Advertisement

ಸೆಪ್ಟೆಂಬರ್ 18-25; ಅಂತಾರಾಷ್ಟ್ರೀಯ ಸಮತೋಲನ ಅರಿವು ಸಪ್ತಾಹ

09:38 AM Sep 25, 2022 | Team Udayavani |

ಅಂತಾರಾಷ್ಟ್ರೀಯ ಸಮತೋಲನ ಅರಿವು ಸಪ್ತಾಹವನ್ನು ಸೆಪ್ಟಂಬರ್‌ 18ರಿಂದ 25ರ ವರೆಗೆ ಆಚರಿಸಲಾಗುತ್ತಿದೆ. ದೇಹ ಸಮತೋಲನ/ ಕಿವಿಕುಹರದ ಕಾಯಿಲೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವುದು ಹಾಗೂ ಈ ಸಮಸ್ಯೆಯನ್ನು ಹೊಂದಿರುವ ರೋಗಿಗಳಿಗೆ ಸಮತೋಲನಕ್ಕೆ ಮರಳುವ ಪ್ರಯತ್ನದಲ್ಲಿ ಸಹಾಯ ಮಾಡುವುದು ಈ ಸಪ್ತಾಹ ಆಚರಣೆಯ ಉದ್ದೇಶವಾಗಿದೆ.

Advertisement

ಕಿವಿಕುಹರದ ಕಾಯಿಲೆಗಳು ಎಂದರೇನು, ಇವುಗಳನ್ನು ಹೊಂದಿರುವ ರೋಗಿಗಳು ಎದುರಿಸುವ ತೊಂದರೆಗಳು ಏನು, ಇವುಗಳನ್ನು ಗುಣಪಡಿಸಿಕೊಳ್ಳಲು ಯಾರನ್ನು ಸಂಪರ್ಕಿಸಬೇಕು, ಸಮಸ್ಯೆಯಿಂದ ಹೇಗೆ ಪಾರಾಗಬಹುದು ಎಂಬ ಪ್ರಶ್ನೆಗಳು ತಲೆತಿರುಗುವಂತಹ ಅನುಭವದಿಂದ ದೈಹಿಕ ಅಸಮತೋಲನ ಅನುಭವಕ್ಕೆ ಬರುತ್ತದೆ. ಈ ತೀವ್ರವಾಗಿ ತಲೆ ತಿರುಗುವಿಕೆಯನ್ನು ವರ್ಟಿಗೋ ಎನ್ನಲಾಗುತ್ತದೆ. ಈ ವರ್ಟಿಗೋ ತಲೆ ತಿರುಗುವಿಕೆ ಎಳೆಯ ಮಕ್ಕಳಿಂದ ತೊಡಗಿ ವಯೋವೃದ್ಧರ ವರೆಗೆ ಹೆಂಗಸರು ಅಥವಾ ಗಂಡಸರಲ್ಲಿ ಕಂಡುಬರಬಹುದು. ದೈಹಿಕ ಅನಾರೋಗ್ಯಗಳು, ದೇಹಕ್ಷಯದ ಅನಾರೋಗ್ಯಗಳು, ಅಪಘಾತ/ಅವಘಡಗಳಲ್ಲಿ ಮಿದುಳಿಗಾದ ಹಾನಿ, ಆಟೊ-ಇಮ್ಯೂನ್‌ ಕಾಯಿಲೆಗಳು ಇತ್ಯಾದಿ ಹಲವು ವಿಧವಾದ ಅನಾರೋಗ್ಯಗಳ ಲಕ್ಷಣವಾಗಿಯೂ ತಲೆತಿರುಗುವಿಕೆ ಕಂಡುಬರಬಹುದು.

ಹೊಂದಿರುವ ಅನಾರೋಗ್ಯವನ್ನು ಆಧರಿಸಿ ವ್ಯಕ್ತಿಯಿಂದ ವ್ಯಕ್ತಿಗೆ ತಲೆ ತಿರುಗುವಿಕೆಯ ಲಕ್ಷಣದ ಅವಧಿ, ತೀವ್ರತೆಗಳು ಬೇರೆ ಬೇರೆಯಾಗಿರುತ್ತವೆ. ದೀರ್ಘ‌ಕಾಲದಿಂದ ತಲೆ ತಿರುಗುವಿಕೆಯನ್ನು ಹೊಂದಿದ್ದು, ಬೇರೆ ಯಾವುದೇ ದೈಹಿಕ ಅನಾರೋಗ್ಯದ ವೈದ್ಯಕೀಯ ಇತಿಹಾಸ ಹೊಂದಿರದ ವ್ಯಕ್ತಿಯು ತನ್ನ ಒಳಗಿವಿಯಲ್ಲಿ ಇರುವ ದೈಹಿಕ ಸಮತೋಲನ ಅಂಗದ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ದೈಹಿಕ ಸಮತೋಲನಕ್ಕೆ ಕಾರಣವಾಗುವ ಅಂಗವು ಒಳಗಿವಿಯಲ್ಲಿದ್ದು, ಇದನ್ನು ವೆಸ್ಟಿಬ್ಯುಲಾರ್‌ ಸಿಸ್ಟಮ್‌ ಎನ್ನುತ್ತಾರೆ.

ಈ ಸಮಸ್ಯೆಯಿಂದಾಗಿ ವ್ಯಕ್ತಿಯು ತನ್ನ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ಅವರ ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆ. ಇವುಗಳಲ್ಲಿ:

  • ನಿರ್ದಿಷ್ಟ ದೈನಿಕ ಚಟುವಟಿಕೆಗಳನ್ನು ಕೈಗೊಳ್ಳಲು ಕಷ್ಟವಾಗುವುದು
  • ಎದ್ದು ನಿಲ್ಲುವುದು, ಮುಂದಕ್ಕೆ ಬಾಗುವುದು, ಸ್ಥಿರವಾಗಿ ಇರುವುದು ಇತ್ಯಾದಿ ದೇಹಭಂಗಿಗಳು ಅಗತ್ಯವಾದ ನಿರ್ದಿಷ್ಟ ಮನೆಗೆಲಸಗಳನ್ನು ಕೈಗೊಳ್ಳುವುದಕ್ಕೆ ಕಷ್ಟವಾಗುವುದು
  • ವ್ಯಾಯಾಮಗಳನ್ನು ಮಾಡುವುದು, ಆಟಗಳನ್ನು ಆಡುವುದಕ್ಕೆ ಕಷ್ಟವಾಗುವುದು
  • ಪ್ರಯಾಣ ಮಾಡುವುದು, ವಾಹನ ಚಲಾಯಿಸುವುದಕ್ಕೆ ಕಷ್ಟವಾಗುವುದು

ಸಮತೋಲನದ ಸಮಸ್ಯೆಯನ್ನು ಹೊಂದಿರುವವರು ದೈನಿಕ ಕೆಲಸಗಳಲ್ಲಿ ಎದುರಾಗುವ ಈ ತೊಂದರೆಗಳಿಂದ ಪಾರಾಗುವುದಕ್ಕಾಗಿ ಸಹಾಯವನ್ನು ಅಥವಾ ತಮ್ಮ ಗೆಳೆಯರು ಹಾಗೂ ಕುಟುಂಬ ಸದಸ್ಯರಿಂದ ನೆರವನ್ನು ಯಾಚಿಸುತ್ತಾರೆ ಅಥವಾ ಇಂತಹ ಸಂದರ್ಭಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಟುವಟಿಕೆರಹಿತ ಜೀವನಶೈಲಿಯ ಮೊರೆಹೋಗುತ್ತಾರೆ. ವಿಶೇಷವಾಗಿ, ದೀರ್ಘ‌ಕಾಲಿಕ ತಲೆತಿರುಗುವಿಕೆಯನ್ನು ಹೊಂದಿರುವ ರೋಗಿಯು ಇದಕ್ಕೆ ಸಮಾನವಾದ ಪರಿಣಾಮಕಾರಿತ್ವವುಳ್ಳ ಪರಿಹಾರಾತ್ಮಕ ಕಾರ್ಯತಂತ್ರವನ್ನು ಬೆಳೆಸಿಕೊಳ್ಳಬಹುದು ಅಥವಾ ಬೆಳೆಸಿಕೊಳ್ಳದೆ ಇರಬಹುದು. ದೀರ್ಘ‌ಕಾಲಿಕ ಅವಧಿಯಲ್ಲಿ ಪರಿಹಾರ ಕಾಣದ ತಲೆ ತಿರುಗುವಿಕೆಯು ಗ್ರಹಣಾತ್ಮಕ ವೈಕಲ್ಯಕ್ಕೂ ಕಾರಣವಾಗಬಹುದು.

Advertisement

ಇದರಿಂದಾಗಿ ರೋಗಿಯು ಉತ್ತಮ ಏಕಾಗ್ರತೆ, ಗಮನ, ಸ್ಮರಣೆ ಮತ್ತು ದೃಶಾತ್ಮಕ ಗಮನ ಕೇಂದ್ರೀಕರಣ ಅಗತ್ಯವಾದ ನಿರ್ದಿಷ್ಟ ಕಾರ್ಯವನ್ನು ಕೈಗೊಳ್ಳಲು ತೊಂದರೆಯನ್ನು ಅನುಭವಿಸಬಹುದು. ಉದಾಹರಣೆಗೆ, ಓದುವುದು, ಬರೆಯುವುದು, ತರಕಾರಿ ಹೆಚ್ಚುವುದು, ವಾಹನ ಚಲಾಯಿಸುವುದು ಇತ್ಯಾದಿ. ಜತೆಗೆ ಇದರಿಂದಾಗಿ ಆ ವ್ಯಕ್ತಿಯ ವೃತ್ತಿಜೀವನದ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಇದರ ಪರಿಣಾಮವಾಗಿ ವ್ಯಕ್ತಿಯ ಮೇಲೆ ಮನಶಾಸ್ತ್ರೀಯ ಪರಿಣಾಮಗಳು ಉಂಟಾಗಬಹುದಾಗಿದ್ದು, ಆತ/ ಆಕೆ ಕಿರಿಕಿರಿಗೊಳ್ಳಬಹುದು, ಗೊಂದಕ್ಕೀಡಾಗಬಹುದು, ಹತಾಶೆಗೊಳ್ಳಬಹುದು, ಆತಂಕಕ್ಕೀಡಾಗಬಹುದು ಮಾತ್ರವಲ್ಲದೆ ಆತ್ಮವಿಶ್ವಾಸದ ಕೊರತೆಯಿಂದ ಖನ್ನತೆಗೀಡಾಗಬಹುದು. ತಲೆತಿರುಗುವಿಕೆಯು ತಮ್ಮ ಜೀವನ ಗುಣಮಟ್ಟದ ಮೇಲೆ ಬೀರುವ ಪ್ರತಿಕೂಲ ಪರಿಣಾಮದಿಂದಾಗಿ ಅವರು ವೈಕಲ್ಯಕ್ಕೀಡಾದ ಭಾವನೆಯನ್ನು ಹೊಂದಬಹುದು.

ಆಡಿಯಾಲಜಿಸ್ಟ್‌ಗಳ ಪಾತ್ರ

ಈ ತೊಂದರೆಯನ್ನು ಪರಿಹರಿಸಲು ಬಹುವಿಭಾಗೀಯ ತಂಡದ ಮೂಲಕ ಚಿಕಿತ್ಸೆಯನ್ನು ಒದಗಿಸುವುದು ತುಂಬಾ ಸಹಾಯಕಾರಿಯಾಗಿರುತ್ತದೆ. ಇದರಲ್ಲಿ ಜನರಲ್‌ ಮೆಡಿಸಿನ್‌, ನ್ಯೂರಾಲಜಿ, ಇಎನ್‌ಟಿ, ಆಡಿಯಾಲಜಿ, ಫಿಸಿಯೋಥೆರಪಿ, ಆಕ್ಯುಪೇಶನ್‌ ಥೆರಪಿ ಮತ್ತು ಆಪ್ತಮಾಲಜಿ ವಿಭಾಗಗಳು ಒಳಗೊಳ್ಳುತ್ತವೆ. ರೋಗಪತ್ತೆಯನ್ನು ಆಧರಿಸಿ ವೈದ್ಯರ ಜತೆಗಿನ ಸಮಾಲೋಚನೆಯ ಬಳಿಕ ನಿರ್ದಿಷ್ಟ ನಿರ್ವಹಣ ಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ದೀರ್ಘ‌ಕಾಲಿಕ ತಲೆ ತಿರುಗುವಿಕೆಯ ಸಮಸ್ಯೆಯನ್ನು ಹೊಂದಿದ್ದು, ಇತರ ಯಾವುದೇ ಅಂತರ್ಗತ ವೈದ್ಯಕೀಯ ಸಮಸ್ಯೆ ಅಥವಾ ರೋಗ ಇತಿಹಾಸ ಹೊಂದಿರದ ವ್ಯಕ್ತಿಗಳು ತಮ್ಮ ಕಿವಿಯ ಒಳಭಾಗದಲ್ಲಿ ಹೊಂದಿರುವ ಸಮತೋಲನ ಅಂಗದ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸುವುದಕ್ಕಾಗಿ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಒಳಗಿವಿಯ ಕಾರ್ಯನಿರ್ವಹಣೆಯನ್ನು ಪರೀಕ್ಷಿಸುವುದಕ್ಕಾಗಿ ಶ್ರವಣ ಸಾಮರ್ಥ್ಯ ವಿಶ್ಲೇಷಣೆ ಮತ್ತು ವೆಸ್ಟಿಬ್ಯುಲಾರ್‌ ವಿಶ್ಲೇಷಣೆಯನ್ನು ನಡೆಸುವಲ್ಲಿ ಆಡಿಯಾಲಜಿಸ್ಟ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

-ಅನುಪ್ರಿಯಾ ಎಬೆನೆಜರ್‌, ಕ್ಲಿನಿಕಲ್‌ ಸೂಪರ್‌ವೈಸರ್‌, ಆಡಿಯಾಲಜಿ ಮತ್ತು ಎಸ್‌ಎಲ್‌ಪಿ ವಿಭಾಗ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಡಿಯಾಲಜಿ ಮತ್ತು ಎಸ್‌ಎಲ್‌ಪಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next