ಕೋಲಾರ: ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ವೇಮಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಸ್‌ಪಿ ಡೆಕ್ಕಾ ಕಿಶೋರ್‌ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿ.ಎಲ್. ರಮೇಶ್ ನೇತೃತ್ವದಲ್ಲಿ ವೇಮಗಲ್ ಇನ್ಸ್‌ಪೆಕ್ಟರ್ ಶಿವರಾಜ್ ಅವರ ತಂಡ ಮುಖ್ಯಪೇದೆ ಆರ್.ಸುಧಾಕರ್, ಜಗದೀಶ್, ಪೇದೆಗಳಾದ ಬಾಲಾಜಿ, ಮಹೇಶ್, ಪ್ರಭು, ಚಾಲಕ ನಾಗೇಶ್ ಅವರ ತಂಡವು ಆಂಧ್ರದಿಂದ ತಮಿಳುನಾಡಿಗೆ ಗಾಂಜಾ ಸಾಗಿಸಿಕೊಂಡು ಅಲ್ಲಲ್ಲಿ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ;- ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್
ಇಬ್ಬರ ಬಂಧನ: ನರಸಾಪುರ ಕೈಗಾರಿಕಾ ಪ್ರದೇಶದ ಜೋಡಿ ಕೃಷ್ಣಾಪುರ ಬಳಿ ಮಾಲೂರು ರಸ್ತೆಯಲ್ಲಿ ತೆರಳುತ್ತಿದ್ದ ಆರೋಪಿಗಳ ಖಚಿತ ಮಾಹಿತಿ ಪಡೆದುಕೊಂಡು ಬೆನ್ನಟ್ಟಿದ ಪೊಲೀಸರು ಆರೋಪಿಗಳಿಂದ 5 ಲಕ್ಷ ರೂ.ನ 20 ಕೇಜಿ ಗಾಂಜಾ ವಶಪಡಿಸಿಕೊಂಡು ತಮಿಳುನಾಡು ಮೂಲದ ಉತ್ತಮಪಾಳಯಂ ಗ್ರಾಮದ ಮಾರೀಶ್ವರನ್ (27) ಮತ್ತು ತಮಿಳುನಾಡು ಮೂಲದ ಕಟ್ಟಮಡುವು ಗ್ರಾಮದ ಸಮಯ್ಯ ಶ್ಯಾಮ್ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಉತ್ತಮ ಕಾರ್ಯ ಚಟುವಟಿಕೆ: ವೇಮಗಲ್ ಇನ್ಸ್‌ಪೆಕ್ಟರ್ ಶಿವರಾಜ್ ಠಾಣೆಗೆ ಬಂದಾಗಿನಿಂದ ಉತ್ತಮ ಕಾರ್ಯ ಚಟುವಟಿಕೆಗಳು ನಡೆಯುತ್ತಿದೆ. ಠಾಣೆಗೆ ಬರುವ ಎಲ್ಲಾ ದೂರು ಪ್ರಕರಣಗಳಲ್ಲಿ ಒಂದರ ಮೇಲೊಂದರಂತೆ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ಡೆಕ್ಕಾ ಕಿಶೋರ್‌ಬಾಬು ಶ್ಲಾಘಿಸಿದ್ದಾರೆ. ಇನ್ಸ್ಪೆಕ್ಟರ್ ಶಿವರಾಜ್, ಮುಖ್ಯಪೇದೆ ಆರ್.ಸುಧಾಕರ್, ಜಗದೀಶ್, ನಾಗರಾಜ್, ಪೇದೆಗಳಾದ ಬಾಲಾಜಿ, ಮಹೇಶ್, ಪ್ರಭು, ಮರೇಗೌಡ, ವೇಣುಗೋಪಾಲ್, ಕೃಷ್ಣಮೂರ್ತಿ, ಚಾಲಕ ನಾಗೇಶ್ ಉಪಸ್ಥಿತರಿದ್ದರು.