ನಂಜನಗೂಡು: ಕೋವಿಡ್ 19 ಕ್ಕೆ ಮೂಲ ಕಾರಣವಾದ ಜುಬಲಿಯಂಟ್ಸ್ ಕಾರ್ಖಾನೆ ವಿರುದ್ಧ ಈಗಾಗಲೇ ತನಿಖೆ ಆರಂಭವಾಗಿದೆ. ಅದು ಪೂರ್ಣಗೊಳ್ಳದೇ ಕಾರ್ಖಾನೆ ಪುನರಾರಂಭವಿಲ್ಲ ಎಂದು ಶಾಸಕ ಹರ್ಷವರ್ಧನ ತಿಳಿಸಿದರು.
ಭಾನುವಾರ ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ನಡೆದ ಮನೆ ಮನೆಗೆ ಅಕ್ಕಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಈ ಪರಿಸ್ಥಿತಿಗೆ ಜುಬಲಿಯಂಟ್ಸ್ ನೇರ ಕಾರಣ. ಚೀನಾದಲ್ಲಿ ಕೋವಿಡ್ 19 ಮಾರಿ ಇದೆ ಎಂದು ತಿಳಿದಿದ್ದರೂ, ಅಲ್ಲಿಂದ ಕಚ್ಚಾ ಪದಾರ್ಥಗಳನ್ನು ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೇರು ಏಳೆಯಲು ಸಾಧ್ಯವಾಗಿಲ್ಲ: ದೀಪ ಹಚ್ಚುವುದು ಒಗ್ಗಟ್ಟಿನ ಸಂಕೇತವಾಗಿದೆ. ನಂಜನಗೂಡಿನ ಜನತೆ ದೀಪ ಹಚ್ಚಿ ಈ ಪರಿಸ್ಥಿತಿ ದೂರ ಮಾಡುವಂತೆ ಭಗವಂತನಲ್ಲಿ ಬೇಡಿಕೊಳ್ಳಿ. 3 ವರ್ಷಗಳಿಂದಲೂ ತಮಗೆ ಇಲ್ಲಿನ ಆರಾಧ್ಯ ದೈವ ಶ್ರೀಕಂಠೇಶ್ವರನ ತೇರು ಏಳೆಯಲು ಸಾಧ್ಯವಾಗುತ್ತಿಲ್ಲ. ಮುಂದಿನ ಬಾರಿಯಾದರೂ ಆ ಭಾಗ್ಯವನ್ನು ನನಗೆ ಭಗವಂತ ಕರುಣಿಸಲಿ ಎಂದರು.
ತಾಲೂಕಿನಲ್ಲಿ ಮನೆ ಮನೆಗೆ ಅಕ್ಕಿ, ಗೋಧಿ ವಿತರಿಸುವ ಕಾರ್ಯ ಆರಂಭವಾಗಿದೆ. ಸಾರ್ವಜನಿಕರು ಗುಂಪು ಸೇರದಂತೆ ಜಾಗೃತೆ ವಹಿಸಿ, ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು. ವಾಹನದಲ್ಲಿ ಹಾಪ್ ಕಾಮ್ಸ್‌ನಿಂದ ಸೋಮವಾರದಿಂದ ಮೂರು ವಾಹನಗಳು ತರಕಾರಿ ಹಾಗೂ ಹಣ್ಣು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು
ತಾಲೂಕು ದಂಡಾಧಿಕಾರಿ ಮಹೇಶ ಕುಮಾರ, ನಗರಸಭಾ ಆಯುಕ್ತ ಕರಿ ಬಸವಯ್ಯ, ತೋಟಗಾರಿಕಾ ಅಧಿಕಾರಿ ಗುರುಸ್ವಾಮಿ, ಪ್ರಕಾಶ ಹಾಜರಿದ್ದರು.