ಬಳ್ಳಾರಿ: ಬೆಂಗಳೂರಿನ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲಿನ ದಾಳಿ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು ಎಂದು ಜಿಲ್ಲಾ ಭೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ವಿ.ಮಹೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಸ್ಟ್ ನ್ನು ನೆಪವಾಗಿಸಿಕೊಂಡು ಈ ರೀತಿ ಶಾಸಕ ಮನೆ ಮತ್ತು ಪೊಲೀಸ್ ಠಾಣೆ ಮೇಲೆ ವ್ಯವಸ್ಥಿತವಾದ ದಾಳಿ ನಡೆಸಿರುವುದು ಖಂಡನೀಯವಾಗಿದೆ ಎಂದು ತಿಳಿಸಿದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಬಹುಮತಗಳಿಂದ ಜಯಗಳಿಸಿದ್ದಾರೆ. ಯಾವುದೇ ಜಾತಿ, ಧರ್ಮ ಎಂದು ಬೇಧ ಭಾವ ಮಾಡದೆ ಎಲ್ಲ ಧರ್ಮದ ಜನರೊಂದಿಗೂ ಬೆರೆಯುತ್ತಾರೆ. ಇಂಥ ಶಾಸಕ ಮನೆ ಮೇಲೆ ದಾಳಿ ನಡೆಸಿರುವುದು ಪೂರ್ವನಿಯೋಜಿತವಾಗಿದೆ. ದಾಳಿಯಲ್ಲಿ ಮನೆಯೊಂದಿಗೆ, ಮನೆಯ ಮಹಿಳೆಯರ ಮೇಲೂ ಹಲ್ಲೆಯಾಗಿದ್ದು, ಇಡೀ ಕುಟುಂಬ ಬೀದಿಗೆ ಬಂದಿದೆ. ಅವರಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು. ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ರಾಜಗೋಪಾಲ, ಸಂಘದ ಕಾರ್ಯಾಧ್ಯಕ್ಷ ವಿ. ಗಾದಿಲಿಂಗ, ಖಜಾಂಚಿ ಪಿ.ವಿ.ವೆಂಕಟೇಶ್ವರಲು, ನಗರ ಅಧ್ಯಕ್ಷ ಕಾಟೇಗುಡ್ಡ ತಮ್ಮಣ್ಣ ಸೇರಿ ಹಲವರು ಇದ್ದರು.