ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಹಾಕಲು ಅವಕಾಶ ನೀಡಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಯ ಹಿಂದೆ ಇರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಂಗಳವಾರ ತುರ್ತು ಉನ್ನತ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಗೃಹ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಪತ್ರಿಕಾಗೋಷ್ಠಿàಯಲ್ಲಿ ಮಾತನಾಡಿದ ಅವರು, ಹಿಜಾಬ್‌ಹಾಕಲು ಅವಕಾಶ ಕೇಳುವ ವಿದ್ಯಾರ್ಥಿಗಳ ಹಿಂದೆ ಯಾವ ಶಕ್ತಿ ಇದೆ ಎನ್ನುವ ಕುರಿತಂತೆ ಸಭೆಯಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ.
ಈಗಾಗಲೇ ಸಮವಸ್ತ್ರ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಲಾಗಿದ್ದು, ಅದನ್ನು ಎಲ್ಲರೂ ಪಾಲಿಸಬೇಕು. ವಿದ್ಯಾರ್ಥಿಗಳು ಅನಗತ್ಯ ಗಲಾಟೆ ಮಾಡಬಾರದು.ಶಾಲಾ ಕಾಲೇಜುಗಳಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಬಾರದು ಎನ್ನುವ ಕಾರಣಕ್ಕೆ ಮೂರು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೋರ್ಟ್ ಆದೇಶ ಬಂದ ನಂತರ ಮತ್ತೆ ಶಾಲಾ ಕಾಲೇಜುಗಳನ್ನು ತೆರೆಯಲಾಗುತ್ತದೆ. ಕೆಲವು ಕಾಲೇಜ್ ಕ್ಯಾಂಪಸ್‌ಗಳಲ್ಲಿ ಗಲಾಟೆಯಾಗಿದ್ದು, ಏಕಾಏಕಿ ಬೆಳವಣಿಗೆ ಆಗಿರುವುದರಿಂದ ಲಾಠಿ ಚಾರ್ಜ್ ಮಾಡಿದ್ದಾರೆ. ಆರೇಳು ಜನರನ್ನು ಬಂಧಿಸಲಾಗಿದೆ. ಶಿವಮೊಗ್ಗ ಹೊರತು ಪಡೆಸಿ ಪೊಲೀಸ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿದೆ. ಬೇರೆ ಎಲ್ಲ ಕಡೆ ಶಾಲಾ ಕಾಲೇಜುಗಳು ಚೆನ್ನಾಗಿ ನಡೆದಿವೆ ಎಂದು ಹೇಳಿದರು.
ಇದನ್ನೂ ಓದಿ:ಹಿಜಾಬ್ ಪ್ರಕರಣದ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆಯಾಗಲಿ: ಬಿ.ಸಿ. ನಾಗೇಶ್
ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಆರಗ ಜ್ಞಾನೇಂದ್ರ, ಡಿ.ಕೆ.ಶಿವಕುಮಾರ್ ಹಿರಿಯ ನಾಯಕರು ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ಮಾತನಾಡುವ ಮುನ್ನ ಪರಿಶೀಲನೆ ಮಾಡಬೇಕು. ಶಿವಮೊಗ್ಗದಲ್ಲಿ ಕಾಲೇಜು ಆವರಣದಲ್ಲಿರುವ ಧ್ವಜ ಸ್ಥಂಭ ಅಲ್ಲಿ ರಾಷ್ಟ್ರಧ್ವಜ ಇರುವುದಿಲ್ಲ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಕಚೇರಿ ಮೇಲೆ ಮಾತ್ರ ರಾಷ್ಟ್ರ ಧ್ವಜ ಹಾರುತ್ತದೆ. ಡಿ.ಕೆ.ಶಿವಕುಮಾರ್ ಪ್ರಚೋದನೆ ನೀಡುವ ಹೇಳಿಕೆ ನೀಡಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಜರಿದ್ದರು.