ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯನ್ನು ಅಂತಾರಾಜ್ಯ ಮಕ್ಕಳ ಮಾರಾಟದ ಅಡ್ಡೆಯಾಗಿ ಮಾಡಿಕೊಂಡಿರುವ ಖತರ್ನಾಕ್ ಗ್ಯಾಂಗ್ ಪತ್ತೆ ಹಚ್ಚಲಾಗಿದ್ದು, ನೆರೆಯ ಮಹಾರಾಷ್ಟ್ರದಿಂದ ಮಗುವನ್ನು ತಂದು ಬೆಳಗಾವಿಯಲ್ಲಿ ವ್ಯವಹಾರ ಕುದುರಿಸಿ ಗೋವಾಕ್ಕೆ 4.50 ಲಕ್ಷ ರೂ.ಗೆ ಮಾರಾಟ ಮಾಡಿದ್ದ ಆರು ಜನರ ವಿರುದ್ಧ ದೂರು ದಾಖಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿಯ ರಾಜೇಂದ್ರ ಮೇತ್ರಿ, ಶಿಲ್ಪಾ ಮೇತ್ರಿ, ಗೋವಾ ರಾಜ್ಯದ ಸ್ಮೀತಾ ವಾಡೀಕರ, ಬೆಳಗಾವಿ ನಗರದ ವಂದನಾ ಸುರ್ವೆ, ಮಹಾರಾಷ್ಟ್ರ ಸೊಲ್ಲಾಪುರದ ರವಿ ರಾವುತ, ರಾಣಿ ರಾವುತ ದಂಪತಿ ಎಂಬವರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗುವನ್ನು ರಕ್ಷಿಸಿ ಸ್ವಾಮಿ ವಿವೇಕಾನಂದ ಮಕ್ಕಳ ದತ್ತು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.
ಸಾಂಗಲಿಯ ಮೇತ್ರಿ ದಂಪತಿ ತಮ್ಮ 1.10 ವರ್ಷದ ಹೆತ್ತ ಮಗುವನ್ನು ಗೋವಾದ ಸ್ಮೀತಾ ವಾಡೀಕರ ಅವರಿಗೆ ಮಾರಾಟ ಮಾಡಿದ್ದರು. ಮಗು ಮಾರಾಟ ಮಾಡಲು ಮಧ್ಯವರ್ತಿಗಳು ಮಹಿಳೆಯರೇ ಕಿಂಗ್‌ಪಿನ್‌ಗಳಾಗಿದ್ದಾರೆ. ಬೆಳಗಾವಿಯ ವಂದನಾ, ಸೊಲ್ಲಾಪುರದ ರವಿ ಹಾಗೂ ರಾಣಿ ಮಧ್ಯವರ್ತಿಗಳಾಗಿದ್ದರು. ಉತ್ತರ ಕನ್ನಡದ ರಾಮನಗರದ ಹೊಟೇಲ್‌ನಲ್ಲಿ ವ್ಯವಹಾರ ಕುದಿರಿಸಿ ನಂತರ ಮಗುವನ್ನು ಗೋವಾದ ದಂಪತಿಗೆ ಕೊಟ್ಟಿದ್ದರು.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮಗುವನ್ನು ಖರೀದಿಸಿದ್ದ ಗೋವಾದ ಸ್ಮೀತಾ ಅವರಿಗೆ ಕರೆ ಮಾಡಿದ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಬೆಳಗಾವಿಗೆ ಕರೆಯಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಾಗ ಮಗು ಖರೀದಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ಮಧ್ಯವರ್ತಿಗಳಾದ ವಂದನಾ, ರವಿ, ರಾಣಿ ಶೋಧ ಕಾರ್ಯ ನಡೆದಿದೆ.
ಇದನ್ನೂ ಓದಿ: Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ