Advertisement

IOA; ವಿನೀಶ್‌ ಫೋಗಾಟ್‌ ವಿಚಾರದಲ್ಲಿ ತಣ್ಣಗೆ ನುಣುಚಿಕೊಂಡಿತಾ ಐಒಎ?; ಪಿಟಿ ಉಷಾ ಹೇಳಿದ್ದೇನು?

08:14 AM Aug 12, 2024 | Team Udayavani |

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ 2024 (Paris Olympics) ಅದ್ದೂರಿಯಾಗಿ ಮುಗಿದು ತೆರೆಕಂಡಿದೆ. ಆದರೆ ಭಾರತೀಯ ಕುಸ್ತಿ ಪಟು ವಿನೀಶ್‌ ಫೋಗಾಟ್‌ (Vinesh Phogat) ಅವರ ವಿವಾದ ಇನ್ನೂ ಬಗೆಹರಿದಿಲ್ಲ. 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ್ದ ಫೋಗಾಟ್‌, ಅಂತಿಮ ಪಂದ್ಯಕ್ಕೂ ಮುನ್ನ ತೂಕ ಹೆಚ್ಚಿದ ಕಾರಣ ಅನರ್ಹರಾಗಿದ್ದರು. ಸದ್ಯ ಕುಸ್ತಿಪಟು ಸಲ್ಲಿಸಿರುವ ಮೇಲ್ಮನವಿಯ ತೀರ್ಪು ಬರಬೇಕಿದೆ. ಇದರ ಮಧ್ಯೆ ಭಾರತೀಯ ಒಲಿಂಪಿಕ್ ಸಂಸ್ಥೆ (IOA) ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ.

Advertisement

ವಿನೀಶ್ ಫೋಗಾಟ್ ಅವರ ತೂಕದ ವೈಫಲ್ಯಕ್ಕೆ ಟೀಕೆಗಳನ್ನು ವ್ಯಕ್ತಪಡಿಸಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ಅಧ್ಯಕ್ಷೆ ಪಿಟಿ ಉಷಾ (PT Usha) ಅವರು ತಮ್ಮ ತೂಕವನ್ನು ನಿರ್ವಹಿಸುವುದು ಅಥ್ಲೀಟ್‌ಗಳ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ

ವಿನೀಶ್‌ ಫೋಗಾಟ್‌ ಪ್ರಕರಣದ ಬಳಿಕ ಭಾರತೀಯ ತಂಡದ ವೈದ್ಯರ ಮೇಲೆ ಟೀಕಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಷಾ, ನಮ್ಮ ವೈದ್ಯಕೀಯ ತಂಡದ ಮೇಲೆ, ವಿಶೇಷವಾಗಿ ಮುಖ್ಯ ವೈದ್ಯಾಧಿಕಾರಿ ಡಾ. ದಿನ್ಶಾ ಪರ್ದಿವಾಲಾ ಮೇಲಿನ ಟೀಕೆಯು ಸ್ವೀಕಾರಾರ್ಹವಲ್ಲ. ಇದನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಫೈನಲ್‌ ಸ್ಪರ್ಧೆಗೆ ಮುನ್ನ ವಿನೀಶ್‌ ಅವರು ಕೇವಲ 100 ಗ್ರಾಂ ಹೆಚ್ಚಿನ ದೇಹತೂಕ ಹೊಂದಿದ್ದ ಕಾರಣ ಅವರನ್ನು ಅನರ್ಹರನ್ನಾಗಿಸಲಾಗಿತ್ತು. ಇದರಿಂದ ನೊಂದಿದ್ದ ವಿನೀಶ್‌ ಫೋಗಾಟ್‌ ಕುಸ್ತಿ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದರು.

Advertisement

“ಕುಸ್ತಿ, ವೇಟ್‌ಲಿಫ್ಟಿಂಗ್, ಬಾಕ್ಸಿಂಗ್ ಮತ್ತು ಜೂಡೋದಂತಹ ಕ್ರೀಡೆಯಲ್ಲಿ ಅಥ್ಲೀಟ್‌ಗಳ ತೂಕ ನಿರ್ವಹಣೆಯ ಜವಾಬ್ದಾರಿಯು ಪ್ರತಿಯೊಬ್ಬ ಅಥ್ಲೀಟ್ ಮತ್ತು ಅವನ ಅಥವಾ ಅವಳ ತರಬೇತುದಾರರ ಜವಾಬ್ದಾರಿಯಾಗಿದೆ, ಇದು IOA-ನೇಮಕಗೊಂಡ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ದಿನ್ಶಾ ಪರ್ದಿವಾಲಾ ಮತ್ತು ಅವರ ತಂಡದ್ದಲ್ಲ” ಎಂದು ಪಿಟಿ ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“IOA ವೈದ್ಯಕೀಯ ತಂಡಕ್ಕೆ, ಅದರಲ್ಲೂ ವಿಶೇಷವಾಗಿ ಡಾ. ಪಾರ್ದಿವಾಲಾ ಅವರ ಮೇಲಿನ ಟೀಕೆಯು ಸ್ವೀಕಾರಾರ್ಹವಲ್ಲ ಮತ್ತು ಖಂಡನೆಗೆ ಅರ್ಹವಾಗಿದೆ.” ಎಂದು ಹೇಳಿದ್ದಾರೆ.

“ಪ್ಯಾರಿಸ್ 2024 ರ ಒಲಂಪಿಕ್ ಕ್ರೀಡಾಕೂಟದಲ್ಲಿ ಅಂತಹ ಕ್ರೀಡೆಯಲ್ಲಿ ಪ್ರತಿಯೊಬ್ಬ ಭಾರತೀಯ ಅಥ್ಲೀಟ್ ತನ್ನದೇ ಆದ ಕೋಚಿಂಗ್-‌ ಮೆಂಟರ್ ತಂಡವನ್ನು ಹೊಂದಿದ್ದಾರೆ. ಈ ಕೋಚಿಂಗ್ ತಂಡಗಳು ಹಲವಾರು ವರ್ಷಗಳಿಂದ ಕ್ರೀಡಾಪಟುಗಳೊಂದಿಗೆ ಕೆಲಸ ಮಾಡುತ್ತಿವೆ” ಎಂದು ಉಷಾ ಹೇಳಿದರು.

“IOA ಒಂದೆರಡು ತಿಂಗಳ ಹಿಂದೆ ವೈದ್ಯಕೀಯ ತಂಡವನ್ನು ನೇಮಿಸಿತು, ಅವರ ಸ್ಪರ್ಧೆಯ ಸಮಯದಲ್ಲಿ ಮತ್ತು ನಂತರ ಕ್ರೀಡಾಪಟುಗಳ ಚೇತರಿಕೆ ಮತ್ತು ಗಾಯ ನಿರ್ವಹಣೆಗೆ ಸಹಾಯ ಮಾಡುವ ತಂಡವಾಗಿ‌ ಇದು ಕೆಲಸ ಮಾಡುತ್ತಿದೆ. ಈ ತಂಡವು ತಮ್ಮದೇ ಆದ ಪೌಷ್ಟಿಕತಜ್ಞರು ಮತ್ತು ಫಿಸಿಯೋ ಥೆರಪಿಸ್ಟ್ ತಂಡವನ್ನು ಹೊಂದಿರದ ಕ್ರೀಡಾಪಟುಗಳನ್ನು ಬೆಂಬಲಿಸಲು ರೂಪಿಸಲಾಗಿದೆ” ಎಂದು ಉಷಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.