ಹೆಬ್ರಿ: ಕಬ್ಬಿನಾಲೆ ಸುತ್ತಮುತ್ತ ಪ್ರದೇಶ ಗಳಲ್ಲಿರುವ ಕಿರು ಜಲಪಾತಗಳನ್ನು ನೋಡಲು ಬಂದ ಪ್ರವಾಸಿಗರಿಗೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದವರು ಅಡ್ಡಿ ಪಡಿಸಿದ ಘಟನೆ ಜು. 28ರಂದು ನಡೆದಿದೆ.
ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗಕ್ಕೆ ಪ್ರವಾಸಿಗರು ಆಗಮಿಸಿದ್ದರು. ಆದರೆ ಹೊನ್ನೆಗುಂಡಿ ಜಲಪಾತದ ಬಳಿ ಇಲಾಖೆಯ ಅಧಿಕಾರಿಗಳು ನಿಂತು ಜಲಪಾತವನ್ನು ನೋಡಲು ಬಂದ ಪ್ರವಾಸಿಗರಿಗೆ ಕೆಳಗೆ ಇಳಿಯಲು ಬಿಡದೇ ಹಿಂದೆ ಕಳುಹಿಸಿದ್ದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಜಲಪಾತದ ಪ್ರದೇಶದಲ್ಲಿ ಪ್ರವಾಸಿಗರು ಅಲ್ಲಲ್ಲಿ ಪ್ಲಾಸ್ಟಿಕ್, ಬಿಯರ್ ಬಾಟಲ್‌ಗಳನ್ನು ಎಸೆದು ಪರಿಸರ ಹಾನಿ ಮಾಡುತ್ತಾರೆ. ಅಲ್ಲದೆ ಈ ಭಾಗದಲ್ಲಿ ಶನಿವಾರ ಮತ್ತು ರವಿವಾರದ ದಿನಗಳಲ್ಲಿ ಯುವಕ ಯುವತಿಯರು ಹೆಚ್ಚಾಗಿ ಬರುತ್ತಿದ್ದು ಕುಡಿತ ಅನೈತಿಕ ಚಟುವಟಿಕೆಗಳು ನಡೆದು ನಾಳೆ ಏನಾದರೂ ಅನಾಹುತ ಸಂಭವಿಸಿದಲ್ಲಿ ಯಾರು ಹೊಣೆ? ಈ ಕುರಿತು ನಮಗೆ ಮೇಲಾಧಿಕಾರಿಯ ಆದೇಶವಿರುವ ಕಾರಣ ಅಡ್ಡಿಪಡಿಸುತ್ತಿದ್ದೇವೆ ಎಂದು ಪ್ರವಾಸಿಗರಿಗೆ ಅಡ್ಡಪಡಿಸುತ್ತಿದ್ದ ಇಲಾಖೆಯ ಸಿಬಂದಿ ತಿಳಿಸಿದ್ದಾರೆ.
ಪ್ರಕೃತಿಕವಾಗಿರುವ ಜಲಪಾತಗಳನ್ನು ನೋಡಲು ವಲಯ ಅರಣ್ಯ ವನ್ಯಜೀವಿ ವಿಭಾಗ ಅಡ್ಡಿ ಪಡಿಸುವುದು ತಪ್ಪು. ರಾಜ್ಯದ ಪ್ರಸಿದ್ಧ ಜಲಪಾತಗಳನ್ನು ನೋಡಲು ಪ್ರವಾಸಿಗರು ಹೋಗುತ್ತಾರೆ. ಅಲ್ಲಿ ಕೂಡ ಪರಿಸರ ಹಾನಿಯಾಗುತ್ತದೆ ಎಂದು ನೋಡಲು ವಿರೋಧ ವಿದೆಯೇ. ಈ ಕಾನೂಕು ಕಬ್ಬಿನಾಲೆ ಮಾತ್ರ ಯಾಕೆ. ಇಂತಹ ಪ್ರದೇಶಗಳಲ್ಲಿ ಪರಿಸರ ಸ್ವಚ್ಚತೆ ಕಾಪಾಡಿ ಎಂಬ ಫಲಕಹಾಕಿ ಎಚ್ಚರವಹಿಸುವುದು ಬಿಟ್ಟು ತಡೆಯೊಡ್ಡು ವುದನ್ನು ಗ್ರಾಮಸ್ಥರು ವಿರೋಧಿಸುತ್ತಾರೆ. ಪ್ರವಾಸಿಗರು ಹಿಂತಿರುಗುವುತ್ತಿರುವುದು ಬೇಸರ ತರುತ್ತಿದೆ. ಇದು ಮುಂದುವರಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕರ್ ಭಾರಧ್ವಜ್ ಕಬ್ಬಿನಾಲೆ ಎಚ್ಚರಿಸಿದ್ದಾರೆ.
ಪ್ರವಾಸಿಗರಿಗೆ ನಿರಾಸೆ
ಜಲಪಾತದ ಸಮೀಪ ಹೋಗಲು ಸರಿಯಾದ ದಾರಿಯಿಲ್ಲ.ರಸ್ತೆಯಲ್ಲಿಯೇ ನಿಂತು ನೋಡಿ ಹೋಗಬೇಕಾಗುತ್ತದೆ. ಇಂತಹ ಪ್ರವಾಸಿತಾಣಗಳನ್ನು ಸಂಬಂಧ ಪಟ್ಟ ಇಲಾಖೆ ಅಭಿವೃದ್ಧಿಗೆ ಇಲಾಖೆ ಮುಂದಾಗಿಲ್ಲ. ಈಗ ಪ್ರವಾಸಿಗರಿಗೆ ಕೂಡ ನಿರ್ಬಂಧ ವಿಧಿಸಲಾಗುತ್ತಿರುವುದರಿಂದ ದೂರದೂರುಗಳಿಂದ ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.
-ಸುಕೇಶ್ ಪೆರ್ಡೂರು, ಪ್ರವಾಸಿಗ
ಪರಿಶೀಲನೆ
ಈ ಪ್ರದೇಶ ಕಾರ್ಕಳ ವ್ಯಾಪ್ತಿಯ ಅಧಿಕಾರಿಗಳಿಗೆ ಬರುವುದರಿಂದ ಕೇವಲ ನಾಲ್ಕು ದಿನಗಳ ವರೆಗೆ ಮಾತ್ರ ನನಗೆ ಚಾರ್ಜ್ ಇದೆ . ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಲಾಗುವುದು.
-ವಾಣಿಶ್ರೀ,
ವಲಯಾರಣ್ಯಾಧಿಕಾರಿ ,ವನ್ಯ ಜೀವಿ ವಿಭಾಗ