ಬೆಂಗಳೂರು/ರಾಯಚೂರು/ಹುಬ್ಬಳ್ಳಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಎನ್ ಡಿಎ ಸರಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಐತಿಹಾಸಿಕ ಬಜೆಟ್ ಎಂದು ಶ್ಲಾಘಿಸಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಇದು ರೈತ ವಿರೋಧಿ ಬಜೆಟ್ ಎಂದು ಟೀಕಿಸಿದ್ದಾರೆ.
ರೈತ ಹಾಗೂ ಯುವಜನ ವಿರೋಧಿ ಬಜೆಟ್:ಸಿದ್ದರಾಮಯ್ಯ
ಶೇಕಡ 17.4ರ ಪ್ರಮಾಣದ ನಿರುದ್ಯೋಗ ದೇಶದ ಈಗಿನ ಜ್ವಲಂತ ಸಮಸ್ಯೆ, ಉದ್ಯೋಗ ಸೃಷ್ಟಿಗೆ ನೆರವಾಗುವಂತಹ ಯಾವ ಯೋಜನೆಗಳನ್ನು ಹಣಕಾಸು ಸಚಿವರು ಘೋಷಿಸಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ನೀಡಿದ್ದ ಆಶ್ವಾಸನೆಯ ಬಗ್ಗೆ ಇಡೀ ಬಜೆಟ್ ನಲ್ಲಿ ಸೊಲ್ಲೆತ್ತಿಲ್ಲ. ಇದು ಯುವ ಜನ ವಿರೋಧಿ, ರೈತ ವಿರೋಧಿ ಬಜೆಟ್ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇದೆಲ್ಲಾ ಕೇವಲ ಚುನಾವಣಾ ಗಿಮಿಕ್, ಜನರ ಖಾತೆಗೆ ದುಡ್ಡು, ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಿರುವುದರಿಂದ ಇದೊಂದು ಬಿಜೆಪಿ ಬಜೆಟ್ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಡವರ ಪರವಾದ ಮಾದರಿ ಬಜೆಟ್: ಶೆಟ್ಟರ್
ಕೇಂದ್ರ ಸರಕಾರ ಮಂಡಿಸಿದ್ದ ಬಜೆಟ್ ಬಡವರ ಪರವಾಗಿದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ದೇಶದ ಜನರ ನಿರೀಕ್ಷೆಗಳು ನಿಜವಾಗಿದೆ. ಸಣ್ಣ ಕೈಗಾರಿಕೆಗಳಿಗೆ ಸಾಲದ ಬಡ್ಡಿದರ ಕಡಿಮೆಯಾಗಿದೆ. ತೆರಿಗೆದಾರರಿಗೆ ತುಂಬಾ ಅನುಕೂಲವಾಗಿದ್ದು, ಇದೊಂದು ಜನಪ್ರಿಯ ಬಜೆಟ್ ಎಂದು ಶ್ಲಾಘಿಸಿದರು.
ಇದೊಂದು ಐತಿಹಾಸಿಕ ಬಜೆಟ್: ಬಿಎಸ್ ಯಡಿಯೂರಪ್ಪ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇಂದು ಮಂಡಿಸಿದ್ದು ಐತಿಹಾಸಿಕ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಬಜೆಟ್ ನಲ್ಲಿ ರೈತರು, ಜನಸಾಮಾನ್ಯರು, ಕೃಷಿಗೆ, ತೆರಿಗೆದಾರರಿಗೆ ಸೇರಿದಂತೆ ಎಲ್ಲಾ ವರ್ಗದವರಿಗೂ ಆದ್ಯತೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಜೆಟ್ ಅನ್ನು ಸಿದ್ದರಾಮಯ್ಯ ಟೀಕೆ ಮಾಡಬಹುದು, ದೇಶದ ಆರ್ಥಿಕ ತಜ್ಞರು ಸ್ವಾಗತಿಸಿದ್ದಾರೆ. ರಾಜ್ಯ ಎಲ್ಲಾ ಕಾರ್ಯಕರ್ತರಿಗೆ, ಪ್ರಧಾನಿ ಮೋದಿ ಪರವಾಗಿ ವಿಜಯೋತ್ಸವ ಆಚರಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.