Advertisement

ಐಟಿ ಅಧಿಕಾರಿಗಳ ಸೋಗಿನ ವಂಚಕರ ಸೆರೆ

11:49 AM Apr 29, 2018 | Team Udayavani |

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯೊಬ್ಬರಿಗೆ ಕರೆ ಮಾಡಿ “ನಿಮ್ಮ ಮೇಲೆ ದಾಳಿ ನಡೆಸದಿರಲು 10 ಕೋಟಿ ರೂ. ನೀಡಿ’ ಎಂದು ಬೇಡಿಕೆಯಿಟ್ಟಿದ್ದ ಇಬ್ಬರು ಎಂಜಿನಿಯರ್‌ಗಳು ಸೇರಿ ಮೂವರು ಉತ್ತರ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಯಶವಂತಪುರದ ವೆಂಕಟೇಶ್‌ (24), ಮೈಸೂರಿನ ವಿವೇಕ್‌ (22), ಆಡುಗೋಡಿಯ ಕುಮಾರ್‌ (44) ಬಂಧಿತರು. ಆರೋಪಿಗಳು ಏ.25ರಂದು ಯಶವಂತಪುರ ನಿವಾಸಿ ಗಣೇಶ್‌ ದೀಕ್ಷಿತ್‌ ಪತ್ನಿ ವೀಣಾರ ಮೊಬೈಲ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ವೆಂಕಟೇಶ್‌ ಮತ್ತು ವಿವೇಕ್‌ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದು, ಒಂದು ವರ್ಷ ಕಳೆದರೂ ಯಾವುದೇ ಕೆಲಸ ದೊರಕಿರಲಿಲ್ಲ. ಹೀಗಾಗಿ ಹಣ ಸಂಪಾದಿಸಲು ಈ ಕೃತ್ಯವೆಸಗಿದ್ದಾರೆ.

ನೀವು ನಮ್ಮ ಜಾತಿಯವರು!: ಬಂಧಿತರ ಪೈಕಿ ಆರೋಪಿ ವೆಂಕಟೇಶ್‌, ವೀಣಾ ಎಂಬುವವರಿಗೆ ಕರೆ ಮಾಡಿ, “ನಾವು ಆದಾಯ ತೆರಿಗೆ ಇಲಾಖೆಯವರು. ನಿಮ್ಮ ಪತಿ ಗಣೇಶ್‌ ದೀಕ್ಷಿತ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಸದಾನಂದಗೌಡಗೆ ಆಪ್ತರಾಗಿದ್ದಾರೆ.

ಈ ಇಬ್ಬರು ನಾಯಕರ ಬೇನಾಮಿ ಹಣವನ್ನು ನಿಮ್ಮ ಬಳಿ ಇಟ್ಟುಕೊಳ್ಳಲು ಸೂಚಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲದೆ, ನೀವು ಆದಾಯಕ್ಕೂ ಮೀರಿದ ಹಣ ಹೊಂದಿರುವ ಬಗ್ಗೆಯೂ ಮಾಹಿತಿಯಿದೆ. ನಿಮ್ಮ ಕಡತಗಳು ನಮ್ಮ ಬಳಿಯಿದ್ದು, ಒಂದೆರಡು ದಿನಗಳಲ್ಲಿ ದೆಹಲಿಯ ಸೂಪರ್‌ ಸ್ಕ್ವಾಡ್‌ನ‌ವರು ನಿಮ್ಮ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಿದ್ದಾರೆ.

Advertisement

ನೀವು ನಮ್ಮ ಜಾತಿಯವರೆಂದು ಈ ವಿಚಾರವನ್ನು ಹೇಳುತ್ತಿದ್ದೇನೆ. ದಾಳಿ ನಡೆಸದಿರಲು 10 ಕೋಟಿ ರೂ. ಹಣ ಕೊಡಬೇಕು,’ ಎಂದಿದ್ದಾನೆ. ಏ.26ರಂದು ಮತ್ತೂಬ್ಬ ಆರೋಪಿ ವಿವೇಕ್‌ ಕರೆ ಮಾಡಿ ಇದೇ ಬೇಡಿಕೆ ಇಟ್ಟಿದ್ದ. ಅನಂತರ ಏ.27ರಂದು ಮತ್ತೆ ಕರೆ ಮಾಡಿ ನಿಮ್ಮ ಆಪ್ತರ ಬಳಿ ನಾವು ಹೇಳಿದ ಪ್ರದೇಶಕ್ಕೆ 10 ಕೋಟಿ ರೂ. ತಲುಪಿಸಬೇಕು ಎಂದು ಬೆದರಿಕೆ ಹಾಕಿದ್ದರು.

ಇದರಿಂದ ಅನುಮಾನಗೊಂಡ ವೀಣಾ ಕೂಡಲೇ ಯಶವಂತಪುರ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ವೀಣಾ ಅವರ ಮೂಲಕವೇ ಆರೋಪಿಗಳಿಗೆ ಕರೆ ಮಾಡಿಸಿ ಯಾವ ಪ್ರದೇಶಕ್ಕೆ ಹಣ ತಲುಪಿಸಬೇಕು ಎಂದು ತಿಳಿದುಕೊಂಡಿದ್ದರು.

ಹೊಸೂರು ರಸ್ತೆ ಬಳಿ ಬರುವಂತೆ ಸೂಚಿಸಿದ ಆರೋಪಿಗಳು, ಏ.27ರಂದು ರಾತ್ರಿ 8 ಗಂಟೆ ಸುಮಾರಿಗೆ ಹಣಕ್ಕಾಗಿ ಕಾಯುತ್ತಿದ್ದರು. ಇತ್ತ ವೀಣಾ ದಂಪತಿ ಜತೆ ಹಣ ನೀಡುವವರ ಸೋಗಿನಲ್ಲಿ ಸ್ಥಳಕ್ಕೆ ಹೋದ ಪೊಲೀಸ್‌ ಸಿಬ್ಬಂದಿ, ಕಾರನ್ನು ಸುತ್ತವರಿದು ಆರೋಪಿಗಳನ್ನು ಬಂಧಿಸಿದ್ದಾರೆ.

ವೀಣಾ ಕುಟುಂಬದ ಬಗ್ಗೆ ತಿಳಿದಿದ್ದ ವೆಂಕಟೇಶ್‌: ವೀಣಾ ಪತಿ ಗಣೇಶ್‌ ದೀಕ್ಷಿತ್‌ ಜತೆ ಕೆಲಸ ಮಾಡುತ್ತಿದ್ದ ನವೀನ್‌ ಹಾಗೂ ಆರೋಪಿ ವೆಂಕಟೇಶ್‌ ಪರಿಚಿತರಾಗಿದ್ದು, ಗಣೇಶ್‌ ದೀಕ್ಷಿತ್‌ ಕೋಟ್ಯಂತರ ರೂ. ಆಸ್ತಿ ಹೊಂದಿರುವ ಬಗ್ಗೆ ನವೀನ್‌ನಿಂದ ಆರೋಪಿ ತಿಳಿದುಕೊಂಡಿದ್ದ. ಚುನಾವಣೆ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿರುವುದರ ಬಗ್ಗೆ ತಿಳಿದಿದ್ದ ಆರೋಪಿಗಳು, ಇದೇ ಸೋಗಿನಲ್ಲಿ ಹಣ ಲಪಾಟಿಯಿಸಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next