ಬೆಂಗಳೂರು: ಪ್ರಕರಣದ ಗಂಭೀರತೆ ಮತ್ತು ಗೌಪ್ಯತೆ ಆಧಾರದಲ್ಲಿ ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸಿಐಡಿ ಪರ ಸರ್ಕಾರಿ ವಕೀಲರು ಸೋಮವಾರ ಹೈಕೋರ್ಟ್‌ಗೆ ತಿಳಿಸಿದರು.
ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾ.ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠದಲ್ಲಿ ಸೋಮವಾರ ನಡೆದ ವಿಚಾರಣೆ ವೇಳೆ, ಪ್ರಕರಣದ ತನಿಖೆಯ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಿಐಡಿ ತನಿಖಾಧಿಕಾರಿ ಪರ ಸರ್ಕಾರಿ ವಕೀಲರು, ಪ್ರಕರದ ತನಿಖೆ ಚುರುಕಾಗಿ ನಡೆಯತ್ತಿದೆ.
ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದು, ಈಗಾಗಲೇ ಕೆಲವೊಂದು ಮಹತ್ವದ ಮಾಹಿತಿ ಸಂಗ್ರಹಿಸಲಾಗಿದೆ. ಗೌಪ್ಯತೆ ದೃಷ್ಟಿಯಿಂದ ತನಿಖೆ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಹೀಗಾಗಿ ವಿಚಾರಣೆ ವೇಳೆ ಸರ್ಕಾರಿ ವಕೀಲರನ್ನು ತಮ್ಮ ಹತ್ತಿರಕ್ಕೆ ಕರೆಸಿಕೊಂಡ ನ್ಯಾಯಮೂರ್ತಿಗಳು ತನಿಖಾ ವರದಿಯ ಮಾಹಿತಿಗಳನ್ನು ಕೇಳಿಸಿಕೊಂಡು ಅದನ್ನು ದಾಖಲಿಸಿಕೊಂಡರು.
ಬಳಿಕ ಪ್ರಕರಣದ ತನಿಖೆ ಕುರಿತು ದಾಖಲೆಗಳ ಮೂಲ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಮತ್ತು ದಾಖಲೆಗಳು ಯಾರಿಗೂ ಲಭ್ಯವಾಗದಂತೆ ಗೌಪ್ಯವಾಗಿರಿಸುವಂತೆ ತನಿಖಾಧಿಕಾರಿಗೆ ನಿರ್ದೇಶಿಸಿ ವಿಚಾರಣೆಯನ್ನು ಜು.5ಕ್ಕೆ ಮುಂದೂಡಿದರು. ಮಗನ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಟೆಕ್ಕಿ ಅಜಿತಾಬ್ ತಂದೆ ಅಶೋಕ್‌ಕುಮಾರ್ ಸಿನ್ಹಾ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಏಕಸದಸ್ಯಪೀಠದಲ್ಲಿ ನಡೆಯುತ್ತಿದೆ.