ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ನೋಡಿ ಐಫೋನ್ ಖರೀದಿಗೆ ಮುಂದಾದವರಿಗೆ 35,608 ರೂ. ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರು ಮೇ 13ರಂದು ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಅದರಲ್ಲಿ “ಐ ಫೋನ್ 14 ಪ್ರೊ’ ಮಾರಾಟದ ಬಗ್ಗೆ ಜಾಹೀರಾತು ಕಂಡಿತು. ಜಾಹೀರಾತು ಹಾಕಿದವರನ್ನು ಸಂಪರ್ಕಿಸಿದಾಗ ಮೊದಲಿಗೆ ಹಣ ಹಾಕುವಂತೆ ಪ್ರತಿಕ್ರಿಯೆ ಬಂದಿತ್ತು. ಅಲ್ಲದೆ ದೂರುದಾರರಿಗೆ ಕ್ಯುಆರ್ ಕೋಡ್ ಕಳುಹಿಸಿದ್ದರು. ದೂರುದಾರರು ಅದನ್ನು ಸ್ಕ್ಯಾನ್ ಮಾಡಿ 13,999 ರೂ. ಹಣ ವರ್ಗಾಯಿಸಿದ್ದರು. ಅನಂತರ ಮೇ 16ರಂದು ದೂರುದಾರರಿಗೆ 7415171733 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ತಾನು ಅಮೆಜಾನ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಆರ್ಡರ್ ಮಾಡಿದ ಮೊಬೈಲ್ ಕಳುಹಿಸಲು ಇಂಟರ್‌ನ್ಯಾಶನಲ್ ಚಾರ್ಜ್ 21,609 ರೂ.ಗಳನ್ನು ವರ್ಗಾಯಿಸಬೇಕು ಎಂದು ಹೇಳಿದ.
ಅದರಂತೆ ದೂರುದಾರರು ಹಣ ವರ್ಗಾಯಿಸಿದರು. ಅನಂತರ ಹಲವು ಬಾರಿ ಸಂಪರ್ಕಿಸಲು ಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಒಟ್ಟು 35,608 ರೂ. ವಂಚಿಸಲಾಗಿದೆ ಎಂದು ದೂರು ದಾಖಲಾಗಿದೆ.