ಪುತ್ತೂರು: ಪುತ್ತೂರು ಗೇರು ಸಂಶೋಧನ ನಿರ್ದೇಶನಾಲಯದ ವಿಜ್ಞಾನಿಗಳು 23 ತೋಟಗಾರಿಕೆ ಬೆಳೆಗಳ ಸಂಶೋಧನ ಕೇಂದ್ರಗಳಿಂದ ಗಿಡಗಳ ಮಾಹಿತಿಗಳನ್ನು ಕೇವಲ ಒಂದು ಕ್ಲಿಕ್‌ನಲ್ಲಿ ಗಮನಿಸಬಹುದಾದ ಟ್ಯಾಕಿಂಗ್ ಸಿಸ್ಟಮ್ ಆವಿಷ್ಕರಿಸಿದ್ದಾರೆ.
ರಾಷ್ಟ್ರದ ಗೇರು ಸಂಶೋಧನೆಗೆ ಕೇಂದ್ರಸ್ಥಾನವಾಗಿರುವ ಪುತ್ತೂರಿನ ಡಿಸಿಆರ್ (ಗೇರು ಸಂಶೋಧನ ನಿರ್ದೇಶನಾಲಯ) ವಿಜ್ಞಾನಿ ಡಾ| ಮೋಹನ್ ತಲಕಾಲುಕೊಪ್ಪ ನೇತೃತ್ವದ ವಿಜ್ಞಾನಿಗಳ ತಂಡ ಕ್ಯಾಶ್ಯು ಫಾರ್ಮರ್ಸ್ ಟ್ರ್ಯಾಕಿಂಗ್ ಸಿಸ್ಟಮ್ ಎಂಬ ಹೆಸರಿನ ಸಾಫ್ಟ್‌ವೇರ್ ಆವಿಷ್ಕರಿಸಿದೆ.
ರೈತರಿಗೆ ನೀಡಲಾಗುವ ಗೇರು ಗಿಡಗಳ ಪ್ರತಿ ಬಿಲ್‌ನ ಮೇಲೆ ಕ್ಯೂಆರ್ ಕೋಡ್ ಆಳವಡಿಸಲಾಗುತ್ತದೆ. ಇದನ್ನು ಮೊಬೈಲ್‌ನಲ್ಲಿ ಕ್ಲಿಕ್ ಮಾಡಿದರೆ ರೈತನಿಗೆ ತಾನು ಖರೀದಿಸಿದ ಗಿಡಗಳ ತಳಿ, ವಿವರ ಪಡೆಯಲು ಸಾಧ್ಯವಿದೆ. ಗಿಡಗಳ ಮೇಲೆ ಕ್ಯೂ ಆರ್ ಕೋಡ್ ಅಳವಡಿಸಿದರೆ ಅದು ಹಾಳಾಗುವ ಸಾಧ್ಯತೆ ಇರುವುದರಿಂದ ಬಿಲ್ ಮೇಲೆ ಇದನ್ನು ಅಳವಡಿಸಲಾಗಿದೆ.
ಈ ತಂತ್ರಾಂಶದಿಂದ ಗಿಡಗಳು ಎಲ್ಲಿಗೆ, ಯಾವಾಗ ತಲುಪಿದೆ ? ನಿರ್ದಿಷ್ಟ ಅವಧಿಗೆ ಎಷ್ಟು ಗಿಡ ಮಾರಾಟವಾಗಿದೆ ಎಂಬ ವಿವರವನ್ನು ಪಡೆಯಬಹುದು. ಗಿಡ ಕೊಂಡು ಹೋದ ಕೃಷಿಕರನ್ನು ಕಂಡು ಹಿಡಿಯಲು ಸಾಧ್ಯವಿದೆ. ತಂತ್ರಾಂಶದ ಮಾಹಿತಿಯಿಂದ ಗಿಡ/ತಳಿ ಹಂಚಿಕೆಯ ಪ್ರದೇಶಗಳ ನಕ್ಷೆ ತಯಾರಿಸಬಹುದು. ದೇಶದ ಎಷ್ಟು ಎಕ್ರೆ ಪ್ರದೇಶದಲ್ಲಿ ಸಂಸ್ಥೆಯ ಗಿಡಗಳಿವೆ ಎಂಬ ಮಾಹಿತಿ ಪಡೆಯಬಹುದು.
ಹಲವು ವರ್ಷಗಳ ಗಿಡ/ ತಳಿ ಬೇಡಿಕೆ ವಿಶ್ಲೇಷಿಸಿ ಈ ವರ್ಷ ಎಷ್ಟು ಬೇಡಿಕೆ ಬರಬಹುದು ಎಂಬ ಮಾಹಿತಿ ಪಡೆಯಲು ಸಾಧ್ಯವಿದೆ. ಇದೇ ಮಾದರಿಯನ್ನು ಖಾಸಗಿ ನರ್ಸರಿಗಳು ಕೂಡ ಬಳಸಲು ಸಾಧ್ಯವಿದೆ. ವಿಟ್ಲ ಮತ್ತು ಕಾಸರಗೋಡು ಸಿಪಿಸಿಆರ್‌ಐಗಳು ಅಡಕೆ ಮತ್ತು ತೆಂಗು ಗಿಡಗಳಿಗೂ ಇದನ್ನು ಅನುಷ್ಠಾನಿಸಲಿದ್ದಾರೆ.