ಬಲವಾಗಿ ಕಾಣಿಸುತ್ತದೆ.

Advertisement

ಮುಂಬೈ ಗೆದ್ದರೆ 3ನೇ ಬಾರಿ ಚಾಂಪಿಯನ್‌
ಇದು ಮುಂಬೈಗೆ 4ನೇ ಐಪಿಎಲ್‌ ಫೈನಲ್‌ ಪಂದ್ಯ. ಇದಕ್ಕೂ ಮುನ್ನ 2013 ಮತ್ತು 2015ರಲ್ಲಿ ಚಾಂಪಿಯನ್‌ಶಿಪ್‌ ಪಡೆದರೆ, 2010ರಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದೆ. ಹೀಗಾಗಿ ಮುಂಬೈ ಗೆದ್ದರೆ ಅದಕ್ಕೆ ಇದು ಮೂರನೇ ಬಾರಿ ಚಾಂಪಿಯನ್‌ ಆಗಲಿದೆ. ಆದರೆ ಎದುರಾಳಿ ಪುಣೆ ಆಗಿರುವುದರಿಂದ ಗೆಲುವು ಅಷ್ಟು ಸುಲಭ ಸಾಧ್ಯವಲ್ಲ.

ಲೀಗ್‌ನಲ್ಲಿ 20 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿಯೇ ಪ್ಲೇ ಆಫ್ಗೆ ಪ್ರವೇಶಿಸಿತ್ತು. ಆದರೆ ಕ್ವಾಲಿಫೈಯರ್‌ 1ರಲ್ಲಿ ಪುಣೆ ವಿರುದ್ಧ ಸೋತು ಕ್ವಾಲಿಫೈಯರ್‌ 2ರಲ್ಲಿ ಆಡುವಂತಾಯಿತು. ಆ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಹಾಕಿದೆ.

ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ (309), ನಿತೀಶ್‌ ರಾಣಾ (333), ಪೊಲಾರ್ಡ್‌ (378), ಪಾರ್ಥಿವ್‌ ಪಟೇಲ್‌ (391) ಮಿಂಚುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ಸಿಡಿಯುವ ಸಾಮರ್ಥ್ಯ ಈ ಬ್ಯಾಟ್ಸ್‌ಮನ್‌ಗಳಿಗಿದೆ. ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ(18), ಮಿಚೆಲ್‌ ಮೆಕ್ಲೆನಗನ್‌ (19), ಕರ್ಣ ಶರ್ಮ (13), ಲಸಿತ್‌ ಮಾಲಿಂಗ (11), ಹರ್ಭಜನ್‌ ಸಿಂಗ್‌ (8) ಚುರುಕಿನ ದಾಳಿ ನಡೆಸುತ್ತಿದ್ದಾರೆ. ಇದಕ್ಕೂ ಮುಖ್ಯವಾದ ಶಕ್ತಿ ಪಾಂಡ್ಯ ಸಹೋದರರು. ಹಾರ್ದಿಕ್‌ ಪಾಂಡ್ಯ (240 ರನ್‌, 6 ವಿಕೆಟ್‌), ಕೃಣಾಲ್‌ ಪಾಂಡ್ಯ (196 ರನ್‌, 10 ವಿಕೆಟ್‌) ಆಲ್‌ರೌಂಡ್‌ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ಗೆಲುವಿನ ಬಹುಪಾಲು ಪಂದ್ಯದಲ್ಲಿ ಈ ಇಬ್ಬರ ಶ್ರಮ ಇದೆ. ಡೆತ್‌ ಓವರ್‌ನಲ್ಲಿ ಬುಮ್ರಾ ಅದ್ಭುತ ದಾಳಿ ನಡೆಸುತ್ತಿದ್ದಾರೆ. ಆದರೆ ಪುಣೆ ವಿರುದ್ಧ ಕಳೆದ ಮೂರು ಮುಖಾಮುಖೀಯಲ್ಲಿ ಸೋತಿರುವುದು ಮಾನಸಿಕವಾಗಿ ತಂಡವನ್ನು ಕುಗ್ಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next