ಹೈದರಾಬಾದ್: ಕೊನೆ ಹಂತದಲ್ಲಿ ಅಮೋಘ ಬೌಲಿಂಗ್ ದಾಳಿ ಸಂಘಟಿಸಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಒಂದು ರನ್ನಿನಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಹತ್ತರ ಚಾಂಪಿಯನ್ ಎನಿಸಿಕೊಂಡಿತು. ಅಂತಿಮ ಓವರಿನಲ್ಲಿ ಮಿಚೆಲ್ ಜಾನ್ಸನ್ ಅವರು ಮನೋಜ್ ತಿವಾರಿ ಮತ್ತು ಸ್ಟೀವನ್ ಸ್ಮಿತ್ ಅವರನ್ನು ಸತತ ಎರಡು ಎಸೆತಗಳಲ್ಲಿ ಕೆಡಹುವ ಮೂಲಕ ಮುಂಬೈ ತಂಡವು ಸೋಲಿನ ದವಡೆಯಿಂದ ಪಾರಾಗಿ ರೋಚಕ ಗೆಲುವು ಕಾಣುವಂತಾಯಿತು. ಈ ಮೂಲಕ ಈ ಕೂಟದಲ್ಲಿ ಈ ಹಿಂದೆ ಪುಣೆ ವಿರುದ್ಧದ ಮೂರು ಸೋಲುಗಳಿಗೆ ಸೇಡು ತೀರಿಸಿಕೊಂಡಿತು. ಇದು ಮುಂಬೈ ಪಾಲಿನ ಮೂರನೇ ಐಪಿಎಲ್ ಪ್ರಶಸ್ತಿಯಾಗಿದೆ. ಮೂರು ಐಪಿಎಲ್ ಪ್ರಶಸ್ತಿ ಗೆದ್ದ ಏಕೈಕ ನಾಯಕ ರೋಹಿತ್ ಶರ್ಮ ಆಗಿದ್ದಾರೆ. ಅವರು 2009ರಲ್ಲಿ ಡೆಕ್ಕನ್ ಚಾರ್ಜರ್ ಪ್ರಶಸ್ತಿ ಗೆದ್ದಾಗ ಆ ತಂಡದಲ್ಲಿದ್ದರು. ಆದರೆ ಇದು ಧೋನಿ ಪಾಲಿಗೆ ಇನ್ನೊಂದು ಫೈನಲ್ ಸೋಲು ಆಗಿದೆ. ಕಳೆದ ಏಳು ಫೈನಲ್ ಹೋರಾಟಗಳಲ್ಲಿ ಧೋನಿ ಪಾಲಿಗೆ ಐದನೇ ಸೋಲು ಆಗಿದೆ.
ಅತ್ಯಂತ ರೋಚಕವಾಗಿ ಸಾಗಿದ ಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡವು ಪುಣೆಗೆ ಬಿಗು ದಾಳಿಗೆ ತತ್ತರಿಸಿ 8 ವಿಕೆಟಿಗೆ 129 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇದಕ್ಕುತ್ತರವಾಗಿ ಅಜಿಂಕ್ಯ ರಹಾನೆ ಮತ್ತು ಸ್ಟೀವನ್ ಸ್ಮಿತ್ ಅವರ ಉಪಯುಕ್ತ ಆಟದಿಂದಾಗಿ ಪುಣೆ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಅಂತಿಮ ಓವರಿನಲ್ಲಿ ತಿವಾರಿ ಮತ್ತು ಸ್ಮಿತ್ ಔಟಾದ ಕಾರಣ ಒಂದು ರನ್ನಿನಿಂದ ಸೋಲು ಕಾಣುವಂತಾಯಿತು. ಅಂತಿಮ ಓವರಿನಲ್ಲಿ ತಂಡ 11 ರನ್ ಗಳಿಸಬೇಕಾಗಿತ್ತು. ಮೊದಲ ಎಸೆತದಲ್ಲಿ ತಿವಾರಿ ಬೌಂಡರಿ ಬಾರಿಸಿದರು. ಇದರಿಂದಾಗಿ 5 ಎಸೆತಗಳಲ್ಲಿ 7 ರನ್ ಗಳಿಸುವ ಸುಲಭ ಅವಕಾಶ ಪುಣೆ ಪಡೆದಿತ್ತು. ಆದರೆ ಜಾನ್ಸನ್ ಅದ್ಭುತ ದಾಳಿ ಸಂಘಟಿಸಿ ಮುಂಬೈ ಗೆಲ್ಲುವಂತೆ ಮಾಡಿದರು.
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡಕ್ಕೆ ಪುಣೆ ಆರಂಭದಲ್ಲಿಯೇ ಪ್ರಬಲ ಹೊಡೆತ ನೀಡಿತು. ಕಳೆದ ಕೆಲವು ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ್ದ ಜೈದೇವ್ ಉನಾದ್ಕತ್ ಫೈನಲ್‌ನಲ್ಲೂ ಮುಂಬೈಯೆದುರು ಮಾರಕವಾಗಿ ಎರಗಿದರು. 8 ರನ್ ತಲುಪುವಷ್ಟರಲ್ಲಿ ಆರಂಭಿಕರಾದ ಸಿಮನ್ಸ್ ಮತ್ತು ಪಾರ್ಥಿವ್ ಪಟೇಲ್ ವಿಕೆಟ್ ಪಡೆದ ಉನಾದ್ಕತ್ ಪುಣೆಗೆ ಮೇಲುಗೈ ಒದಗಿಸಿದರು. ನಾಯಕ ರೋಹಿತ್ ಮತ್ತು ಅಂಬಾಟಿ ರಾಯುಡು ಮೂರನೇ ವಿಕೆಟಿಗೆ 33 ರನ್ ಪೇರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಈ ಜೋಡಿಯನ್ನು ಉತ್ತಮ ಫೀಲ್ಡಿಂಗ್ ಮೂಲಕ ಸ್ಮಿತ್ ಮುರಿದರು. ಆಬಳಿಕ ಮುಂಬೈ ಕುಸಿಯುತ್ತ ಹೋಯಿತು. 79 ರನ್ ತಲುಪುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿತು.
ಕೊನೆ ಹಂತದಲ್ಲಿ ಕೃಣಾಲ್ ಪಾಂಡ್ಯ ಮತ್ತು ಮಿಚೆಲ್ ಜಾನ್ಸನ್ ಸಿಡಿದ ಕಾರಣ ಮುಂಬೈ ಮೊತ್ತ ನೂರರ ಗಡಿ ದಾಟಿತಲ್ಲದೇ 129 ರನ್‌ವರೆಗೆ ತಲುಪಿತು. ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ತಂಡಕ್ಕೆ ಗೆಲುವು ದೊರಕಿಸಿಕೊಟ್ಟ ಕೃಣಾಲ್ ಪಂದ್ಯ ಈ ಪಂದ್ಯದಲ್ಲೂ ಜವಾಬ್ದಾರಿಯಿಂದ ಆಡಿದರು. 38 ಎಸೆತ ಎದುರಿಸಿದ ಅವರು 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಅಜೇಯರಾಗಿ ಉಳಿದರು. ಮಿಚೆಲ್ ಜಾನ್ಸನ್ ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಔಟಾದರು. ಅವರಿಬ್ಬರು 8ನೇ ವಿಕೆಟಿಗೆ ಅಮೂಲ್ಯ 50 ರನ್ ಪೇರಿಸಿದರು. ಬಿಗು ದಾಳಿ ಸಂಘಟಿಸಿದ ಉನಾದ್ಕತ್ ತನ್ನ 4 ಓವರ್‌ಗಳ ದಾಳಿಯಲ್ಲಿ 19 ರನ್ನಿಗೆ 2 ವಿಕೆಟ್ ಕಿತ್ತರು. ಝಂಪ ಮತ್ತು ಕ್ರಿಸ್ಟಿಯನ್ ಕೂಡ ತಲಾ ಎರಡು ವಿಕೆಟ್ ಪಡೆದರು. ವಿಕೆಟ್ ಪಡೆಯದಿದ್ದರೂ ವಾಷಿಂಗ್ಟನ್ ಸುಂದರ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 13 ರನ್ ಬಿಟ್ಟುಕೊಟ್ಟರು.
Related Articles
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ಲೆಂಡ್ಲ್ ಸಿಮನ್ಸ್ ಸಿ ಮತ್ತು ಬಿ ಉನಾದ್ಕತ್ 3
ಪಾರ್ಥಿವ್ ಪಟೇಲ್ ಸಿ ಠಾಕುರ್ ಬಿ ಉನಾದ್ಕತ್ 4
ಅಂಬಾಟಿ ರಾಯುಡು ರನೌಟ್ 12
ರೋಹಿತ್ ಶರ್ಮ ಸಿ ಠಾಕುರ್ ಬಿ ಝಂಪ 24
ಕೃಣಾಲ್ ಪಾಂಡ್ಯ ಸಿ ರಹಾನೆ ಬಿ ಕ್ರಿಸ್ಟಿಯನ್ 47
ಕೈರನ್ ಪೋಲಾರ್ಡ್ ಸಿ ತಿವಾರಿ ಬಿ ಝಂಪ 7
ಹಾರ್ದಿಕ್ ಪಾಂಡ್ಯ ಎಲ್‌ಬಿಡಬ್ಲ್ಯು ಬಿ ಕ್ರಿಸ್ಟಿಯನ್ 10
ಕರ್ಣ್ ಶರ್ಮ ರನೌಟ್ 1
ಮಿಚೆಲ್ ಜಾನ್ಸನ್ ಔಟಾಗದೆ 13
ಇತರ: 8
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 129
ವಿಕೆಟ್ ಪತನ: 1-7, 2-8, 3-41, 4-56, 5-65, 6-78, 7-79, 8-129
ಬೌಲಿಂಗ್:
ಜೈದೇವ್ ಉನಾದ್ಕತ್ 4-0-19-2
ವಾಷಿಂಗ್ಟನ್ ಸುಂದರ್ 4-0-13-0
ಶಾರ್ದೂಲ್ ಠಾಕುರ್ 2-0-7-0
ಲೂಕಿ ಫೆರ್ಗ್ಯುಸನ್ 2-0-21-0
ಆ್ಯಡಂ ಝಂಪ 4-0-32-2
ಡೇನಿಯಲ್ ಕ್ರಿಸ್ಟಿಯನ್ 4-0-34-2
ರೈಸಿಂಗ್ ಪುಣೆ ಸೂಪರ್‌ಜೈಂಟ್
ಅಜಿಂಕ್ಯ ರಹಾನೆ ಸಿ ಪೋಲಾರ್ಡ್ ಬಿ ಜಾನ್ಸನ್ 44
ರಾಹುಲ್ ತ್ರಿಪಾಠಿ ಎಲ್‌ಬಿಡಬ್ಲ್ಯು ಬಿ ಬುಮ್ರಾ 3
ಸ್ಟೀವನ್ ಸ್ಮಿತ್ ಸಿ ರಾಯುಡು ಬಿ ಜಾನ್ಸನ್ 51
ಎಂಎಸ್ ಧೋನಿ ಸಿ ಪಟೇಲ್ ಬಿ ಬುಮ್ರಾ 10
ಮನೋಜ್ ತಿವಾರಿ ಸಿ ಪೋಲಾರ್ಡ್ ಬಿ ಜಾನ್ಸನ್ 7
ಡಿ. ಕ್ರಿಸ್ಟಿಯನ್ ರನೌಟ್ 4
ವಾಷಿಂಗ್ಟನ್ ಸುಂದರ್ ಔಟಾಗದೆ 0
ಇತರ: 9
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 128
ವಿಕೆಟ್ ಪತನ: 1-17, 2-71, 3-98, 4-123, 5-123, 6-128
ಬೌಲಿಂಗ್:
ಕೃಣಾಲ್ ಪಾಂಡ್ಯ 4-0-31-0
ಮಿಚೆಲ್ ಜಾನ್ಸನ್ 4-0-26-3
ಜಸ್‌ಪ್ರೀತ್ ಬುಮ್ರಾ 4-0-26-2
ಲಸಿತ ಮಾಲಿಂಗ 4-0-21-0
ಕರ್ಣ್ ಶರ್ಮ 4-0-18-0
ಪಂದ್ಯಶ್ರೇಷ್ಠ: ಕೃಣಾಲ್ ಪಾಂಡ್ಯ