Advertisement

ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

03:26 PM Sep 15, 2022 | Team Udayavani |

ಕಾರವಾರ: ಔಪಚಾರಿಕ ಶಿಕ್ಷಣ ಪಡೆಯದೇ ಇರುವ 15 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅಕ್ಷರ ಜ್ಞಾನ ನೀಡಿ ನವಸಾಕ್ಷರರನ್ನಾಗಿ ಮಾಡವುದೇ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಶ್ರೀಕಾಂತ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಪಂ ಸಭಾಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಶೇ.86 ಇದ್ದಾಗಿಯೂ ಕೂಡ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆ ಇದೆ. ದೇಶದ ಪ್ರಗತಿಗೆ ಸಾಕ್ಷರತೆ ಅತೀ ಮುಖ್ಯವಾಗಿದ್ದು, ಮಹಿಳೆಯರಿಗೂ ವಿದ್ಯೆ ನೀಡಿ ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕು. ಜೊತೆಗೆ ಇಂದಿನ ದಿನಮಾನಕ್ಕೆ ಅನುಸಾರವಾಗಿ ಕಂಪ್ಯೂಟರ್‌ ಶಿಕ್ಷಣ ಅವಶ್ಯಕವಾಗಿದೆ. ಹಾಗಾಗಿ ಕಂಪ್ಯೂಟರ್‌ ಸಾಕ್ಷರತೆ ನಮ್ಮ ಯೋಜನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

1964 ರಿಂದೀಚೆಗೆ ಸತತವಾಗಿ ಬೇರೆ ಬೇರೆ ಹೆಸರುಗಳಿಂದ ಈ ಸಾಕ್ಷರತಾ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಸಮೀಕ್ಷೆ ಮೂಲಕ ಅನಕ್ಷರಸ್ಥರನ್ನು ಗುರುತಿಸಿ ಅವರನ್ನು ನವಸಾಕ್ಷರರನ್ನಾಗಿ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇದಕ್ಕೆ ಇಲಾಖಾ ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಸಹಕಾರವು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಬಳಿಕ ಜಿಪಂ ಮುಖ್ಯ ಲೆಕ್ಕಾಧಿಕಾರಿ ಸತೀಶ್‌ ಪವಾರ ಮಾತನಾಡಿ, ಶಿಕ್ಷಣದಿಂದ ವಂಚಿತರಾದ ಸಾಕ್ಷರತೆಗಾಗಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಎಲ್ಲರನ್ನೂ ಸಾಕ್ಷರಗೊಳಿಸಿ ಅವರ ಜೀವನಮಟ್ಟ ಸುಧಾರಿಸುವ ಹಾಗೂ ಸಾಕ್ಷರತೆ ಕುರಿತು ಅರಿವು ಮೂಡಿಸುವುದು ಈ ಯೋಜನೆಯ ಬಹುದೊಡ್ಡ ಉದ್ದೇಶವಾಗಿದೆ ಎಂದು ಹೇಳಿದರು.

Advertisement

ಜಿಲ್ಲಾ ಸಾಕ್ಷರತಾ ಸಂಯೋಜಕಿ ಹಾಗೂ ಶಿಕ್ಷಕಿ ಸಾಧನಾ ಬರಗಿ ಮಾತನಾಡಿ, ಮೊದಲಿನಿಂದಲೂ ರಾತ್ರಿ ಶಾಲೆ, ಮುಂದುವರಿಕೆ ಶಿಕ್ಷಣ ಕೇಂದ್ರ, ಸಾಕ್ಷರತಾ ಕಲಿಕಾ ಕೇಂದ್ರಗಳ ಮೂಲಕ ವಿವಿಧ ಸ್ಥಳಗಳಲ್ಲಿ ಸಾಕ್ಷರತಾ ಕೇಂದ್ರಗಳನ್ನು ತೆರೆದು ಸಾಕ್ಷರರನ್ನಾಗಿ ಮಾಡುವ ಕಾರ್ಯವು ವ್ಯವಸ್ಥಿತವಾಗಿ ಜರುಗುತ್ತಿದೆ ಎಂದು ತಿಳಿಸಿದರು.

ಡಯಟ್‌ ನ ಪ್ರಾಂಶುಪಾಲ ಎನ್‌.ಜಿ. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಕ್ಷರರು ನಿರಕ್ಷರರಿಗೆ ಕಲಿಸಬೇಕು. ಕಲಿತವರು ಕಲಿಯದವರಿಗೆ ಕಲಿಸಬೇಕು. ವಿದ್ಯೆಯಿಲ್ಲದವರಿಗೆ ವಿದ್ಯೆ ನೀಡುವುದು ಸಂತಸದ ವಿಚಾರ. ಜಿಲ್ಲೆಯನ್ನು ಸಾಕ್ಷರತೆಯಲ್ಲಿ ಉತ್ತಮಪಡಿಸೋಣ ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯದರ್ಶಿ ನಾಗೇಶ ರಾಯ್ಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಅಧಿಕಾರಿ ನರೇಂದ್ರ ನಾಯಕ್‌, ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next