Advertisement

ತನಿಖೆಯ ಒತ್ತುವರಿ; ಎಲ್ಲ ಕಾಲದ ಒತ್ತುವರಿ ಬಗ್ಗೆ ತನಿಖೆ; ಬೊಮ್ಮಾಯಿ ಘೋಷಣೆ

01:00 AM Sep 20, 2022 | Team Udayavani |

ಬೆಂಗಳೂರು: ಕೆರೆ ಒತ್ತುವರಿ ಸಂಬಂಧ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ ಸದಸ್ಯರು ಮಧ್ಯೆ ಸವಾಲು- ಪ್ರತಿ ಸವಾಲಿಗೆ ಇಳಿದ ವಿದ್ಯಮಾನಕ್ಕೆ ವಿಧಾನಸಭೆ ಸಾಕ್ಷಿಯಾಯಿತು.

Advertisement

ಇದೇ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಯಾರ್ಯಾರ ಅವಧಿಯಲ್ಲಿ ಕೆರೆ, ರಾಜಕಾಲುವೆ ಒತ್ತುವರಿಯಾಗಿದೆ? ಯಾರ್ಯಾರು ಮಾಡಿಕೊಂಡಿದ್ದಾರೆ? ಯಾರ ಪ್ರಭಾವದಿಂದ ಕ್ರಮ ಕೈಗೊಂಡಿಲ್ಲ ಎಂಬು ದರ ಬಗ್ಗೆ ನ್ಯಾಯಾಂಗ ಅಧಿಕಾರಿಗಳ ನೇತೃತ್ವದಲ್ಲಿ ತಾಂತ್ರಿಕ ಅಧಿಕಾರಿಗಳನ್ನೂ ಒಳಗೊಂಡಂತೆ ಆಯೋಗ ರಚಿಸಿ ಸಮಗ್ರ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ನೆರೆ ಕುರಿತ ಚರ್ಚೆಗೆ ಕಂದಾಯ ಸಚಿವ ಆರ್‌.ಅಶೋಕ್‌ ಉತ್ತರ ನೀಡುವ ಸಂದರ್ಭ ದಲ್ಲಿ ಮಧ್ಯಪ್ರವೇಶಿಸಿದ ಮುಖ್ಯ ಮಂತ್ರಿ, ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಸ್ವರೂಪ ಕಳೆದುಕೊಂಡ, ಅಸ್ತಿತ್ವದಲ್ಲಿ ಇಲ್ಲದ ಕೆರೆ ಪ್ರದೇಶ ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಲು ಹೊರಡಿಸಲಾಗಿದ್ದ ಸುತ್ತೋಲೆ ಬಗ್ಗೆ ಸದನದಲ್ಲಿ ಪ್ರಸ್ತಾವಿಸಿದ್ದೇ ಕೋಲಾಹಲಕ್ಕೆ ಕಾರಣವಾಯಿತು.

ಸಂಪುಟದಲ್ಲಿ ಇಂಥ ನಿರ್ಣಯ ಕೈಗೊಂಡು ಸಾರ್ವಜನಿಕ ವಿರೋಧ ವ್ಯಕ್ತ ವಾದ ಅನಂತರ ಕೈಬಿಡಲಾಗಿತ್ತು ಎಂದು ಮುಖ್ಯ ಮಂತ್ರಿ ಯವರು ಹೇಳಿದರು.

ಕಾಂಗ್ರೆಸ್‌ನಿಂದ ಸಮರ್ಥನೆ
ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಜೀವಂತ ಕೆರೆ ಮುಚ್ಚುವ ಪ್ರಸ್ತಾವವಿರಲಿಲ್ಲ ಎಂದರು. ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌, ಕೃಷ್ಣಬೈರೇಗೌಡ, ಕೆರೆಗಳು ಸ್ವರೂಪ ಕಳೆದು ಕೊಂಡು ದಶಕಗಳು ಕಳೆದು ಅಲ್ಲಿ ಬಡಾವಣೆ ನಿರ್ಮಾಣವಾದರೂ ಪಹಣಿ ಯಲ್ಲಿ ಕೆರೆ ಎಂದೇ ಇತ್ತು. ಹೀಗಾಗಿ, ತಿದ್ದುಪಡಿ ತರಲು ನಿರ್ಧರಿಸಲಾಗಿತ್ತು ಎಂದು ಸಮಜಾಯಿಷಿ ಕೊಟ್ಟರು. ಆಗಿನ ಸಂಪುಟದ ಉದ್ದೇಶ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿಯವರು ಕುಟುಕಿದರು.

Advertisement

ಬಿಜೆಪಿಯಿಂದ ತಿರುಗೇಟು
ಕಂದಾಯ ಸಚಿವ ಅಶೋಕ್‌ ಮಾತ ನಾಡಿ, ನಾವು ಯಾರನ್ನೂ ದೂರು ತ್ತಿಲ್ಲ. ಆಯಾ ಕಾಲದಲ್ಲಿ ಅಧಿಕಾರಿ ಗಳು ಟಿಪ್ಪಣಿ ಸಿದ್ಧಪಡಿಸಿರುತ್ತಾರೆ. ಅಧಿಕಾರ ನಡೆಸು ವವರು ಅನುಷ್ಠಾನಕ್ಕೆ ತರುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಕುಟುಕಿದರು.

ಬಿಜೆಪಿಯ ಸಿ.ಟಿ. ರವಿ, “ಸ್ವರೂಪ ಕಳೆದು ಕೊಂಡ ಕೆರೆ ಬೇರೆ ಬಳಕೆಗೆ’ ಎಂಬ ಮಾತೇ ಅಪಾಯಕಾರಿ ಎಂದರು. ಬಸನಗೌಡ ಪಾಟೀಲ್‌ ಯತ್ನಾಳ್‌ ಚಲ್ಲಘಟ್ಟ ಕೆರೆ ನುಂಗಿದವರು ಯಾರು ಎಂಬ ಬಗ್ಗೆಯೂ ಬೆಳಕು ಚೆಲ್ಲಿ ಎಂದು ಆಗ್ರಹಿಸಿದರು.

ಅಶೋಕ್‌ ಮಾತನಾಡಿ, ಬೆಂಗಳೂರಿನಲ್ಲಿ 82 ಕೆರೆಗಳಿದ್ದವು. 27 ಕೆರೆಗಳನ್ನು ಬಿಡಿಎ ಮುಚ್ಚಿ ಬಡಾವಣೆ ನಿರ್ಮಿಸಿತು. ಅದೆಲ್ಲವೂ ಕಾಂಗ್ರೆಸ್‌ ಅವಧಿಯಲ್ಲೇ. ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಕಂಠೀರವ ಕ್ರೀಡಾಂಗಣ ನಿರ್ಮಾಣ ಕೆರೆ ಜಾಗದಲ್ಲೇ ಆಗಿದೆ. ಬಸ್‌ ನಿಲ್ದಾಣ ಎಲ್ಲಾದರೂ ಕಟ್ಟ ಬಹುದು, ಆದರೆ ಕೆರೆ ಎಲ್ಲೆಂದರಲ್ಲಿ ನಿರ್ಮಾಣ ಮಾಡಲಾಗದು ಎಂದರು.

ಇದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಳೇಕಹಳ್ಳಿ ಕೆರೆ ಡಾಲರ್ ಕಾಲನಿಯಾಗಿಸಿದ ಬಗ್ಗೆಯೂ ಅಶೋಕ್‌ ಪ್ರಸ್ತಾವಿಸಿ, ಅಲ್ಲಿ ಬಡವರಿಗೆ ನಿವೇಶನ ಕೊಡಲಾಯಿತೇ ಎಂದು ಕೇಳಿದರು. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು, ಈಗ ಸಮಸ್ಯೆ ನಿವಾರಣೆಗೆ ಏನು ಮಾಡುತ್ತೀರಿ ಹೇಳಿ? ಎಂದು ಪ್ರಶ್ನಿಸಿದರು. ರಾಮಲಿಂಗಾರೆಡ್ಡಿಯವರು, ಸುಮ್ಮನೆ ಸದನದ ದಿಕ್ಕು ತಪ್ಪಿಸಿ ಕಾಂಗ್ರೆಸ್‌ ಮೇಲೆ ಆರೋಪಿಸಬೇಡಿ ಎಂದರು. ಪರಸ್ಪರ ಮಾತಿನ ಚಕಮಕಿ ಮುಂದುವರಿದಾಗ ಸ್ಪೀಕರ್‌ ಅವರು ಸದನವನ್ನು ಭೋಜನ ವಿರಾಮದವರೆಗೆ ಮುಂದೂಡಿದರು.

ಸಮರ್ಥವಾಗಿ ನೆರೆ ನಿರ್ವಹಣೆ
ರಾಜ್ಯದಲ್ಲಿ ಸರಕಾರ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸಲಾಗಿದೆ. ಪರಿಹಾರ ವಿತರಣೆ ಕಾರ್ಯ ಆರಂಭವಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಅವರು ಹೇಳಿದರು.

ಮಳೆ ದಾಖಲೆ ಪ್ರಮಾಣದಲ್ಲಿ ಸುರಿದ ಕಾರಣ ಸಮಸ್ಯೆ ಸೃಷ್ಟಿಯಾಯಿತು ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದ ಅವರು, ಬಿಜೆಪಿ ಸರಕಾರ ಬಂದ ಅನಂತರ ರೈತರಿಗೆ ಬೆಳೆನಷ್ಟ ಪರಿಹಾರ ಸಕಾಲಕ್ಕೆ ಕೊಟ್ಟಿದೆ. ಹಿಂದೆ ರೈತರಿಗೆ ಪರಿಹಾರ ಸಿಗಲು ಏಳೆಂಟು ತಿಂಗಳು, ವರ್ಷ ಆಗುತ್ತಿತ್ತು ಎಂದರು.

ಸಿಎಂ ಸಮರ್ಥನೆ
ಮಳೆ ಪ್ರವಾಹದಿಂದ ಬೆಂಗಳೂರಿ ನಲ್ಲಿ ಉಂಟಾಗಿದ್ದ ಸಮಸ್ಯೆ ವಿಷಯದಲ್ಲಿ ಸರಕಾರದ ವಿರುದ್ಧ ಮುಗಿಬಿದ್ದ ವಿಪಕ್ಷ ಕಾಂಗ್ರೆಸ್‌ ನಾಯಕರಿಗೆ ರಾಜಕೀಯವಾಗಿಯೇ ಉತ್ತರ ನೀಡದೆ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಏನು ಮಾಡಬೇಕೆಂಬ ಬಗ್ಗೆ ಸಿಎಂ ಬೊಮ್ಮಾಯಿ ಸದನದ ಗಮನ ಸೆಳೆದರು. ಎಲ್ಲ ಸರಕಾರಗಳ ಅವಧಿಯಲ್ಲೂ ನಗರೀಕರಣದ ಹಿನ್ನೆಲೆ ಕೆರೆಗಳು ಕಣ್ಮರೆಯಾದದ್ದರ ಬಗ್ಗೆ ಟೀಕಿಸದೆ, ಎಲ್ಲರೂ ಸೇರಿ ಮುಂದೆ ಇಂತಹ ಸಮಸ್ಯೆ ಮರು ಕಳಿಸ ದಂತೆ ನೋಡಿಕೊಳ್ಳಬೇಕು ಎಂದರು. ಕೆರೆ ಒತ್ತುವರಿದಾರರು ಎಷ್ಟೇ ಪ್ರಭಾವ ಹೊಂದಿದ್ದರೂ ಸಮಗ್ರ ತನಿಖೆ ಮಾಡಿಸುವುದಾಗಿ ತಿಳಿಸಿದರು. ಇದನ್ನು ವಿಪಕ್ಷನಾಯಕ ಸಿದ್ದರಾಮಯ್ಯ ಸ್ವಾಗತಿಸಿದರು.

ಶಾಸಕರ ಗೈರಿಗೆ ಕಿಡಿ
ಸೋಮ ವಾರದಿಂದ ಎರಡನೇ ವಾರದ ವಿಧಾನಸಭೆ ಕಲಾಪ ಆರಂಭ ವಾಗಿದ್ದು, ಬೆಳಗಿನ ಪ್ರಶ್ನೋತ್ತರ ವೇಳೆ ಯಲ್ಲಿ ಅರ್ಧಕ್ಕರ್ಧ ಶಾಸಕರ ಗೈರಿಗೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕ್ರೋಧ ವ್ಯಕ್ತಪಡಿಸಿದರು.

ಈ ತನಿಖೆಗೆ ಸ್ವಾಗತ. ಮುಂದೆ ಕೆರೆ, ರಾಜಕಾಲುವೆ ಜಾಗ ಒತ್ತುವರಿ ಯಾಗ ದಂತೆಯೂ ತಡೆಯಬೇಕು.ಆ ನಿಟ್ಟಿನಲ್ಲಿ ಕಠಿನ ಕ್ರಮ ಕೈಗೊಳ್ಳಿ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next