Advertisement

ಅಸಲಿ ಹೋಮ್‌ ಮೇಕರ್‌ ಇವರೇ!

12:30 AM Feb 26, 2019 | |

ಕೆಲವು ದಿನಗಳ ಹಿಂದಿನ ಮಾತು. ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ತೆಗೆದಿದ್ದ ಕೆಲವು ಚಿತ್ರಗಳನ್ನು ನಮ್ಮ ಬಂಧುಗಳ ವಾಟ್ಸಾಪ್‌ ಗ್ರೂಪಿನಲ್ಲಿ ಹಂಚಿಕೊಂಡಿದ್ದೆ. ಗುಂಪಿನ ಸದಸ್ಯರೊಬ್ಬರು ಇಂಟೀರಿಯರ್ ತುಂಬಾ ಚೆನ್ನಾಗಿದೆ! ಬೇರೆ ಫೋಟೋಗಳಿದ್ದರೆ ಕಳಿಸಿ ಅಂದರು! ಇದರಿಂದ ಒಂದೂ ವಿಷಯವಂತೂ ಸ್ಪಷ್ಟವಾಯಿತು. ಈಗೀಗ ಜನರು ಮನೆ ಕಟ್ಟುವುದಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮನೆಯ ಒಳಾಂಗಣಕ್ಕೂ ನೀಡುತ್ತಿದ್ದಾರೆ. ಇದರಿಂದಾಗಿ ಒಳಾಂಗಣ ವಿನ್ಯಾಸ (ಇಂಟೀರಿಯರ್‌ ಡಿಸೈನಿಂಗ್‌) ಕ್ಷೇತ್ರ ವಿಸ್ತರಿಸುತ್ತಿದೆ. 

Advertisement

ಏನಿದು ಒಳಾಂಗಣ ವಿನ್ಯಾಸ?
ಒಳಾಂಗಣ ವಿನ್ಯಾಸವೆಂದರೆ(ಇಂಟೀರಿಯರ್‌ ಡಿಸೈನ್‌) ಕಟ್ಟಡ ಅಥವಾ ಕೊಠಡಿಯ ಒಳಗನ್ನು ಒಂದು ಶೈಲಿಗನುಸಾರವಾಗಿ ವಿನ್ಯಾಸ ಮಾಡುವ ವೃತ್ತಿ. ಇದಕ್ಕೆ ವಿನ್ಯಾಸ, ಸೃಜನಾತ್ಮಕವಾಗಿ ಆಲೋಚಿಸುವ ಗುಣ, ಗ್ರಾಹಕರೊಂದಿಗೆ ಉತ್ತಮವಾದ ಸಂವಹನ ಕಲೆ, ನಿರ್ವಹಣಾ ಕಲೆ ಮತ್ತು ಅನೇಕ ಮಿತಿಯೊಳಗೆ ಒಪ್ಪಿತ ಕಾರ್ಯಮುಗಿಸುವ ಕ್ಷಮತೆ ಬೇಕಾಗುತ್ತದೆ. ವಿನ್ಯಾಸಗಾರ ಕೊಠಡಿ ಅಥವಾ ಕಟ್ಟಡವನ್ನು ಅದರ ಬಳಕೆ, ಸೌಕರ್ಯ, ಸ್ಥಳಾವಕಾಶದ ಅತ್ಯುತ್ತಮ ಬಳಕೆ ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ರೂಪಿಸಲು ಹೊರಟಿರುವ ಸ್ಥಳದ ವಿನ್ಯಾಸವನ್ನು ಮುಂದಾಗಿಯೇ ಕಲ್ಪಿಸಿಕೊಳ್ಳುವ ಸಾಮರ್ಥ್ಯ ಇಂಟೀರಿಯರ್‌ ಡಿಸೈನರ್ಗೆ ಇರುತ್ತದೆ. ಶಕ್ತಿಯುಳ್ಳವರಾಗಿರುತ್ತಾರೆ. ಕೆಲವೊಮ್ಮೆ ಕೊಠಡಿ ಅಥವಾ ಕಟ್ಟಡ ನಿರ್ಮಾಣ ಹಂತದಲ್ಲಿರುವಾಗಲೇ ಇವರು ವಾಸ್ತುಶಿಲ್ಪಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಾಗಿಯೂ ಬರುತ್ತದೆ. 

ಅವರ ಜವಾಬ್ದಾರಿಗಳೇನು? 
ಗ್ರಾಹಕರೊಂದಿಗೆ ಚರ್ಚಿಸಿ ಅವರಿಗೆ ಬೇಕಾಗಿರುವುದೇನು ಎಂಬುದರ ಸ್ಪಷ್ಟ ಕಲ್ಪನೆ ಪಡೆಯುವುದು.
ಗ್ರಾಹಕರೊಂದಿಗೆ ಚರ್ಚಿಸಿ ಬಜೆಟ್‌ ಸಿದ್ಧಪಡಿಸುವುದು
ಕೆಲಸ ಆರಂಭಿಸುವ ಮೊದಲೇ ಅತ್ಯುತ್ತಮ ವಿನ್ಯಾಸದ ಚಿತ್ರ ತಯಾರಿಸುವುದು 
ದೀಪಾಲಂಕಾರ, ಗೋಡೆಗಳ ಹೊದಿಕೆ, ವಸ್ತುಗಳು, ನೆಲಹಾಸು, ವಿದ್ಯುತ್‌ ವೈರಿಂಗ್‌, ನೀರಿನ ವ್ಯವಸ್ಥೆ ಈ ಎಲ್ಲವನ್ನೂ ಆಯ್ಕೆ ಮಾಡುವುದು.
ಕ್ಯಾಡ್‌ನ‌ಂಥ ಸಾಫ್ಟ್ವೇರ್‌ ತಂತ್ರಾಂಶವನ್ನು ಬಳಸಿ ವಿನ್ಯಾಸ ರೂಪಿಸುವುದು
ಎಲ್ಲ ಕೆಲಸಗಳು ಸರಿಯಾಗಿ ಯೋಜನೆಯನುಸಾರ ನಿರ್ಮಾಣಗೊಳ್ಳುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು

ಉಪಕರಣಗಳನ್ನು ತಿಳಿದಿರಬೇಕು
ಅವಕಾಶಗಳ ಕಣಜವಾಗಿರುವ ಈ ಕ್ಷೇತ್ರದ ಮೊಟ್ಟಮೊದಲ ಅರ್ಹತೆಯೇ ಸೃಜನಶೀಲತೆ. ವಸ್ತುಗಳನ್ನು ಕಲಾಕೃತಿಗಳನ್ನಾಗಿ ನೋಡುವ ಮನೋಧರ್ಮವನ್ನು ಈ ಕೆಲಸ ಬೇಡುತ್ತದೆ! ರಿಯಲ್‌ ಎಸ್ಟೇಟ್‌ ಉದ್ಯಮದ ಜೊತೆ ಜೊತೆಯಲ್ಲೇ ಬೆಳೆಯುತ್ತಿರುವ ಕ್ಷೇತ್ರ ಒಳಾಂಗಣ ವಿನ್ಯಾಸ. ಹಾಗಾಗಿ, ಅವಕಾಶಗಳಿಗೇನು ಬರವಿಲ್ಲ. ವಿನ್ಯಾಸಕ್ಕೆ ತಕ್ಕುದಾದ ವಿದ್ಯುತ್‌ ಉಪಕರಣಗಳಿಂದ ತೊಡಗಿ, ಮೆಟ್ಟಿಲುಗಳು, ಗ್ರಿಲ್‌ಗ‌ಳು, ವಿಭಜಕಗಳು ಇನ್ನೂ ಹಲವು ವಸ್ತುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ವಿನ್ಯಾಸಕರು ಇವುಗಳ ಸಾರ್ಥಕ ಬಳಕೆಯನ್ನು ಮಾಡಿಕೊಳ್ಳುತ್ತಲೂ ಇದ್ದಾರೆ.

ಟ್ರೆಂಡ್‌ ಏನು ಗೊತ್ತಾ?
ಹಾಗೆಯೇ, ಗ್ರಾಹಕರಿಗೆ ಸೂಕ್ತವಾದ ಸಲಹೆಗಳನ್ನು ನೀಡುವುದು. ಇಂತಿಷ್ಟು ಸಮಯದಲ್ಲಿ ಇಷ್ಟು ಕೆಲಸಗಳಾಗುತ್ತವೆ. ಇಷ್ಟುಹೊತ್ತಿಗೆ ಪೂರ್ಣವಾಗುತ್ತದೆ ಎಂಬ ವೇಳಾಪಟ್ಟಿ ನೀಡುವುದು ಸಹ ಇಂದಿನ ದಿನಮಾನಗಳಲ್ಲಿ ವೃತ್ತಿಪರರು ಎನಿಸಿಕೊಳ್ಳಲು ಅತ್ಯಾವಶ್ಯಕ. ಆ ಅರ್ಹತೆಯೂ ಬೇಕು. ಎಷ್ಟೋ ಬಾರಿ ಅವಶ್ಯಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ. ಇರುವುದು ಹೊಂದುವುದಿಲ್ಲ! ಇಂತಹ ಸಂದರ್ಭದಲ್ಲಿ ಸಿಕ್ಕ ವಸ್ತುಗಳನ್ನು ಒಪ್ಪಿತ ಶೈಲಿಗೆ ಸೂಕ್ತವಾಗುವಂತೆ ಬಳಸುವ ಕೌಶಲ, ಜಾಣ್ಮೆ ಸಹ ಅಗತ್ಯ. ಪರಿಸರ ಪ್ರೇಮ ಆಂತರಿಕ ವಿನ್ಯಾಸದ ಒಂದು ಭಾಗವೇ ಆಗಿದೆ. ಅದರಲ್ಲಿಯೂ ಗಂಭೀರವಾದ ವಿಜ್ಞಾನದ ಪ್ರತಿಫ‌ಲನಗಳನ್ನು ಕಾಣುತ್ತಿದ್ದೇವೆ. ಅದರ ಸ್ಪಷ್ಟ ಅರಿವನ್ನು ಗಳಿಸಿಕೊಳ್ಳಬೇಕು. ಹಾಗೆಯೇ, ಹೊಸ ಹೊಸ ಪರಿಕಲ್ಪನೆಗಳನ್ನು ಗ್ರಾಹಕರಿಗೆ ಪರಿಚಯಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದಿನ ಟ್ರೆಂಡ್‌, ಹೊಸ ಬೆಳವಣಿಗೆ ಎಲ್ಲವನ್ನೂ ತಿಳಿದುಕೊಂಡಿರಬೇಕು! 

Advertisement

ವಿದ್ಯಾರ್ಹತೆ
ಪದವಿಪೂರ್ವ ಮಟ್ಟದ ಪರೀಕ್ಷೆಗಳನ್ನು ಪಾಸು ಮಾಡಿರುವವರು (ಯಾವುದೇ ತತ್ಸಮಾನ ಪರೀಕ್ಷೆ ಸಹ ಆಗಬಹುದು) ಒಳಾಂಗಣ ವಿನ್ಯಾಸ ಕಲಿಯಲು ಅರ್ಹರು. ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಸಹ ಒಳಾಂಗಣ ವಿನ್ಯಾಸ ಡಿಪ್ಲೊಮಾ ಕೋರ್ಸಿಗೆ ಅರ್ಹರು. ಒಳಾಂಗಣ ವಿನ್ಯಾಸ ಕುರಿತ ವಿಶೇಷ ಒಲವಿರುವ ಪದವೀಧರರು ಸಹ ಈ ಕೋರ್ಸ್‌ ತೆಗೆದುಕೊಳ್ಳಬಹುದು.

ಕೆಲಸ ಎಲ್ಲೆಲ್ಲಿ? 
ಕಟ್ಟಡ ನಿರ್ಮಾಣ ಸಂಸ್ಥೆಗಳು
ವಾಸ್ತುಶಿಲ್ಪ ಸಂಸ್ಥೆಗಳು
ಸರ್ಕಾರಿ ಪರಿಯೋಜನೆಗಳು
ಒಳಾಂಗಣ ವಿನ್ಯಾಸ ಏಜೆನ್ಸಿಗಳು
ಹೊಟೇಲು ಮತ್ತು ರೆಸಾರ್ಟುಗಳು
ಅಂತಾರಾಷ್ಟ್ರೀಯ ವಿನ್ಯಾಸ ಸಂಸ್ಥೆಗಳು

ಕಲ್ಗುಂಡಿ ನವೀನ್‌

Advertisement

Udayavani is now on Telegram. Click here to join our channel and stay updated with the latest news.

Next