Advertisement
ಅಮ್ಮ ಎಂದರೆ ದೇವತೆ, ಅವಳಿಲ್ಲದೇ ಜಗತ್ತೇ ಇಲ್ಲ ಎಂಬುದು ಭಾರತೀಯ ಸಂಸ್ಕೃತಿ. ಅದೊಂದು ಸ್ಥಾನವಲ್ಲ ಜವಾಬ್ದಾರಿ. ಆಕೆ ಕೇವಲ ತಾನು ಹೆತ್ತ ಮಕ್ಕಳಿಗೆ ಮಾತ್ರ ತಾಯಿಯಾಗಿರುವುದಿಲ್ಲ. ಬದಲಾಗಿ ವೃದ್ಧಾಪ್ಯದಲ್ಲಿರುವ ಹೆತ್ತವರನ್ನು ನೋಡಿಕೊಳ್ಳುವಾಗಲೂ, ಸೋತ ಗಂಡನಿಗೆ ಆಸರೆಯಾಗುವಾಗಲೂ ಅವಳಲ್ಲಿರುವ ಮಾತೃ ಹೃದಯ ಜಾಗೃತಗೊಳ್ಳುತ್ತದೆ. ಭಾರತೀಯರು ಸ್ತ್ರೀ ದೇವತೆಗಳನ್ನು ಅಮ್ಮನೆಂದು ಕರೆಯುವುದೂ ಇದೇ ಕಾರಣಕ್ಕೆ. ಕುಟುಂಬ ಜೋಡಣೆಯ ಮೂಲ ಕೊಂಡಿಯಾಗಿರುವ ಅಮ್ಮಂದಿರಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಇಂದು ಅಮ್ಮಂದಿರ ದಿನ. ಪ್ರತಿ ವರ್ಷ ಮೇ ತಿಂಗಳ ಎರಡನೇ ರವಿವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ.
ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮೊದಲು ಕಾಣಿಸಿಕೊಂಡ ಅಮ್ಮಂದಿರ ದಿನ ಅಥವಾ ಮದರ್ ಡೇ ಆಚರಣೆ ಕ್ರಮೇಣ ಭಾರತಕ್ಕೂ ಕಾಲಿರಿಸಿತು. ಅಮ್ಮಂದಿರ ದಿನದ ಇತಿಹಾಸ ಬಹಳ ಪ್ರಾಚೀನ ಕಾಲದ್ದು. ಗ್ರೀಕ್, ರೋಮನ್ ಕಾಲಘಟ್ಟದಲ್ಲಿಯೇ ಇಂತಹ ಆಚರಣೆ ಇದ್ದ ಬಗ್ಗೆ ಉಲ್ಲೇಖವಿದೆ. ಅವರು ಸ್ತ್ರೀ ದೇವತೆಗಳ ಹಬ್ಬವನ್ನು ಆಚರಿಸುವುದಕ್ಕೆ ಅಮ್ಮಂದಿರ ದಿನ ಎಂಬುದಾಗಿ ಕರೆಯುತ್ತಿದ್ದರು. ಆಧುನಿಕ ಅಮ್ಮಂದಿರ ದಿನದ ಆಚರಣೆ ಮೊದಲು ಆರಂಭವಾದದ್ದು ಅಮೆರಿಕದಲ್ಲಿ. 1908ರ ಅನಂತರ ಪ್ರತಿ ವರ್ಷ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. 1914ರಲ್ಲಿ ಈ ದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಿಸುವುದರ ಮೂಲಕ ಅಮ್ಮಂದಿರ ದಿನವನ್ನು ಹೆಚ್ಚು ಮಹತ್ವಪೂರ್ಣವಾಗಿ ಆಚರಿಸಲಾಯಿತು. ಅಮೆರಿಕದ ಸಿವಿಲ್ ಯುದ್ಧಕ್ಕಿಂತ ಮೊದಲಿನ ವರ್ಷಗಳಲ್ಲಿ . ಪಶ್ಚಿಮ ವರ್ಜೀನಿಯಾದ ಆನ್ ರೀವ್ಸ್ ಜಾರ್ವಿಸ್ ಎನ್ನುವ ಮಹಿಳೆ ಮದರ್ ಡೇ ವರ್ಕ್ ಕ್ಲಬ್‌ಗಳನ್ನು ಆರಂಭಿಸಿ ಅಲ್ಲಿ ತಾಯಂದಿರು ಹೇಗೆ ಮಕ್ಕಳು ಹಾಗೂ ಕುಟುಂಬದ ಸಂರಕ್ಷಣೆಯನ್ನು ಮಾಡಬೇಕು ಎಂಬುದರ ಬಗೆಗೆ ತರಬೇತಿಯನ್ನು ನೀಡುತ್ತಿದ್ದಳು. 1868ರಲ್ಲಿ ಆಕೆ ಮದರ್ ಫ್ರೆಂಡ್‌ಶಿಪ್ ಡೇ ಎಂಬ ಸಂಸ್ಥೆಯನ್ನು ಸ್ಥಾಪಿಸಿದಳು. ಅಲ್ಲಿ ಬೇರೆ ಪ್ರದೇಶದ ಸೈನಿಕರ ಅಮ್ಮಂದಿರು ಒಟ್ಟಿಗೆ ಸೇರಿ ಸಾಮರಸ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರು. ಅಮ್ಮಂದಿರ ದಿನ ಅಧಿಕೃತವಾಗಿ ಆಚರಿಸಲು ಕಾರಣ ಆನ್ ರೀವ್ ಜಾರ್ವಿಸ್‌ನ ಮಗಳಾದ ಅನ್ನಾ ಜಾರ್ವಿಸ್. 1905ರಲ್ಲಿ ಅವಳ ತಾಯಿಯ ಮರಣವಾದ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಆಕೆ ನಿರ್ಧರಿಸಿದಳು. 1908ರಲ್ಲಿ ಮೊದಲ ತಾಯಂದಿರ ದಿನವನ್ನು ಆಕೆ ಆಚರಿಸಿದಳು. ಅನಂತರದ ವರ್ಷಗಳಲ್ಲಿ ಅಮೆರಿಕ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಈ ದಿನವನ್ನು ಆಚರಿಸಲು ಪ್ರಾರಂಭಿಸಿದರು.
Related Articles
Advertisement
ತಾಯಂದಿರ ತ್ಯಾಗಕ್ಕಾಗಿ ಈ ದಿನಅನ್ನಾ ಜಾರ್ವಿಸ್ ತಾಯಂದಿರ ದಿನವನ್ನು ಆಚರಿಸುವುದಕ್ಕೆ ಇದ್ದ ಮುಖ್ಯ ಉದ್ದೇಶ ತಾಯಂದಿರ ತ್ಯಾಗವನ್ನು ಜಗತ್ತಿಗೆ ತಿಳಿಸುವುದಾಗಿತ್ತು. ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಹಲವಾರು ತ್ಯಾಗವನ್ನು ಮಾಡುತ್ತಾಳೆ. ಅದರ ಮಹತ್ವ ತಿಳಿಯುವುದೇ ಈ ದಿನದ ಉದ್ದೇಶ. ಎಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು. – ಸುಶ್ಮಿತಾ ಶೆಟ್ಟಿ