ಯಲ್ಲಾಪುರ: ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಿಸಿ, ನಂತರ ಹಣ ಡ್ರಾ ಮಾಡಿ ಮೋಸ ಮಾಡಿದ ಅಂತರ್ ರಾಜ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಇಂದಾಪುರದ ಅಮುಲ್ ಭಗವಾನ್ ಶೆಂಡೆ ಬಂಧಿತ ವ್ಯಕ್ತಿ.
ಈತ ಕಳೆದ ಜು.17 ರಂದು ಪಟ್ಟಣದ ಎಟಿಎಂವೊಂದರ ಬಳಿ ವ್ಯಕ್ತಿಯೊಬ್ಬರಿಗೆ ಹಣ ಡ್ರಾ ಮಾಡಲು ಸಹಾಯ ಮಾಡಲು ಹೋಗಿದ್ದು, ಆ ವೇಳೆ ಅವರ ಎಟಿಎಂ ಕಾರ್ಡ್ ತಾನು ಇಟ್ಟುಕೊಂಡು, ಬೇರೊಂದು ಎಟಿಎಂ ಕಾರ್ಡನ್ನು ಮರಳಿಸಿದ್ದ.
ನಂತರ ಶಿರಸಿಗೆ ತೆರಳಿ ಅಲ್ಲಿನ ಎಟಿಎಂ ನಿಂದ ಆ ಕಾರ್ಡ್ ಬಳಸಿ 25,100 ರೂ. ಡ್ರಾ ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು, ಎಟಿಎಂನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ 12,00೦ ರೂ. ನಗದು, ಕೃತ್ಯಕ್ಕೆ ಬಳಸಿದ ಎರಡು ಎಟಿಎಂ ಕಾರ್ಡ್ ಗಳು ಹಾಗೂ ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈತನ ವಿರುದ್ಧ ಮಹಾರಾಷ್ಟ್ರದ ಚಂದಗಡ, ಕಾಗಲ್, ಮುರಗೋಡ, ಮಾಳಶಿರಸ ಠಾಣೆಗಳಲ್ಲಿ, ಕರ್ನಾಟಕದಲ್ಲಿ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ, ಉತ್ತರಕನ್ನಡದ ಸಿದ್ದಾಪುರ, ಅಂಕೋಲಾ ಠಾಣೆಗಳಲ್ಲಿ ಹಾಗೂ ಮಧ್ಯಪ್ರದೇಶ ರಾಜ್ಯದಲ್ಲೂ ವಿವಿಧೆಡೆ ಇದೇ ಮಾದರಿಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದ್ದು, ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಡಿ.ವೈ.ಎಸ್.ಪಿ ಗಣೇಶ.ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ, ಶ್ಯಾಮ ಪಾವಸ್ಕರ್, ಎಎಸ್ಐ ಮಂಜುನಾಥ ಮನ್ನಂಗಿ, ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಿರೀಶ ಲಮಾಣಿ, ಪ್ರವೀಣ ಪೂಜಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.