Advertisement

ಪ್ರಥಮ ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ

01:43 AM Jul 20, 2022 | Team Udayavani |

ಚಂದಮಾಮ ಚಂದಮಾಮ ಬಾ ಬಾ ಎನ್ನುತ್ತಾ ಕಂದನಿಗೆ ಚಂದ್ರನನ್ನು ತೋರಿಸುತ್ತಾ ಊಟ ಮಾಡಿಸದ ತಾಯಂದಿರಿಲ್ಲ. ಮಗು ಪುಟ್ಟ ಕೈಯನ್ನು ಮುಚ್ಚಿ ಬಿಚ್ಚಿ, ಚಾಚಿ ಚಂದ್ರ ಬಾ ಬಾ ಎಂದು ತೋರಿಸುತ್ತಾ ನಕ್ಕಾಗ ಆನಂದಭಾವ ತಾಯಂದಿರಿಗೆ. ಕವಿಗಳಿಗೆ ತಂಪು ಬೆಳದಿಂಗಳು ಉರಿ ಬಿಸಿಲಾಗುವ ಬಗೆಯ ಪ್ರೇಮ ವರ್ಣನೆಯ ಭಾವ. ಕಥಾ ಕಾಂಕ್ಷಿಗಳಿಗೆ, ಕೌಸಲ್ಯೆ ಮಗು ರಾಮ ಚಂದ್ರನನ್ನು ಅರಮನೆಯೊಳಗೆ ತಂದಾಗ ಚಂದ್ರನನ್ನು ಕಾಣದೆ ಮಗು ಅತ್ತಾಗ ಮಂತ್ರಿ ಸುಮಂತ ಬಟ್ಟಲಲ್ಲಿ ನೀರನ್ನು ಹಾಕಿ ಚಂದ್ರ ಬಿಂಬವನ್ನು ತೋರಿಸಿ ಮಗುವನ್ನು ನಗು ವಂತೆ ಮಾಡಿದನಂತೆ, ದಕ್ಷಪ್ರಜಾಪತಿ ತನ್ನ 27 ಕುವರಿ ಯರನ್ನು ಚಂದ್ರನಿಗೆ ವಿವಾಹ ಮಾಡಿಕೊಟ್ಟಾಗ ರೋಹಿಣಿಯಲ್ಲಿ ಮಾತ್ರ ಚಂದ್ರ ಆಸಕ್ತಿ ತೋರಿದ್ದಾನೆ ಎಂಬ ದೂರು ಕೇಳಿ ಕ್ಷಯಿಸು ಎಂಬ ಶಾಪವನ್ನಿತ್ತನಂತೆ, ಶಿವನ ದೆಸೆಯಿಂದ ಈ ಶಾಪ 15 ದಿನಗಳ ವೃದ್ಧಿ ಮತ್ತು 15 ದಿನಗಳ ಕ್ಷಯ ಎಂಬ ಹುಣ್ಣಿಮೆ-ಅಮಾವಾಸ್ಯೆಗಳ ಪಕ್ಷಗಳಾಗಿ ರೂಪಾಂತರಗೊಂಡಿತು. ಚಂದ್ರ ಗ್ರಹಣವು ಸಮುದ್ರ ಮಂಥನ ಕಾಲದ ರಾಹು -ಕೇತುವಿನ ದ್ವೇಷದಿಂದ ಚಂದ್ರನನ್ನು ಹಿಡಿಯುವ ಪ್ರಕ್ರಿಯೆ. ಇದನ್ನು ಕಳೆಯಲು ಪೂಜೆ ಪುನಸ್ಕಾರಗಳ ಅಗತ್ಯ ಎಂಬ ನಂಬಿಕೆ. ಚೌತಿಯಂದು ಗಣೇಶ ಭಕ್ತರ ಮನೆಗಳಲ್ಲಿ ನೈವೇದ್ಯಗಳನ್ನು ಸ್ವೀಕರಿಸಿ ದಾರಿಯಲ್ಲಿ ಬರುವಾಗ ಕಾಲೆಡವಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಚೌತಿಯಂದು ನಿನ್ನನ್ನು ನೋಡಿದವರಿಗೆ ಅಪವಾದ ಬರಲಿ ಎಂಬ ಶಾಪ, ಇವೆಲ್ಲ ಜನಮಾನಸದಲ್ಲಿ ಇಂದಿಗೂ ಬೇರೂರಿವೆ. ಆದರೆ ರಾತ್ರಿ ಆಕಾಶದಲ್ಲಿ ಹೊಂಬಣ್ಣದ ತಟ್ಟೆಯಂತೆ ಹೊಳೆಯುವ, ತಂಪು ಬೆಳದಿಂಗಳಿಂದ ಮಿತ್ರ ಭಾವ ಸ್ಪುರಿಸುವ, ನೆರೆಹೊರೆಯ ನಮ್ಮ ಚಂದ್ರ ಭೂಮಿಯ ಸುತ್ತ ಸುತ್ತುತ್ತಿರುವ ಒಂದು ನೈಸರ್ಗಿಕ ಉಪಗ್ರಹ. ಈ ಸುತ್ತುವಿಕೆಯ ಆಧಾರದಲ್ಲಿ ಕಾಲವನ್ನು ಅಳೆಯುವ ಚಾಂದ್ರಮಾನ ಪದ್ಧತಿ ಈಗಲೂ ಅಸ್ತಿತ್ವ ದಲ್ಲಿದೆ, ಇದನ್ನಾಧರಿಸಿ ಹಬ್ಬಗಳು ಆಚರಿಸಲ್ಪಡುತ್ತಿವೆ.

Advertisement

ಚಂದ್ರನ ವಿಶೇಷತೆಗಳೇನು ?
ಬರಿಗಣ್ಣಿಗೆ ಚಂದ್ರ ಚಂದ. ಆದರೆ ದೂರದರ್ಶಕದಲ್ಲಿ ಚಂದ್ರನ ಮೇಲ್ಮೆ„ಯಲ್ಲಿ ಕುಳಿಗಳ, ಉಬ್ಬು, ತಗ್ಗು ಪ್ರದೇಶಗಳ ಅನಾವರಣವಾಗುವುದು ಕಂಡುಬರುತ್ತದೆ. ಇದು ಈ ಉಪಗ್ರಹದ ಬಗ್ಗೆ ಕುತೂಹಲ ಮೂಡಲು ಕಾರಣವಾಯಿತು. ವಿಜ್ಞಾನ ಮುಂದುವರಿದಂತೆ ಚಂದ್ರನ ಬಗ್ಗೆ ನಿಖರವಾದ ಮಾಹಿತಿಗಳನ್ನು ಕಲೆ ಹಾಕಲು ಸಾಧ್ಯವಾಯಿತು. ವಾತಾವರಣವಿಲ್ಲದ, ಭೂಮಿಯ ಸುತ್ತಲಿನ ತನ್ನ ಪರಿಭ್ರಮಣದಲ್ಲಿ ಒಂದೇ ಮೈ(ಪಾರ್ಶ್ವ)ಯನ್ನು ತೋರಿಸುತ್ತಿರುವ, ಚಂದ್ರನ ಗುರುತ್ವಾಕರ್ಷಣ ಶಕ್ತಿ ಭೂಮಿಗಿಂತ ಕಡಿಮೆ (ಭೂಮಿಯ 1/6 ರಷ್ಟು), ಚಂದ್ರನು ಭೂಮಿ ಮೇಲಿನ ಸಾಗರಗಳ‌ ಉಬ್ಬರವಿಳಿತಗಳಿಗೆ ಕಾರಣ.

ಸೌರವ್ಯೂಹದಲ್ಲಿರುವ ಉಪಗ್ರಹಗಳಲ್ಲಿ ನಮ್ಮ ಚಂದ್ರ 5ನೇ ಅತೀ ದೊಡ್ಡ ನೈಸರ್ಗಿಕ ಉಪಗ್ರಹ ಮತ್ತು 2ನೇ ಅತೀ ಸಾಂದ್ರ ನೈಸರ್ಗಿಕ ಉಪಗ್ರಹ. ಚಂದ್ರನ ಮೇಲ್ಮೆ„ ಹೊಳೆಯುವುದು ಸೂರ್ಯನ ಬೆಳಕನ್ನು ಚಂದ್ರ ಪ್ರತಿಫ‌ಲಿಸುವುದರಿಂದ. ಹಾಗಾಗಿ ಚಂದ್ರನ ಬೆಳಕು ತಂಪು. ಚಂದ್ರನ ಭ್ರಮಣೆ ಮತ್ತು ಪರಿಭ್ರಮಣಾ ವಧಿಗಳು ಸಮನಾಗಿರುವುದರಿಂದ (ಸುಮಾರು 27.3 ದಿನ) ಅದರ ಒಂದೇ ಪಾರ್ಶ್ವ ಮಾತ್ರ ನಾವು ಕಾಣಲು ಸಾಧ್ಯ, ಇನ್ನೊಂದು ಕಾಣಸಿಗದು. ಚಂದ್ರ ಬಿಂಬದ ಗಾತ್ರ ಮತ್ತು ಸೂರ್ಯ ಬಿಂಬದ ಗಾತ್ರ ಒಂದೇ ಸಮ ನಾಗಿ ಕಂಡರೂ, ವಾಸ್ತವವಾಗಿ ಅವುಗಳ ಗಾತ್ರಗಳಲ್ಲಿ ಭಾರೀ ವ್ಯತ್ಯಾಸವಿದೆ. ಸೂರ್ಯ ಚಂದ್ರನಿಗಿಂತ 400 ಪಟ್ಟು ಗಾತ್ರದಲ್ಲಿ ದೊಡ್ಡದಿದ್ದು, ಭೂಮಿಯಿಂದ ಚಂದ್ರ ನಿರುವ ದೂರಕ್ಕಿಂತ 400 ಪಟ್ಟು ದೂರದಲ್ಲಿರುವುದರಿಂದ ಅವುಗಳ ಕೋನಿಯ ವ್ಯಾಸವು ಸಮನಾಗಿರುತ್ತದೆ. ಹಾಗಾಗಿ ಅವುಗಳ ಗಾತ್ರ ಒಂದೇ ಇರುವಂತೆ ಭಾಸ ವಾಗುತ್ತದೆ. ತನ್ನ ಕಕ್ಷೆಯಲ್ಲಿ ಸಾಗುತ್ತಿರುವ ಚಂದ್ರ ಪ್ರತೀ ವರ್ಷ ಭೂಮಿಯಿಂದ ಸುಮಾರು 3.8 ಸೆ.ಮೀ. ನಷ್ಟು ದೂರ ಸರಿಯುತ್ತಿದ್ದಾನೆ. ಇತ್ತೀಚಿನ ಸಂಶೋಧನೆಗಳಿಂದ ಚಂದ್ರನಲ್ಲಿ ನೀರಿರುವುದು ದೃಢಪಟ್ಟಿದೆ. ಭೂಕಂಪ ಗಳಂತೆ ಚಂದ್ರನಲ್ಲಿ ಅತ್ಯಲ್ಪ ಪ್ರಮಾಣದ ಚಂದ್ರಕಂಪನಗಳು ಸಂಭವಿಸುತ್ತವೆ.

ಚಂದ್ರಯಾನದ ಕನಸು
ಭೂಮಿ ನಮ್ಮ ತೊಟ್ಟಿಲಾದರೆ ಇದರ ಹೊರಗಿರುವ ಚಂದ್ರನನ್ನು ತಲುಪುವ ಬಗೆ ಹೇಗೆ? ಚಂದ್ರನಿರುವುದು ನೋಡಲು, ಯೋಚಿಸಲು, ಕನಸು ಕಾಣಲು ಹಾಗೂ ಶೋಧನೆಗೆ ಆಹ್ವಾನವೀಯಲು ಎಂಬ ಮನೋಭಾವ ದೊಂದಿಗೆ ವಿಜ್ಞಾನಿಗಳು ಚಂದ್ರ ಯಾನದ ಕನಸು ಕಂಡರು. ರಾಕೆಟ್‌ ಹಾಗೂ ಉಪಗ್ರಹಗಳ ತಂತ್ರಜ್ಞಾನ ಈ ಸವಾಲಿಗೆ ನೆರವಿತ್ತಿತು. ರಷ್ಯಾ ತನ್ನ ಉಪಗ್ರಹ ತಂತ್ರ ಜ್ಞಾನದಿಂದ ಅಂತರಿಕ್ಷಯಾನದ ಕನಸನ್ನು ನನಸಾಗಿಸಿ ದರೆ, ಅಮೆರಿಕ, ಚಂದ್ರನಲ್ಲಿ ಮಾನವ ಇಳಿಸುವ ಸವಾಲನ್ನು ಸ್ವೀಕರಿಸಿ ಅದರಲ್ಲಿ ಯಶಸ್ಸನ್ನು ಕಂಡಿತು. ನೀಲ್‌ ಆರ್ಮ್ಸ್ಟ್ರಾಂಗ್‌ 1969ರ ಜುಲೈ 20ರಂದು ಚಂದ್ರನ ಮೇಲೆ ಕಾಲಿಟ್ಟಾಗ ಉದ್ಗರಿಸಿದ್ದು, ಇದು ಮಾನವನಿಗೆ ಒಂದು ಪುಟ್ಟ ಹೆಜ್ಜೆ, ಆದರೆ ಮನುಕುಲಕ್ಕೆ ದೊಡ್ಡ ದಾಪುಗಾಲು (That’s one small step for man, one giant leap for mankind). ಅನಂತರ ಉಪಗ್ರಹ ತಂತ್ರ ಜ್ಞಾನದ ಮುಂಚೂಣಿಯ ಲ್ಲಿರುವ ಎಲ್ಲ ದೇಶಗಳು (ಭಾರತವೂ ಸೇರಿದಂತೆ) ಸ್ಪರ್ಧಾತ್ಮಕವಾಗಿ ವಿವಿಧ ಆಯಾಮಗಳಲ್ಲಿ ಚಂದ್ರ ಯಾನ ಗಳನ್ನು ಆರಂಭಿಸಿ ಹಲವು ರಹಸ್ಯಗಳನ್ನು ಭೇದಿಸಿ ದವು. ವಿಷಯ ಎಲ್ಲಿಯವರೆಗೆ ಈಗ ಮುಟ್ಟಿದೆ ಎಂದರೆ ಎಲಾನ್‌ ಮಸ್ಕ್ನಂತವರು ಬಾಹ್ಯಾಕಾಶಯಾನ ಮುಂದಿನ ದಿನಗಳಲ್ಲಿ ಸಾಮಾನ್ಯವಾಗುವ ಎಲ್ಲ ಲಕ್ಷಣಗಳಿವೆ ಎಂದಿದ್ದಾರೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಚಂದ್ರನಲ್ಲಿ ವಸಾಹತು ಸ್ಥಾಪಿಸಿ, ಜೀವಿಸಲು ಸಾಧ್ಯವೇ, ಚಂದ್ರನನ್ನು ಬಾಹ್ಯಾಕಾಶ ಯಾನ ದಲ್ಲಿ ರಾಕೆಟ್‌ ಉಡಾವಣೆಗೆ ಉಪಯೋಗಿಸಿ ಕೊಂಡು ಉಪಗ್ರಹಗಳನ್ನು ಕಳುಹಿಸಬಹುದೇ ಎನ್ನುವುದರ ಸಾಧ್ಯತೆಗಳ ಬಗ್ಗೆ ಸಮಾ ಲೋಚನೆಗಳು ನಡೆಯುತ್ತಿವೆ.

ಚಂದ್ರ ದಿನಾಚರಣೆ
ಅಮೆರಿಕದ ಗಗನಯಾತ್ರಿಗಳಾದ ನೀಲ್‌ ಆರ್ಮ್ ಸ್ಟ್ರಾಂಗ್‌ ಮತ್ತು ಎಡ್ವಿನ್‌ ಬಝ್ ಆಲ್ಡಿನ್‌ ಚಂದ್ರನ ಮೇಲೆ ಪ್ರಥಮವಾಗಿ ಜುಲೈ 20, 1969ರಂದು ಪಾದರ್ಪಣೆಗೈದಾಗ ಅವರ ಸಾಧನೆ ಮುಂದಿನ ದಿನಗಳ ಬೆಳವಣಿಗೆಗಳಿಗೆ ನಾಂದಿಯಾಗುತ್ತವೆಂಬ ನಿರೀಕ್ಷೆಯಿಂದ “giant leap for mankind’ ಎಂಬ ಉದ್ಗಾರ ತೆಗೆದಿದ್ದು ನಿಜವಾಯಿತು. ಇಂದು ಬಾಹ್ಯಾಕಾಶ ಯಾನ ಸೌರಮಂಡಲದಾಚೆಗೆ ಪ್ರಯಾಣಿಸುವ ಕನಸು, ಬಾಹ್ಯಾಕಾಶ ನಿಲ್ದಾಣಗಳ ಸ್ಥಾಪನೆ, ಬಾಹ್ಯಾಕಾಶ ನೌಕೆಗಳ ಮೂಲಕ ಉಪಗ್ರಹಗಳ ನಿರ್ವಹಣೆ, ವಿಶ್ವದ ಮೂಲೆ ಮೂಲೆಗಳ ಮಾಹಿತಿಗಳನ್ನು ಬಾಹ್ಯಾಕಾಶ ದೂರದರ್ಶಕದಿಂದ ಸಂಗ್ರಹಿಸುವ ಕಾರ್ಯಗಳು ತಂತ್ರ ಜ್ಞಾನದ ಅದ್ಭುತ ಬೆಳವಣಿಗೆಯಿಂದ ಸಾಧ್ಯ ವಾಗಿದೆ. ಜುಲೈ 20ನ್ನು ಆದ್ದರಿಂದ ಒಂದು ಚರಿತ್ರಾರ್ಹ ದಿನವೆಂದು ಪರಿಗಣಿಸಿ ಜಗತ್ತಿನ ಎಲ್ಲರಿಗೆ ಸ್ಫೂರ್ತಿ ದಾಯಕ ಸಂದೇಶವನ್ನು ನೀಡುವ ಸಲುವಾಗಿ ಯುಎನ್‌ಒ 2021ರಲ್ಲಿ ಪ್ರತೀ ವರ್ಷ ಜುಲೈ 20ನೇ ತಾರೀಖೀನಂದು ಅಂತಾರಾಷ್ಟ್ರೀಯ ಚಂದ್ರ ದಿನದ ಆಚರಣೆ ಯನ್ನು ಮಾಡಬೇಕೆಂದು ಕರೆ ನೀಡಿತು. ಅದರಂತೆ ಪ್ರಥಮ ಅಂತಾರಾಷ್ಟ್ರೀಯ ಚಂದ್ರ ದಿನಾ ಚಾರಣೆ ಈ ವರ್ಷ ಜುಲೈ 20ರಂದು (ಬುಧವಾರ) ನಡೆಯಲಿದೆ.
ಇದರ ಸಲುವಾಗಿ ಭಾರತವೂ ಸೇರಿದಂತೆ ವಿಶ್ವ ದೆಲ್ಲೆಡೆ ಚಂದ್ರನ ಬಗ್ಗೆ ಅರಿವು, ಇಷ್ಟರವರೆಗಿನ ಚಂದ್ರಾ ನ್ವೇಷಣೆಯ ಬಗ್ಗೆ ನಡೆದ ವಿವಿಧ ಯೋಜನೆಗಳು, ದೊರೆತ ಫ‌ಲಿತಾಂಶಗಳು, ಭವಿಷ್ಯದ ನಿರೀಕ್ಷೆಗಳು ಮುಂತಾದವುಗಳ ಬಗ್ಗೆ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ. ಭಾರತದಲ್ಲಿ ಇಸ್ರೋದ ಮುಂದಾಳತ್ವದಲ್ಲಿ ಹಲವು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ, ಆಸಕ್ತರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಚಂದ್ರನ ಬಗ್ಗೆ ಮಾಹಿತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಪ್ರಯತ್ನಗಳನ್ನು ಮಾಡ ಲಾಗಿದೆ. ಜುಲೈ 20ರಂದು ಆಯ್ದ ವಿದ್ಯಾರ್ಥಿಗಳಿಗೆ ತಾರಾಲಯ ಮತ್ತು ವಿಜ್ಞಾನ ಕೆಂದ್ರಗಳಲ್ಲಿ ಚಂದ್ರನ ಬಗ್ಗೆ ಚಟುವಟಿಕೆಗಳು, ಚಂದ್ರ ಸಂಬಂಧಿತ ಚಿತ್ರ ಪ್ರದರ್ಶನ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಆನ್‌ಲೈನ್‌ ಉಪನ್ಯಾಸಗಳು ಹೀಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಉದ್ದೇಶ ಒಂದೇ ಚಂದ್ರನ ಬಗ್ಗೆ ಆದಷ್ಟು ವಿಷಯಗಳನ್ನು ತಿಳಿಯುವುದು. ಮುಂದಿನ ಯುವ ಪೀಳಿಗೆಗೆ ಬಾಹ್ಯಾಕಾಶ ಯಾನ ಮತ್ತು ಪರಿಶೋಧನೆಗಳಿಗೆ ಪ್ರೇರೇಪಿಸುವುದು.

Advertisement

ಈ ನಿಟ್ಟಿನಲ್ಲಿ ಪ್ರಥಮ ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆ ಯುವ ಜನಾಂಗಕ್ಕೆ ಸೂಕ್ತ ವೇದಿಕೆ ಒದಗಿಸಿ ಸಂಶೋಧನೆ, ವೈಜ್ಞಾನಿಕ ಮನೋಭಾವ ರೂಪಿಸಲು ಮತ್ತು ಅವರು ಉತ್ತಮ ನಿರ್ವಹಣೆ ತೋರಲು ಮಾರ್ಗದರ್ಶನ ನೀಡುವುದೆಂದು ಹಾರೈಸೋಣ.

– ಡಾ| ಕೆ.ವಿ. ರಾವ್‌, ನಿರ್ದೇಶಕರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next