Advertisement

ವಂಚಕ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿದ ತನಿಖಾ ಸಂಸ್ಥೆಗಳು

11:16 PM Jun 24, 2021 | Team Udayavani |

ದೇಶದ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ಗಳನ್ನು ವಂಚಿಸಿ ವಿದೇಶ ಗಳಿಗೆ ಪರಾರಿಯಾಗಿರುವ ಭಾರತೀಯ ಉದ್ಯಮಿಗಳಿಗೆ ಇದೀಗ ತನಿಖಾ ಸಂಸ್ಥೆಗಳು ಬಿಸಿ ಮುಟ್ಟಿಸಿವೆ. ಪಡೆದುಕೊಂಡ ಸಾಲವನ್ನು ಮರು ಪಾವತಿಸದೆ ಬ್ಯಾಂಕ್‌ಗಳಿಗೆ ಪಂಗನಾಮ ಬಳಿದು ವಿದೇಶಗಳಲ್ಲಿ ನೆಲೆಯಾಗಿರುವ ಭ್ರಷ್ಟ ಉದ್ಯಮಿಗಳಾದ ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಮತ್ತು ವಿಜಯ್‌ ಮಲ್ಯ ಅವರ‌ ಆಸ್ತಿಯನ್ನು ಜಾರಿ ನಿರ್ದೇಶ ನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ ಈ ವಂಚಕ ಉದ್ಯಮಿಗಳ ಹೆಸರಿನಲ್ಲಿದ್ದ ಷೇರುಗಳನ್ನು ಮಾರಾಟ ಮಾಡಿ ಅದರಿಂದ ಸಂಗ್ರಹವಾದ ಮೊತ್ತವನ್ನು ಬ್ಯಾಂಕ್‌ಗಳಿಗೆ ನೀಡಲಾಗಿದೆ.

Advertisement

ಈ ಮೂವರು ಉದ್ಯಮಿಗಳು ದೇಶದ ಬ್ಯಾಂಕ್‌ಗಳಿಂದ ಕೋಟ್ಯಂ ತರ ರೂ.ಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ಸಾಲದ ಕಂತನ್ನು ಪಾವತಿಸದೆ ಸುಸ್ತಿದಾರರಾಗಿದ್ದ ಈ ಉದ್ಯಮಿಗಳ ಕೊರಳಿಗೆ ಸಾಲದ ಕುಣಿಕೆ ಬಿಗಿಯಾಗತೊಡಗುತ್ತಿದ್ದಂತೆಯೇ ವಿದೇಶಗಳಿಗೆ ಪರಾರಿ ಯಾಗಿದ್ದರು. ಈ ಮೂವರಿಂದ ಬ್ಯಾಂಕ್‌ಗಳಿಗೆ 22,000 ಕೋ. ರೂ.ಗಳಷ್ಟು ಹಣ ವಂಚನೆಯಾಗಿತ್ತು. ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಆದೇಶದಂತೆ ಇವರಿಗೆ ಸೇರಿದ ಆಸ್ತಿಯ ಮುಟ್ಟುಗೋಲು ಪ್ರಕ್ರಿಯೆಯನ್ನು ಈ ಹಿಂದೆಯೇ ಕೈಗೆತ್ತಿಕೊಂಡಿತ್ತು. ಅದರಂತೆ ಇದೀಗ ಈ ಮೂವರು ವಂಚಕ ಉದ್ಯಮಿ ಗಳ ಹೆಸರಿನಲ್ಲಿದ್ದ 18,170 ಕೋ. ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿ ಕೊಂಡಿದೆ. ಅಷ್ಟು ಮಾತ್ರವಲ್ಲದೆ ಇವರ ಹೆಸರಿನಲ್ಲಿದ್ದ ಷೇರು ಗಳನ್ನು ಮಾರಾಟ ಮಾಡಿ 9,041.5 ಕೋ. ರೂ. ಗಳನ್ನು ಬ್ಯಾಂಕ್‌ಗಳಿಗೆ ನೀಡಿದೆ. ಈ ಕಾನೂನಾತ್ಮಕ ಕ್ರಮಗಳು ಆರ್ಥಿಕ ಅಪರಾಧಿಗಳ ಮೈಯಲ್ಲಿ ನಡುಕ ಸೃಷ್ಟಿಸಿದೆ.

ಅಪಾರ ಪ್ರಮಾಣದ ಹಣವನ್ನು ಬ್ಯಾಂಕ್‌ಗಳಿಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗುವ ಎಲ್ಲ ಆರ್ಥಿಕ ಅಪರಾಧಿಗಳ ಪಾಲಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದ್ದು ಭವಿಷ್ಯದಲ್ಲಿ ಇಂತಹ ವಂಚನೆಗಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ದಿಟ್ಟ ಕ್ರಮವಾಗಿದೆ. ಸದ್ಯ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯಲ್ಲಿ ವಂಚಕರ ಹೆಸರಿನಲ್ಲಿರುವ ವಿದೇಶಿ ಆಸ್ತಿಗಳೂ ಸೇರಿವೆ. ಇದರಿಂದಾಗಿ ವಿದೇಶದಲ್ಲಿ ಆಸ್ತಿ ಮಾಡಿ ಕೊಂಡಿ ರುವವರು ದೇಶದಲ್ಲಿ ವಂಚನೆ ನಡೆಸಿ ವಿದೇಶದಲ್ಲಿರುವ ತಮ್ಮ ಆಸ್ತಿ ಯಲ್ಲಿ ಮಜಾ ಉಡಾಯಿಸಬಹುದು ಎಂದು ಭಾವಿಸಿದವರಿಗೂ ಬಿಸಿ ತಟ್ಟಿದೆ. ಒಟ್ಟಾರೆ   ಈ ಎಲ್ಲ ಕ್ರಮಗಳು ಬ್ಯಾಂಕ್‌ಗಳಿಗಾಗಿರುವ ನಷ್ಟವನ್ನು ತುಂಬುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಮೈಲುಗಲ್ಲು.

ಇನ್ನು ಈ ವಂಚಕರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುವಂತೆ ಮಾಡುವ ಗುರುತರ ಜವಾಬ್ದಾರಿಯೂ ತನಿಖಾ ಸಂಸ್ಥೆ ಮತ್ತು ಸರಕಾರದ ಮೇಲಿದೆ. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆ ಅಂತಾರಾಷ್ಟ್ರೀಯ ಕಾನೂನು ನಿಯಮಾವಳಿಗಳಿಗನುಸಾರ ತನಿಖಾ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು. ಇದರ ಜತೆಯಲ್ಲಿ ಸರಕಾರ ಆರ್ಥಿಕ ಅಪರಾಧಿಗಳು ಸದ್ಯ ನೆಲೆಯಾಗಿರುವ ರಾಷ್ಟ್ರಗಳ ಮೇಲೆ ರಾಜ ತಾಂತ್ರಿಕ ನೆಲೆಯಲ್ಲಿ ಒತ್ತಡವನ್ನು ಹೇರಿ ಇವರೆಲ್ಲರನ್ನೂ ಅಲ್ಲಿಂದ ಭಾರತಕ್ಕೆ ಗಡೀಪಾರುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆ ರಾಷ್ಟ್ರಗಳಲ್ಲಿನ ಎಲ್ಲ ಕಾನೂನು ಮತ್ತು ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ದಾಖಲೆಪತ್ರಗಳನ್ನು ಸಲ್ಲಿಸುವ ಕಾರ್ಯ ಸರಕಾರದಿಂದಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next