Advertisement

ಅಂತಾರಾಜ್ಯ ಕಳ್ಳನ ಸೆರೆ, ಚಿನ್ನಾಭರಣ ವಶ

06:06 PM Sep 20, 2022 | Team Udayavani |

ಬೀದರ: ಜನ ವಸತಿ ಮನೆಗಳನ್ನೇ ಟಾರ್ಗೆಟ್‌ ಮಾಡಿ ಕನ್ನ ಹಾಕುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಸೋಮವಾರ ಜಿಲ್ಲಾ ಪೊಲೀಸರು ಬಂಧಿಸಿ, ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Advertisement

ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಸುರೇಶ ಯಲ್ಲಪ್ಪ ಎಂಬಾತನೇ ಬಂಧಿತ ಆರೋಪಿ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸುರೇಶ ಆಗಸ್ಟ್‌ ಕೊನೆಯ ವಾರದಲ್ಲಿ ಬೀದರನ ಓಲ್ಡ್‌ ಆದರ್ಶ ಬಡಾವಣೆ ಹಾಗೂ ಜ್ಯೋತಿ ಕಾಲೋನಿಯಲ್ಲಿ ಸರಣಿ ಕಳ್ಳತನ ಪ್ರಕರಣಗಳಲ್ಲಿಯೂ ಇತನೇ ಭಾಗಿಯಾಗಿರುವುದು ದೃಢವಾಗಿದೆ. ಜ್ಯೋತಿ ಹಾಗೂ ಆದರ್ಶ ಕಾಲೋನಿಯಲ್ಲಿ ಒಂದು ವಾರದೊಳಗೆ ಒಟ್ಟು 9 ಪ್ರಕರಣಗಳು ವರದಿಯಾಗಿದ್ದವು. ಮೂರು ಮನೆ ಕಳ್ಳತನ ಹಾಗೂ 6 ಕಳ್ಳತನಕ್ಕೆ ಯತ್ನ ನಡೆದಿತ್ತು. ಪ್ರಕರಣ ಸಂಬಂಧ ವಿಶೇಷ ತಂಡ ರಚಿಸಿ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಲಾಗಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರ ಬಾಬು ಮಾಹಿತಿ ನೀಡಿದರು.

ಎಲ್ಲ ಕಳ್ಳತನ ಪ್ರಕರಣಗಳನ್ನು ಒಬ್ಬನೇ ಮಾಡಿದ್ದು, ಇತನಿಂದ 10 ಲಕ್ಷ ರೂ. ಮೌಲ್ಯದ 200 ಗ್ರಾಂ. ಬಂಗಾರ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಬಂಧಿತನು ನಟೋರಿಯಸ್‌ ಕ್ರಿಮಿನಲ್‌ ಇದ್ದು, ಅಂತಾರಾಜ್ಯ ಕಳ್ಳನಾಗಿದ್ದಾನೆ. ಇತನ ವಿರುದ್ಧ ಸೊಲ್ಲಾಪುರ, ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬಾಗಲಕೋಟೆ, ವಿಜಯಪುರ ನಗರಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್‌, ಡಿವೈಎಸ್ಪಿ ಕೆ.ಎಂ. ಸತೀಶ ಮಾರ್ಗದರ್ಶನದಲ್ಲಿ ರಚಿಸಿದ ವಿಶೇಷ ತಂಡದಲ್ಲಿ ಗಾಂಗಂಜ್‌ ಸಿಪಿಐ ಜಿ.ಎಸ್‌. ಬಿರಾದಾರ್‌, ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ, ನ್ಯೂಟೌನ್‌ ಸಿಪಿಐ ಕಪಿಲ್‌, ಪಿಎಸ್‌ಐಗಳಾದ ಸೈಯದ್‌ ಪಟೇಲ್‌, ದಯಾನಂದ ಮಡಿವಾಳ ಹಾಗೂ ಸಿಬ್ಬಂದಿಗಳಾದ ಆರೀಫ್‌, ನವೀನ್‌, ಅನೀಲ್‌, ಇರ್ಫಾನ್‌, ಗಂಗಾಧರ, ಪ್ರವೀಣ ಮತ್ತು ಶ್ರೀನಿವಾಸ ಇದ್ದರು. ವಿಶೇಷ ತಂಡಕ್ಕೆ ನಗದು ಬಹುಮಾನವನ್ನು ಎಸ್ಪಿ ಕಿಶೋರ ಬಾಬು ವಿತರಣೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next