Advertisement

ಐಟಿ ಉದ್ಯೋಗಿಗಳ ರಂಗಾಸಕ್ತಿಗೆ ದಂಗಾದ ಸಂದರ್ಶಕರು!

05:03 PM Oct 27, 2018 | Team Udayavani |

ಹಾವೇರಿ: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯಾದ್ಯಂತ ನ. 21ರಿಂದ ಮಾರ್ಚ್‌ 31ರ ವರೆಗೆ ಹಮ್ಮಿಕೊಂಡಿರುವ ಮಹಾತ್ಮಾಗಾಂಧೀಜಿ ಅವರ ಕುರಿತ ರಂಗ ರೂಪಕದಲ್ಲಿ ಅಭಿನಯಿಸಲು ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಅಧಿಕ ಕಲಾವಿದರು ಸಂದರ್ಶನಕ್ಕೆ ಹಾಜರಾದರು.

Advertisement

ಕಲಾವಿದರ ಆಯ್ಕೆ ಪ್ರಕ್ರಿಯೆ ಶುಕ್ರವಾರ ವಾರ್ತಾ ಭವನದಲ್ಲಿ ನಡೆಯಿತು. ‘ಗಾಂಧಿ 150’ರಂಗ ಪಯಣದ ನಿರ್ದೇಶಕ ಶ್ರೀಪಾದ್‌ ಭಟ್‌ ನೇತೃತ್ವದ ಕಲಾವಿದರ ಆಯ್ಕೆ ತಂಡದ ಎದುರು ರಂಗ ಭೂಮಿಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಕಲಾವಿದರು ರಂಗಾಯಣ ಹಾಗೂ ಸಮುದಾಯ ಸೇರಿದಂತೆ ವಿವಿಧ ರಂಗ ಸಂಘಟನೆಯ ಕಲಾವಿದರು, ರಂಗ ಶಿಕ್ಷಣ ಪಡೆದ ಪದವೀಧರರು ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಸಂದರ್ಶನದಲ್ಲಿ ಭಾಗವಹಿಸಿದ್ದರು.

ವಿಶೇಷವಾಗಿ ಹರಿಯಾಣ ಮೂಲದ ದೆಹಲಿ ಜವಾಹರಲಾಲ್‌ ನೆಹರು ರಾಷ್ಟ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಗುಲ್‌ಷನ್‌, ಬೆಂಗಳೂರು, ಮೈಸೂರು ಹಾಗೂ ದೆಹಲಿಯಲ್ಲಿ ಪ್ರತಿಷ್ಠಿತ ವಿಪ್ರೋ, ಇನ್ಫೋಸಿಸ್  ಸೇರಿದಂತೆ ವಿವಿಧ ಐಟಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು ಅಭಿನಯಿಸಲು ಆಸಕ್ತಿ ತೋರಿ ಸಂದರ್ಶನಕ್ಕೆ ಹಾಜರಾಗಿ ಎಲ್ಲರ ಗಮನ ಸೆಳೆದರು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಅವರ ಪರಿಕಲ್ಪನೆಯಲ್ಲಿ ಗಾಂಧಿ ರೂಪಕ ಸಿದ್ಧವಾಗಿದೆ. ಈ ರೂಪಕ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಗಾಂಧೀಜಿಯವರ ಜೀವನ ಸಂದೇಶಗಳನ್ನು ತಲುಪಿಸುವ ನಿಟ್ಟಿನಲ್ಲಿ ಬೋಳೂವಾರು ಮಹಮದ್‌ ಕುಂಞ ಅವರ ಬಾಪು ಗಾಂಧಿ , ಗಾಂಧಿ ಬಾಪು ಆದ ಕಥೆ, ಕಿರು ಕಾದಂಬರಿಯನ್ನು ರಂಗ ಕರ್ಮಿ ಡಾ| ಶ್ರೀಪಾದ್‌ ಭಟ್‌ ಅವರು ರಂಗರೂಪಕ್ಕಿಳಿಸಿ ನಿರ್ದೇಶನ ಮಾಡುತ್ತಿದ್ದಾರೆ. ನವೆಂಬರ್‌ 1 ರಿಂದ 20ರ ವರೆಗೆ ಹಾವೇರಿಯಲ್ಲಿ ತರಬೇತಿ ಜರುಗಲಿದೆ. 21ರಿಂದ ಗಾಂಧಿ ಪಯಣದ ತಿರುಗಾಟ ಆರಂಭಗೊಳ್ಳಲಿದೆ. 32 ಜನ ಕಲಾವಿದರನ್ನು ಶುಕ್ರವಾರ ಆಯ್ಕೆ ಮಾಡಲಾಯಿತು.

ಐಟಿಗಿಂತ ಕಲೆ ಮುಖ್ಯ
ನಮಗೆ ಬದಲಾವಣೆ ಬೇಕಾಗಿದೆ. ತರಬೇತಿಗೆ ಆಯ್ಕೆಯಾದರೆ ಕೆಲಸ ತೊರೆಯಲು ಸಿದ್ಧ ಹಾಗೂ ರಂಗ ಕ್ಷೇತ್ರದಲ್ಲಿ ನಾವು ಮುಂದುವರೆಯಲು ಬದ್ಧ ಎಂದು ಐಟಿ ಉದ್ಯೋಗಿಗಳು ಹೇಳಿದ್ದು ಸಂದರ್ಶನ ವೇಳೆ ಎಲ್ಲರ ಗಮನ ಸೆಳೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next