Advertisement

ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಬಹಿರಂಗ

06:54 PM Nov 22, 2022 | Team Udayavani |

ಮಸ್ಕಿ: ಕಾಂಗ್ರೆಸ್‌ ಪಾಳಯದಲ್ಲಿ ಇಷ್ಟು ದಿನಗಳಿಂದ ಒಳಗೊಳಗೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೂ ಸ್ಫೋಟಗೊಂಡಿವೆ. ಅಸಮಾಧಾನಿತರ ಗುಂಪು ನೆರೆಯ ಮುದಗಲ್‌ ಪಟ್ಟಣದಲ್ಲಿ ಸಭೆ ನಡೆಸುವ ಮೂಲಕ ಪಕ್ಷದ ಶಾಸಕರು, ಅಧ್ಯಕ್ಷರ ಮೇಲಿರುವ ಮುನಿಸು ಹೊರ ಹಾಕಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

2021ರಲ್ಲಿ ನಡೆದಿದ್ದ ಮಸ್ಕಿ ಉಪಚುನಾವಣೆಯಲ್ಲಿ ಶಾಸಕ ಆರ್‌. ಬಸನಗೌಡ ತುರುವಿಹಾಳ 30ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ಕಾಂಗ್ರೆಸ್‌ ಹೆಸರೇ ಇಲ್ಲದ ಮಸ್ಕಿಯಲ್ಲಿ ಪಕ್ಷ ಸಂಘಟಿಸಿ, ಕಾಂಗ್ರೆಸ್‌ ಗೆಲುವಿಗೆ ಹೆಗಲು ಕೊಟ್ಟಿದ್ದರು.

ಆದರೆ ಈ ಗೆಲುವಿನ ನಗೆ ಕೆಲವೇ ದಿನಗಳಲ್ಲಿ ಮಾಯವಾದಂತಾಗಿದೆ. ಪಕ್ಷದಲ್ಲಿನ ಭಿನ್ನಾಭಿಪ್ರಾಯ, ಮುಖಂಡರ ನಡುವಿನ ಸಮನ್ವಯ ಕೊರತೆಯಿಂದಾಗಿ ಒಳಗೊಳಗೆ ಇದ್ದ ಅಸಮಾಧಾನದ ಬೇಗುದಿ ಈಗ ಸ್ಫೋಟಗೊಂಡಿದೆ. 2023ರ ಸಾರ್ವತ್ರಿಕ ಚುನಾವಣೆ ಹತ್ತಿರವಾದ ದಿನಗಳಲ್ಲೇ, ಶಾಸಕ ಆರ್‌. ಬಸನಗೌಡ ತುರುವಿಹಾಳ ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪೂರ ಅವರನ್ನೇ ಹೊರಗಿಟ್ಟು ಪಕ್ಷದ ಪ್ರಮುಖರು ನಡೆಸಿರುವ ಸಭೆ ತೀವ್ರ ಕುತೂಹಲ ಮೂಡಿಸಿದೆ.

ಹಲವರು ಭಾಗಿ: ಕಾಂಗ್ರೆಸ್‌ನ ಮುಖಂಡರಾದ ಮಲ್ಲನಗೌಡ ಗುಂಡಾ, ಆದನಗೌಡ ಸಂತೆಕೆಲ್ಲೂರು, ಹಳ್ಳಿ ಮಲ್ಲನಗೌಡ, ಸಿದ್ದಣ್ಣ ಹೂವಿನಬಾವಿ, ಕರೇಗೌಡ ಕುರಕುಂದಾ, ಬಸನಗೌಡ ಮುದಬಾಳ, ಮೃತ್ಯುಂಜಯ್ಯಸ್ವಾಮಿ ಗೂಗೇಬಾಳ, ಮಲ್ಲಿಕಾರ್ಜುನ ಗ್ರೀನ್‌ಸಿಟಿ, ಮಲ್ಲಣ್ಣ ನಾಗರಬೆಂಚಿ, ಪಂಪನಗೌಡ ಕನ್ನಾಳ, ಹನುಮೇಶ ಬಾಗೋಡಿ ಸೇರಿ ಕಾಂಗ್ರೆಸ್‌ನ ಹಲವು ಮುಂಚೂಣಿ ನಾಯಕರೇ ಸಭೆಯಲ್ಲಿ ಭಾಗವಹಿಸಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ, ಕಾರ್ಯಕರ್ತರು, ಮುಖಂಡರ ಕಡೆಗಣನೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಮತ್ತು ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕ ಸಂಬಂ ಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆದಿವೆ ಎನ್ನಲಾಗಿದೆ. ಇನ್ನು ಕೆಲವರು ಕಳೆದೊಂದು ವರ್ಷದಿಂದ ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ತಮ್ಮ ಮಾತುಗಳಲ್ಲಿ ತೀವ್ರ ಅಸಮಾಧಾನ ಹೊರ ಹಾಕಿದ್ದರೆ, ಇನ್ನು ಕೆಲವರು ಆಗಿರುವ ಸಮಸ್ಯೆಯನ್ನು ಇತ್ಯರ್ಥಪಡಿಸಿ 2023ರ ಚುನಾವಣೆ ವೇಳೆಗೆ ಪಕ್ಷ ಸಂಘಟಿಸಬೇಕೆನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ.

ಹೆಚ್ಚಿದ ದಿಗಿಲು: ಶಾಸಕ ಆರ್‌.ಬಸನಗೌಡ ತುರುವಿಹಾಳ ಸ್ವ ಕ್ಷೇತ್ರದಲ್ಲೇ ಇದ್ದಾರೆ. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಕೂಡ ಸ್ಥಳೀಯವಾಗಿ ಲಭ್ಯವಿದ್ದಾಗಲೂ ಕಾಂಗ್ರೆಸ್‌ನ ಅತೃಪ್ತರ ಗುಂಪು ಸಭೆ ನಡೆಸಿದ್ದು, ಕೈ ಪಾಳಯದಲ್ಲಿಯೇ ಹೆಚ್ಚು ದಿಗಿಲು ಸೃಷ್ಟಿಸಿದೆ. ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದು ಹುದ್ದೆ ಎನ್ನುವ ನಿಯಮವಿರುವಾಗಲೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನು ಮುಂದುವರಿಸಲಾಗಿದೆ. ಇದೆಲ್ಲವೂ ಗೊತ್ತಿದ್ದರೂ ಶಾಸಕರು ಮೌನವಾಗಿಯೇ ಇರುತ್ತಾರೆ.

Advertisement

ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಂಘಟನೆ ಕ್ಷೀಣಿಸುತ್ತಿದೆ. ಕೆಲವೇ ಜನರಿಂದ ಪಕ್ಷದಲ್ಲಿ ಇಷ್ಟೆಲ್ಲ ಸಮಸ್ಯೆಯಾಗುತ್ತಿದೆ. ಶಾಸಕರ ಮುಂದೆ ಹೇಳಿಕೊಂಡರೂ ಇದಕ್ಕೆಲ್ಲ ಸ್ಪಂದನೆ ಸಿಗುತ್ತಿಲ್ಲ. ನೆರೆ ಕ್ಷೇತ್ರಗಳ ಹಂಪನಗೌಡ ಬಾದರ್ಲಿ, ಅಮರೇಗೌಡ ಬಯ್ನಾಪೂರ, ಎನ್‌. ಎಸ್‌.ಭೋಸರಾಜು ಅಂತ ಹಿರಿಯರ ಗಮನಕ್ಕೂ ಕೂಡ ಇಲ್ಲಿನ ಪರಿಸ್ಥಿತಿ ತರಲಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪರ್ಯಾಯ ಮಾರ್ಗ ತುಳಿಯಬೇಕಾಗುತ್ತದೆ ಎಂದು ಇನ್ನು ಕೆಲವರು ಸಭೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದು, ಮಸ್ಕಿ ಕಾಂಗ್ರೆಸ್‌ನಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದಂತಾಗಿದೆ.

ಕೆಪಿಸಿಸಿ ಘಟಕಕ್ಕೆ ನನ್ನನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ ದಿನವೇ ನಾನು ಮಸ್ಕಿ ನಗರ ಬ್ಲಾಕ್‌ ಕಾಂಗ್ರೆಸ್‌ ಘಟಕಕ್ಕೆ ರಾಜೀನಾಮೆ ನೀಡಿಯಾಗಿದೆ. ಪಕ್ಷ ಸಂಘಟನೆಗೆ ಅನುಕೂಲವಾಗುವ ವ್ಯಕ್ತಿಯನ್ನು ನೋಡಿ ಅಧ್ಯಕ್ಷರನ್ನಾಗಿ ನೇಮಿಸಲು ಜಿಲ್ಲಾಧ್ಯಕ್ಷ ಬಿ.ವಿ.ನಾಯಕರಿಗೂ, ಶಾಸಕ ಆರ್‌. ಬಸನಗೌಡರಿಗೂ ನಾನು ಮನವಿ ಮಾಡಿದ್ದೇನೆ. ಇಂತಹ ಸಮಯದಲ್ಲಿ ಪಕ್ಷದ ಕೆಲವು ಮುಖಂಡರು ಸಭೆ ಸೇರಿ ಚರ್ಚೆ ನಡೆಸುವುದು ಹಾಸ್ಯಾಸ್ಪದ. ಪಕ್ಷದ ಸಂಘಟನೆ ಬಗ್ಗೆ ನೈಜ ಕಾಳಜಿ ಇದ್ದರೆ ಇವೆಲ್ಲವನ್ನೂ ಪಕ್ಷದ ವೇದಿಕೆಯಲ್ಲೇ ಚರ್ಚೆ ನಡೆಸಬೇಕು. ಇಲ್ಲವೇ ಶಾಸಕರ ಬಳಿ ಹೇಳಿಕೊಳ್ಳಬೇಕು.
ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ
ಮುಖಂಡರು ಕಾಂಗ್ರೆಸ್‌

ಮಲ್ಲಿಕಾರ್ಜುನ ಚಿಲ್ಕರಾಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next