ಹೊಸದಿಲ್ಲಿ : ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಗೆ ಸೇರಿದ, ಭಾರತ, ಬ್ರಿಟನ್ ಮತ್ತು ಸ್ಪೇನ್‌ನಲ್ಲಿನ ಸುಮಾರು 54 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ತಾನು ಮುಟ್ಟುಗೋಲು ಹಾಕಿರುವುದಾಗಿ ಜಾರಿ ನಿರ್ದೇಶನಾಲಯ ಇಂದು ಗುರುವಾರ ಹೇಳಿದೆ.
ಕೇಂದ್ರೀಯ ತನಿಖಾ ಸಂಸ್ಥೆಯು ಹಣ ದುರುಪಯೋಗ ತಡೆ ಕಾಯಿದೆಯಡಿ (ಪಿಎಂಎಲ್‌ಎ) ಕಾರ್ತಿ ಗೆ ಸೇರಿರುವ ತಮಿಳು ನಾಡಿನ ಕೊಡೈಕನಾಲ್ ಮತ್ತು ಊಟಿಯಲ್ಲಿನ ಆಸ್ತಿಪಾಸ್ತಿ ಮತ್ತು ದಿಲ್ಲಿ ಜೋರ್‌ಬಾಗ್ ನಲ್ಲಿನ ಒಂದು ಫ್ಲಾಟನ್ನು ಮುಟ್ಟುಗೋಲು ಹಾಕುವುದಕ್ಕೆ ತಾತ್ಕಾಲಿಕ ಆದೇಶ ಹೊರಡಿಸಿತು.
ಬ್ರಿಟನ್‌ನ ಸಾಮರ್‌ಸೆಟ್ ನಲ್ಲಿರುವ ಒಂದು ಕಾಟೇಜ್ ಮತ್ತು ಒಂದು ಮನೆ, ಸ್ಪೇನಿನ ಬಾರ್ಸೆಲೋನಾದಲ್ಲಿನ ಒಂದು ಟೆನಿಸ್ ಕ್ಲಬ್ ಅನ್ನು ಈ ಆದೇಶದಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಇದೇ ವೇಳೆ ಚೆನ್ನೈನಲ್ಲಿನ ಒಂದು ಬ್ಯಾಂಕಿನಲ್ಲಿ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಎಎಸ್‌ಸಿಪಿಎಲ್) ಹೆಸರಿನಲ್ಲಿ ಇರಿಸಿರುವ 90 ಲಕ್ಷ ರೂ.ಗಳ ನಿರಖು ಠೇವಣಿಯನ್ನು ಕೂಡ ಮುಟ್ಟುಗೋಲು ಹಾಕಲಾಗಿದೆ.
ಈ ಎಲ್ಲ ಸೊತ್ತುಗಳು ಕಾರ್ತಿ ಮತ್ತು ಎಎಸ್‌ಸಿಪಿಎಲ್ ಹೆಸರಿನಲ್ಲಿವೆ. ಕಾರ್ತಿಗೆ ಎಎಸ್‌ಸಿಪಿಎಲ್ ಸಂಸ್ಥೆ ಜತೆಗೆ ನಂಟಿದೆ ಎಂದು ಇಡಿ ಹೇಳಿದೆ.
ಕಾರ್ತಿ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಕಾರ್ತಿ ವಿರುದ್ಧ ಪಿಎಂಎಲ್‌ಎ ಕೇಸು ದಾಖಲಿಸಿತ್ತು. 2007ರಲ್ಲಿ ಎಫ್ಐಪಿಬಿ ಕ್ಲಿಯರೆನ್ಸ್ ಮೂಲಕ ಕಾರ್ತಿ ಅವರ ಐಎನ್‌ಎಕ್ಸ್ ಮೀಡಿಯಾ 305 ಕೋಟಿ ರೂ. ಸಾಗರೋತ್ತರ ಪಾವತಿ ಪಡೆದಿತ್ತು. ಆಗ ಚಿದಂಬರಂ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದರು.