ನವದೆಹಲಿ: ಮಂಗಳವಾರ ವಿಶ್ವಾದ್ಯಂತ 8ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನಲ್ಲಿ ಪ್ರಧಾನ ಕಾರ್ಯಕ್ರಮದ ನೇತೃತ್ವ ವಹಿಸಿದರೆ, ರಾಷ್ಟ್ರಪತಿ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸದವ ಪ್ರಯುಕ್ತ ಕೇಂದ್ರ ಸಚಿವರು ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಂಸತ್ ಸಂಕೀರ್ಣ, ಮೈದಾನಗಳು, ಸಮುದ್ರದ ಕಿನಾರೆ, ಸ್ಥಳೀಯ ಪಾರ್ಕ್‌ಗಳು, ದೇವಸ್ಥಾನದ ಆವರಣ ಸೇರಿ ವಿವಿಧೆಡೆ ಕಾರ್ಯಕ್ರಮ ನಡೆಸಲಾಗಿದೆ.
ಟ್ವೀಟ್ ಮೂಲಕ ಸಾರ್ವಜನಿಕರಿಗೆ ಶುಭ ಹಾರೈಸಿದ ರಾಷ್ಟ್ರಪತಿ ಕೋವಿಂದ್ ಅವರು, “ಯೋಗ ನಮ್ಮ ಪ್ರಾಚೀನ ಭಾರತದ ಪರಂಪರೆಯ ಭಾಗವಾಗಿದೆ. ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲದಲ್ಲಿಟ್ಟುಕೊಳ್ಳಲು ಭಾರತವು ಕೊಟ್ಟ ಉಡುಗೊರೆಯಿದು. ಎಲ್ಲರೂ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಿ’ ಎಂದರು.
ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಅವರು ಗುಜರಾತ್‌ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಸ್ಥಳದಲ್ಲಿ, ವಿತ್ತ ಸಚಿವೆ ನಿರ್ಮಲಾ ದೆಹಲಿಯ ಜಂತರ್ ಮಂತರ್‌ನಲ್ಲಿ, ವಿದೇಶಾಂಗ ಇಲಾಖೆ ಸಹಾಯಕ ಸಚಿವ ವಿ.ಮುರಳೀಧರನ್ ಕೇರಳದ ಪದ್ಮನಾಭ ಸ್ವಾಮಿ ದೇಗುಲದ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.
Related Articles
ವಿದೇಶಗಳಲ್ಲೂ ಯೋಗ:
ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಅದ್ಧೂರಿಯಾಗಿ ಯೋಗ ದಿನ ಆಚರಿಸಿವೆ. ಲಂಡನ್‌ನ ಇಂಡಿಯನ್ ಹೈ ಕಮಿಷನ್ ವಾರ ಪೂರ್ತಿ ಆಚರಣೆ ನಡೆಸಿದೆ. ಹಾಗೆಯೇ ಯು.ಕೆ., ಚೀನಾದ ಬೀಜಿಂಗ್, ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಯೋಗ ದಿನ ಆಚರಿಸಿದ್ದಾರೆ. ಅವರಿಗೆ ವಿದೇಶಗಳಲ್ಲಿರುವ ಭಾರತೀಯರೂ ಸಾಥ್ ಕೊಟ್ಟಿದ್ದಾರೆ.
ಯೋಧರಿಂದಲೂ ಯೋಗ:
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಾದ್ಯಂತ ಸುಮಾರು 1.75 ಲಕ್ಷ ಯೋಧರು ಯೋಗಾಸನ ನಡೆಸಿದ್ದಾರೆ. ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಲಡಾಖ್‌ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಯೋಧರ 75,000 ಕುಟುಂಬಗಳೂ ಭಾಗವಹಿಸಿದ್ದವು.
ಮಾಲ್ಡೀವ್ಸ್‌ನಲ್ಲಿ ಗಲಾಟೆ:
ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು ಮಾಲೆ ನಗರದ ಮೈದಾನವೊಂದರಲ್ಲಿ ಯೋಗ ದಿನ ಕಾರ್ಯಕ್ರಮ ಆಯೋಜಿಸಿತ್ತು. ಸಾರ್ವಜನಿಕವಾಗಿ ಯೋಗ ಮಾಡುತ್ತಿದ್ದ ಸಮಯದಲ್ಲಿ ದುಷ್ಕರ್ಮಿಗಳ ಗುಂಪೊಂದು ಅಲ್ಲಿಗೆ ನುಗ್ಗಿ, ಜನರನ್ನು ಚದುರಿಸಿದೆ. ಕೊನೆಗೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ತಿಳಿಸಿದ್ದಾರೆ.