Advertisement

ಹೂಡಿಕೆದಾರರ ಸಮಾವೇಶ ಉದ್ಘಾಟನೆಗೆ ಪ್ರಧಾನಿ ಆಗಮನ ನಿರೀಕ್ಷೆ

05:49 PM Jul 17, 2022 | Team Udayavani |

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನವೆಂಬರ್‌ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನ (ಜಿಮ್‌) ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿದ್ದು, ಆಗಮಿಸುವ ನಿರೀಕ್ಷೆಯಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ|ಮುರುಗೇಶ ನಿರಾಣಿ ಹೇಳಿದರು.

Advertisement

ನಗರದಲ್ಲಿ ಎಫ್‌ಕೆಸಿಸಿಐ ಹಾಗೂ ಕೆಸಿಸಿಐ ಆಯೋಜಿಸಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ನ. 2ರಂದು ನಡೆಯಲಿದ್ದು, ಪ್ರಧಾನಿಯವರು ಸಮ್ಮೇಳನ ಉದ್ಘಾಟಿಸುವ ವಿಶ್ವಾಸವಿದೆ. ಜಿಮ್‌ ನಲ್ಲಿ ಅಂದಾಜು ಐದು ಲಕ್ಷ ಕೋಟಿ ರೂ. ಹೂಡಿಕೆ ಗುರಿ ಹೊಂದಲಾಗಿದೆ. ಈಗಾಗಲೇ ಜೂನ್‌ ತಿಂಗಳೊಂದರಲ್ಲೇ 95 ಸಾವಿರ ಕೋಟಿ ರೂ. ಸೇರಿದಂತೆ ಒಟ್ಟಾರೆ ಅಂದಾಜು ಎರಡೂವರೆ ಲಕ್ಷ ಕೋಟಿ ರೂ. ಹೂಡಿಕೆಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದರು.

ಉದ್ಯಮ ಸ್ಥಾಪನೆಗೆ ನೀಡಿದ ಜಾಗವನ್ನು ಈ ಹಿಂದೆ 99 ವರ್ಷದ ಲೀಸ್‌ ಮೇಲೆ ನೀಡಲಾಗುತ್ತಿತ್ತು. ಅದನ್ನು ಬದಲಾಯಿಸಿ ಇದೀಗ ತಕ್ಷಣಕ್ಕೆ ಸೇಲ್‌ಡೀಡ್‌ ಮಾಡಿಕೊಡುವ ಅವಕಾಶ ಕಲ್ಪಿಸಲಾಗಿದೆ. ಉದ್ಯಮಿಗಳು ವಾಣಿಜ್ಯ ಮತ್ತು ವಸತಿ ಕರ ಎರಡನ್ನೂ ಪಾವತಿಸಬೇಕಾಗಿತ್ತು. ಇದೀಗ ಅದನ್ನು ಒಂದೇ ಕರವಾಗಿ ಪರಿವರ್ತಿಸಲಾಗಿದ್ದು, ಶೇ.30 ಕರ ಕಡಿಮೆ ಆಗಿದೆ. ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಹೊಸ ದರದಲ್ಲಿ ನಿವೇಶನಗಳ ಶುಲ್ಕದ ನೋಟಿಸ್‌ ನೀಡಲಾಗಿತ್ತು. ಅಂತಿಮ ಸೇಲ್‌ ಡೀಡ್‌ಗೆ ಶೇ.67 ಸಬ್ಸಿಡಿ ದೊರೆಯಲಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ರಾಜ್ಯದ ಎಲ್ಲ ಹಳೇ ಕೈಗಾರಿಕಾ ಪ್ರದೇಶಗಳ ರಸ್ತೆಗಳನ್ನು ನವೆಂಬರ್‌ ದೊಳಗಾಗಿ ದುರಸ್ತಿ ಮಾಡಲಾಗುವುದು. ಹುಬ್ಬಳ್ಳಿಯಲ್ಲಿ ಟೆಸ್ಟಿಂಗ್‌ ಲ್ಯಾಬ್‌ ಕಟ್ಟಡಕ್ಕೆ 15 ದಿನಗಳಲ್ಲಿ ಅಂದಾಜು ನಾಲ್ಕು ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿಯವರು ಸಮ್ಮತಿಸಿದ್ದಾರೆ. ಎಥೆನಾಲ್‌ ಉತ್ಪಾದನೆಯಲ್ಲಿ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಬೆಳಗಾವಿ ವಿಭಾಗದಲ್ಲಿ ಸುಮಾರು 54 ಸಕ್ಕರೆ ಕಾರ್ಖಾನೆಗಳಿದ್ದು, ತಮ್ಮ ಒಡೆತನದ ಸಕ್ಕರೆ ಕಾರ್ಖಾನೆಗಳಲ್ಲಿ ನಿತ್ಯ 25 ಲಕ್ಷ ಲೀಟರ್‌ ಎಥೆನಾಲ್‌ ಉತ್ಪಾದನೆ ಆಗುತ್ತಿದ್ದು, ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದರು.

Advertisement

ಪ್ರತಿ ಜಿಲ್ಲೆಯ ವಾಣಿಜ್ಯೋದ್ಯಮ ಸಂಸ್ಥೆಯಿಂದ ತಲಾ ಐದು ಜನ ಪದಾಧಿಕಾರಿಗಳು ಸೇರಿದಂತೆ ರಾಜ್ಯದ ಒಟ್ಟು 300 ಪದಾಧಿಕಾರಿಗಳನ್ನು ಬೆಂಗಳೂರಿಗೆ ಆಹ್ವಾನಿಸಿ ಮುಖ್ಯಮಂತ್ರಿ ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆದಷ್ಟು ಶೀಘ್ರ ಆಯೋಜಿಸಲಾಗುವುದು ಎಂದು ಹೇಳಿದರು.

250 ಕೋಟಿ ರೂ. ಹೂಡಿಕೆ: ಸ್ಟಾರ್‌ ಸಮೂಹದ ಸಂಜಯ ಘೋಡಾವತ್‌ ಅವರು ಧಾರವಾಡ ಜಿಲ್ಲೆಯಲ್ಲಿ ಆಹಾರ ಸಂಸ್ಕರಣೆ ಉದ್ಯಮಕ್ಕೆ ಅಂದಾಜು 250 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದು, 1000-1200 ಜನರಿಗೆ ಉದ್ಯೋಗ ದೊರೆಯಲಿದೆ. ಮುಂದಿನ ದಿನಗಳಲ್ಲಿ ಅವರು ಅಂದಾಜು ಒಂದು ಸಾವಿರ ಕೋಟಿ ರೂ.ಗಳ ಹೂಡಿಕೆ ಚಿಂತನೆಯಲ್ಲಿದ್ದಾರೆ. ಅದಾನಿ ಸಮೂಹ ರಾಜ್ಯದಲ್ಲಿ ಒಟ್ಟಾರೆ 50 ಸಾವಿರ ಕೋಟಿ ರೂ. ಹೂಡಿಕೆ ಭರವಸೆ ನೀಡಿದೆ. ಇಲೆಕ್ಟ್ರಿಕ್‌ ವಾಹನಗಳ ತಯಾರಿಕೆ 10 ಕಂಪೆನಿಗಳು ಕಾರ್ಯಾರಂಭಕ್ಕೆ ಮುಂದಾಗಿದ್ದು, ಇನ್ನಷ್ಟು ಕಂಪೆನಿಗಳು ಅನುಮತಿ ಕೇಳುತ್ತಿವೆ ಎಂದರು.

ಜವಳಿ ಉದ್ಯಮ ಆರಂಭಕ್ಕೆ ಕೇಂದ್ರ ಸರಕಾರ ಶೇ.40-50 ಸಬ್ಸಿಡಿ ನೀಡುತ್ತಿದೆ. ಅದೇ ರೀತಿ ಎಥೆನಾಲ್‌ ಉದ್ಯಮಕ್ಕೆ ಶೇ.95 ಸಬ್ಸಿಡಿ ದೊರೆಯುತ್ತಿದ್ದು, ಉದ್ಯಮಿಗಳು ಇದರ ಸದುಪಯೋಗಕ್ಕೆ ಮುಂದಾಗಬೇಕು. ರಾಜ್ಯದಲ್ಲಿ ಪ್ರತಿ 100 ಕಿಮೀ ಒಂದು ಏರೋಸ್ಟ್ರಿಪ್‌ ನಿರ್ಮಾಣದ ಚಿಂತನೆಯಿದೆ. ರಾಯಚೂರಿನಲ್ಲಿ ಏರ್‌ಪೋರ್ಟ್‌ ಹಾಗೂ ಉದ್ಯಮ ವಲಯ ನಿರ್ಮಾಣಕ್ಕೆ ಎರಡು ಸಾವಿರ ಎಕರೆ ಜಮೀನು ಕೇಳಲಾಗಿದೆ. ಬಾದಾಮಿ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ನಾಲ್ಕು ಕಡೆ ಏರ್‌ ಸ್ಟ್ರಿಪ್‌ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದು ಹೇಳಿದರು.

ಅಮೆಜಾನ್‌ ಇ-ವಾಣಿಜ್ಯ ಸಾರ್ವಜನಿಕ ನೀತಿ ಮುಖ್ಯಸ್ಥ ಉದಯ ಮೆಹ್ತಾ ಮಾತನಾಡಿ, ಕಳೆದ 18 ವರ್ಷಗಳಿಂದ ಅಮೆಜಾನ್‌ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ದೇಶದಲ್ಲಿ ಸುಮಾರು 11 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದ್ದು, 2025ರ ವೇಳೆಗೆ 20 ಲಕ್ಷ ಜನರಿಗೆ ಉದ್ಯೋಗದ ಗುರಿ ಹೊಂದಲಾಗಿದೆ. ಬೆಂಗಳೂರಿನಲ್ಲಿ ಬೃಹತ್‌ ಸಂಗ್ರಹ ಸಾಮರ್ಥ್ಯದ ಗೋದಾಮು ನಿರ್ಮಿಸಲಾಗಿದೆ. ರಾಜ್ಯದಲ್ಲಿಯೂ ಇನ್ನಷ್ಟು ಬೆಳವಣಿಗೆ ಚಿಂತನೆ ಇದೆ ಎಂದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ| ಇ.ವಿ.ರಮಣರೆಡ್ಡಿ ಮಾತನಾಡಿ, ಔದ್ಯಮೀಕರಣ ದೃಷ್ಟಿಯಿಂದ ಕರ್ನಾಟಕ ತನ್ನದೇ ಖ್ಯಾತಿ ಹೊಂದಿದೆ. ಈ ಹಿಂದೆ ಉದ್ಯಮಿಗಳು ಸರಕಾರವನ್ನು ಹುಡುಕಿಕೊಂಡು ಬರುತ್ತಿದ್ದರು. ಬದಲಾದ ಸ್ಥಿತಿಯಲ್ಲಿ ಉದ್ಯಮಿಗಳನ್ನು ಹುಡುಕಿಕೊಂಡು ಸರಕಾರ ಹೋಗುವಂತಾಗಿದೆ. ನೆರೆಹೊರೆಯ ರಾಜ್ಯಗಳು ಉದ್ಯಮ ದೃಷ್ಟಿಯಿಂದ ತಮ್ಮದೇ ಪೈಪೋಟಿಗಿಳಿದಿದ್ದು, ಅದರನ್ನು ತಡೆಯಲು ನಮ್ಮದೇ ಯತ್ನ-ಆಕರ್ಷಣೆ ಕ್ರಮಗಳು ಅನಿವಾರ್ಯವಾಗಿವೆ ಎಂದು ಹೇಳಿದರು.

ನವೋದ್ಯಮ ನೀತಿ, ಇಎಸ್‌ಡಿಎಂ ನೀತಿ ಸೇರಿದಂತೆ ಉದ್ಯಮಸ್ನೇಹಿ ವಿವಿಧ ನೀತಿಗಳೊಂದಿಗೆ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ಪ್ರಗತಿದಾಯಕ, ಉದ್ಯಮಸ್ನೇಹಿ ರಾಜ್ಯಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ರಫ್ತಿನಲ್ಲೂ ಮಹತ್ವದ ನೆಗೆತ ಕಂಡಿದೆ. ನೂತನ ಕೈಗಾರಿಕಾ ನೀತಿಯಲ್ಲಿ ಬಿಯಾಂಡ್‌ ಬೆಂಗಳೂರಿಗೆ ಒತ್ತು ನೀಡಲಾಗಿದ್ದು, ಮೂರು ವಲಯಗಳನ್ನಾಗಿ ಮಾಡಲಾಗಿದೆ. ವಲಯ 1ರಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಪ್ರದೇಶ ಬರುತ್ತಿದ್ದು, ಇಲ್ಲಿ ಉದ್ಯಮಿಗಳು ಹೂಡಿಕೆಗೆ ಮುಂದಾದರೆ ಹೆಚ್ಚಿನ ರಿಯಾಯಿತಿ, ಸಬ್ಸಿಡಿ ದೊರೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next