ಯಾವುದೇ ಒಂದು ಯೋಜನೆಯಲ್ಲಿ ನಾವು ಬಂಡವಾಳ ತೊಡಗಿಸಿದರೆ ಆಗ “ಹೂಡಿಕೆದಾರ’ರಷ್ಟೇ ಆಗಿರುತ್ತೇವೆ. ಅದರ ಬದಲು, ಹೂಡಿಕೆಯ ಹಿಂದೆಯೇ ಕೆಲಸ ಮಾಡಲು ತೊಡಗಿದರೆ, ಉದ್ಯಮಿಗಳಾಗಿ ರೂಪುಗೊಳ್ಳುತ್ತೇವೆ !
“ಹೂಡಿಕೆ’ ಎಂದ ತಕ್ಷಣ ಹೆಚ್ಚಿನವರಿಗೆ ಕೇವಲ ಷೇರು ಪೇಟೆಯ ಬಗೆಗೆ ಮಾತ್ರವೇ ಮನಸ್ಸು ಹೋಗುತ್ತದೆ. ಈಗ ಅದಕ್ಕೆ ಮ್ಯೂಚುವಲ್ ಫಂಡ್ ಕೂಡ ಸೇರಿಕೊಂಡಿದೆ. ಆದರೆ ಹೂಡಿಕೆ ಎಂದಾಗ ನಮ್ಮ ಹಣವನ್ನು ತೊಡಗಿಸಿ ಅದನ್ನು ಇನ್ನುಷ್ಟು ಹೆಚ್ಚಿಸಿಕೊಳ್ಳುವುದು ಹಾಗೂ ಲಾಭದಾಯಕವಾಗಿ ಮಾಡಿಕೊಳ್ಳುವುದು ಎಂದಷ್ಟೇ ಎಲ್ಲರೂ ಲೆಕ್ಕ ಹಾಕುತ್ತಾರೆ.
ಯಾವಾಗಲೂ ಹೂಡಿಕೆಯನ್ನು ಹೀಗೆ ನೋಡಬಹುದು. ಮೊದಲನೆಯದು ಹಣ ಹೂಡಿದಾಗ ಅಲ್ಲಿ ನಮ್ಮ ಕೆಲಸ ಇಲ್ಲ. ಉದಾಹರಣೆಗೆ ಒಂದು ನಿವೇಶನವನ್ನು ಹೂಡಿಕೆಯ ಕಾರಣಕ್ಕೆ ಕೊಂಡರೆ, ಒಮ್ಮೆ ಹಣ ಹೂಡಿ, ಆ ಜಾಗದಲ್ಲಿ ಬೇಲಿ ಹಾಕಿ ಬಿಟ್ಟರೆ ನಮ್ಮ ಕೆಲಸ ಅರ್ಧ ಮುಗಿದಂತೆ. ಆನಂತರದ ದಿನಗಳಲ್ಲಿ, ಅಗೀಗ ಹೋಗಿ ಏನಾದರೂ ಒತ್ತುವರಿ ಆಯಿತಾ? ಏನಾದರೂ ಮಾಡಿದರಾ ಎಂದು ನೋಡಿಕೊಂಡು ಬಂದರೆ ಸಾಕು. ಹಾಗೆಯೇ ಬ್ಯಾಂಕಿನ ಭದ್ರತಾ ಠೇವಣಿಯಲ್ಲಿ ಇಟ್ಟರೂ, ಬಾಂಡ್‌ಗಳಲ್ಲಿ ಹಾಕಿದರೂ, ಮ್ಯೂಚುವಲ್ ಫಂಡ್‌ನಲ್ಲಿ ಹಾಕಿದರೂ, ಷೇರಿನಲ್ಲಿ ತೊಡಗಿಸಿದರೂ ಎಲ್ಲರಿಗೂ ಹೂಡಿಕೆಯಲ್ಲಿ ಹಣ ತೊಡಗಿಸಿದೆನೆಂಬ ಸಮಾಧಾನ ಇದ್ದೇ ಇರುತ್ತದೆ. ಹೀಗೆ ಹೂಡಿಕೆ ಮಾಡಿದ ಹಣ ಬೆಳೆಯಲೇ ಬೇಕು. ಅದು ಬೆಳೆದೇ ತೀರುತ್ತದೆ ಎಂಬ ನಂಬಿಕೆಯೂ ಇರುತ್ತದೆ.
ಇನ್ನೊಂದು ರೀತಿಯ ಹೂಡಿಕೆ ಇರುತ್ತದೆ. ಇಲ್ಲಿ ಹಣ ತೊಡಗಿಸಿ ನಾವು ಕೆಲಸವನ್ನು ಮಾಡಬೇಕು. ಇಂತಹ ಹಣ ತೊಡಗಿಸುವಿಕೆ ಸ್ವಂತ ಉದ್ಯಮವಾಗಿ, ಉದ್ಯೋಗವಾಗಿ ರೂಪಗೊಳ್ಳುತ್ತದೆ. ಇಂತಹ ಹಣ ಹೂಡಿಕೆಯ ಜಾಣ ತನಕ್ಕೆ ಒಬ್ಬ ಮಹಿಳೆ ಕೊಟ್ಟ ಉದಾಹರಣೆ ಹಂಚಿಕೊಳ್ಳುವೆ.
ಕನಕಪುರ ಸಮೀಪದ ಆ ಮಹಿಳೆ ತಾನು ಹಾಲು ಮಾರಿ ಬಂದ ಹಣವನ್ನು ಹಾಗೇ ಇಟ್ಟುಕೊಳ್ಳುತ್ತಾಳೆ. ಒಂದು ನಿರ್ದಿಷ್ಟ ಹಬ್ಬದ ಸಂದರ್ಭ, ಕೆಲವು ವಿಶೇಷ ಸನ್ನಿವೇಷಗಳಲ್ಲಿ ಕುರಿಗಳು, ಅದರಲ್ಲೂ ಎಳೆಯ ಕುರಿ ಮರಿಗಳು ಕಡಿಮೆ ಬೆಲೆಗೆ ಸಿಗುತ್ತವಂತೆ. ಹಾಗೆ ಸಿಕ್ಕ ಕುರಿ ಮರಿಗಳು ಹಾಗೂ ಮರಿ ಹಾಕಬಹುದಾದ ಕುರಿಗಳನ್ನು ಕೊಂಡು ತಂದು, ಬೆಳೆಸಿ ಆ ನಂತರ ಅದನ್ನು ಹೆಚ್ಚಿನ ದರಕ್ಕೆ ಮಾರುತ್ತಾಳೆ. ಕುರಿಗಳು ಹಾಗೂ ಮರಿಗಳನ್ನು ಹೀಗೆ ನಾಲ್ಕೈದು ತಿಂಗಳು ಸಾಕಿ ಮಾರುವುದರಿಂದ ಹಾಕಿದ ಹಣ ಅಧಿಕ ಲಾಭ ತರುವುದಂತೆ.
ಎಷ್ಟೋ ಸಾರಿ ಹೀಗೆ ಕೊಂಡು ಮಾರಿ ಮಾಡುತ್ತ ಅವಳು ವರ್ಷಕ್ಕೆ ಲಕ್ಷಾಂತರ ರೂಪಾಯಿ ಸಂಪಾದಿಸುವುದಿದೆ. ಒಂದೆಡೆ ಬಂದ ಹಣ ಮತ್ತೆ ಇನ್ನೊಂದೆಡೆ ಬೆಳೆಯುತ್ತಿದೆ. ಅದೂ ಆ ಬೆಳವಣಿಗೆ ಅವರ ಕೈಯಲ್ಲಿಯೇ ಇದೆ. ಇಲ್ಲಿ ಇವಳು ಕೇವಲ ಹಣ ಮಾತ್ರ ತೊಡಗಿಸಲಿಲ್ಲ. ಕೆಲಸವನ್ನೂ ಮಾಡುತ್ತಾಳೆ. ನಾವು ಕೇವಲ ಹಣ ತೊಡಗಿಸಿದರೆ ಹೂಡಿಕೆದಾರರು ಆಗಬಹುದು. ಆದರೆ ಹಣ ತೊಡಗಿಸಿ ಕೆಲಸವನ್ನೂ ಮಾಡಿದರೆ ಉದ್ಯಮಿಗಳಾಗಿ ರೂಪಗೊಳ್ಳುತ್ತೇವೆ. ಹೀಗೆ ಸಣ್ಣ ಸಣ್ಣ ಉಳಿತಾಯ, ಸಣ್ಣ ಸಣ್ಣ ಕೆಲಸದಿಂದ ಆರಂಭವಾದ ಎಷ್ಟೋ ಉದ್ಯಮಗಳೇ ಈಗ ಎತ್ತರಕ್ಕೆ ಬೆಳೆದಿದೆ.
ಎತ್ತರಕ್ಕೆ ಏರಬೇಕು ಎಂಬ ಆಸೆ ಮತ್ತು ಎತ್ತರೆತ್ತರ ಬೆಳೆಯ ಬಲ್ಲೆ ಎಂಬ ಭರವಸೆಯೇ ಎಲ್ಲ ಹಣ ಹೂಡಿಕೆಯ ಹಿಂದಿರುವ ಆಶಯ.
– ಸುಧಾಶರ್ಮ ಚವತ್ತಿ