Advertisement
ಮೂಡಬಿದಿರೆ: ರಾಜ್ಯ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಮಂಗಳವಾರ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಕ್ರೀಡಾ ವಿದ್ಯಾರ್ಥಿನಿ ಕಾವ್ಯಾ ಸಾವಿನ ಪ್ರಕರಣದ ಕುರಿತು ವ್ಯಾಪಕ ವಿಚಾರಣೆ ನಡೆಸಿದರು. ಪುತ್ತಿಗೆ ಹೈಸ್ಕೂಲ್‌ಗೆ, ಬಳಿಕ ವಿದ್ಯಾಗಿರಿಯ ಹಾಸ್ಟೆಲ್‌ಗೆ ಭೇಟಿ ನೀಡಿ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯನ್ನು ಪರಿಶೀಲಿಸಿ ಶಿಕ್ಷಕರಿಂದ ಅವರು ಮಾಹಿತಿ ಪಡೆದುಕೊಂಡರು. ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಜತೆ ಉಗ್ರಪ್ಪ ಚರ್ಚಿಸಿದರು.
‘ಕಾವ್ಯಾಳ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಪೊಲೀಸ್ ತನಿಖೆ ಮತ್ತು ಮರಣೋತ್ತರ ಪರೀಕ್ಷಾ ವರದಿಯಿಂದ ಮಾತ್ರ ಗೊತ್ತಾಗಬೇಕಾಗಿದೆ. ಅದರ ಬಗ್ಗೆ ಈ ಹಂತದಲ್ಲಿ ನಾನು ಏನೂ ಹೇಳಲಾಗದು. ಇಂತಹ ದುರ್ಘಟನೆ ನಡೆಯಬಾರದಿತ್ತು. ಇದೊಂದು ಅಸ್ವಾಭಾವಿಕ ಸಾವು ಎಂದು ತೋರುತ್ತಿದ್ದು ಮೇಲ್ನೋಟಕ್ಕೆ ಕಂಡುಬಂದಿರುವ ಲೋಪ ದೋಷಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗುವುದು’ ಎಂದು ಉಗ್ರಪ್ಪ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಕಾವ್ಯಾ ಪ್ರಕರಣದ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತೇನೆ ಎಂದು ಅವರು ಪ್ರಕಟಿಸಿದರು. ‘ಕಾವ್ಯಾ ಸಾವು ನನಗೂ ನೋವು ತಂದಿದೆ. ಪ್ರತಿಭಾನ್ವಿತ ವಿದ್ಯಾರ್ಥಿನಿ ಕಾವ್ಯಾ ಬದುಕಿರುತ್ತಿದ್ದಲ್ಲಿ ಭವಿಷ್ಯದಲ್ಲಿ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುತ್ತಿದ್ದಳು’ ಎಂದು ಅಭಿಪ್ರಾಯಪಟ್ಟರು.
Related Articles
ವಿದ್ಯಾರ್ಥಿಗಳ ಬಳಿ ಮಾತನಾಡಿದ ಅವರು, ‘ಸಮಸ್ಯೆಗಳು ಬಂದಾಗ ಎದೆಗುಂದಬೇಡಿ, ಧೈರ್ಯದಿಂದ ನಿರ್ವಹಿಸಿರಿ. ಆತ್ಮಹತ್ಯೆಯಂಥ ಕೆಟ್ಟ ನಿರ್ಧಾರ ತೆಗೆದುಕೊಳ್ಳಬೇಡಿ. ಚೆನ್ನಾಗಿ ಓದಿ ಸಾಧನೆ ಮಾಡಿ ಎಂದು ಸಲಹೆ ನೀಡಿದರು. ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಎ.ಸಿ.ಪಿ. ರಾಜೇಂದ್ರ ಡಿ.ಎಸ್., ಎ.ಡಿ.ಸಿ. ಕುಮಾರ್, ಮೂಡಬಿದಿರೆ ತಹಶೀಲ್ದಾರ್ ಮಹಮ್ಮದ್ ಇಸಾಕ್, ಸಮಿತಿ ಸದಸ್ಯರಾದ ಡಾ| ವಸುಂಧರಾ, ವಿಮಲಾ, ಪ್ರಭಾ, ಜ್ಯೋತಿ, ಲೀಲಾ ಸಂಪಿಗೆ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ, ಸಿಡಿಪಿಒ ಶ್ಯಾಮಲಾ ಮತ್ತಿತರರು ಇದ್ದರು.
Advertisement
ರಕ್ಷಣಾ ಸೌಲಭ್ಯ ಬಲಪಡಿಸಬೇಕಾಗಿದೆ‘ಆಳ್ವಾಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ನೀಡುತ್ತಿರುವ ಪ್ರೋತ್ಸಾಹ, ವಿದ್ಯಾರ್ಥಿಗಳ ಸಾಧನೆ ಅಭಿನಂದನಾರ್ಹ. ಆದರೆ ಸುಮಾರು 26,000 ವಿದ್ಯಾರ್ಥಿಗಳಿರುವಲ್ಲಿ ಹೆಣ್ಮಕ್ಕಳಿಗೆ ನೀಡುವ ರಕ್ಷಣಾ ಸೌಲಭ್ಯವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಒಂದೇ ಕಟ್ಟಡದಲ್ಲಿ ತರಗತಿಗಳು ಮತ್ತು ವಿದ್ಯಾರ್ಥಿನಿಲಯ ಇರಬಾರದೆನ್ನುವುದೂ ಸೇರಿದಂತೆ ಖಾಸಗಿ ರೆಸಿಡೆನ್ಸಿ ಶಾಲೆಗಳು ಪಾಲಿಸಬೇಕಾದ ನಿಯಮಗಳನ್ನು ಪರಿಪಾಲಿಸಬೇಕಾಗಿದೆ’ ಎಂದ ಅವರು, ‘ಜಿಲ್ಲೆಯಲ್ಲಿ ಇಂತಹ 28 ಶಿಕ್ಷಣ ಸಂಸ್ಥೆಗಳು ಇವೆ. ರೆಸಿಡೆನ್ಸಿ ಶಾಲೆಗಳಿಗೆ ಸೂಕ್ತ ನಿಯಮಾವಳಿ ರೂಪಿಸಲು ಸರಕಾರದ ಗಮನ ಸೆಳೆಯಲಾಗುವುದು’
– ವಿ.ಎಸ್. ಉಗ್ರಪ್ಪ , ವಿಧಾನ ಪರಿಷತ್ ಸದಸ್ಯ