Advertisement

ಸರಣ್‌ನಲ್ಲಿ ಕುತೂಹಲದ ಹೋರಾಟ

10:59 AM May 04, 2019 | Team Udayavani |

ದೇಶಾದ್ಯಂತ 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ, ಛಪ್ರಾ ಲೋಕಸಭಾ ಕ್ಷೇತ್ರವನ್ನು ಪುನರ್‌ವಿಂಗಡಿಸಿದ ಸಂದರ್ಭದಲ್ಲಿ ಸರಣ್‌ ಎಂಬ ಹೊಸ ಕ್ಷೇತ್ರ ರಚಿಸಲಾಯಿತು. 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜೀವ್‌ ಪ್ರತಾಪ್‌ ರೂಡಿ ಮತ್ತು ಆರ್‌ಜೆಡಿ ವತಿಯಿಂದ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಕಣಕ್ಕೆ ಇಳಿದು ದ್ವಿತೀಯ ಸ್ಥಾನಿಯಾಗಿದ್ದರು. ರೂಡಿ ಅವರು ಕೇವಲ 40, 948 ಮತಗಳ ಅಂತರದಿಂದ ಗೆದ್ದಿದ್ದರು. ಪ್ರಸಕ್ತ ಸಾಲಿನಲ್ಲಿ ಬಿಜೆಪಿ ವತಿಯಿಂದ ರೂಡಿ ಅವರೇ ಅಭ್ಯರ್ಥಿಯಾಗಿದ್ದಾರೆ. ಆರ್‌ಜೆಡಿ ವತಿಯಿಂದ ಚಂದ್ರಿಕಾ ಪ್ರಸಾದ್‌ ರಾಯ್‌ಗೆ ಅವಕಾಶ ನೀಡಲಾಗಿದೆ.

Advertisement

ಬಿಹಾರದ ಚಂಪಾರಣ್‌ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಈ ಕ್ಷೇತ್ರವನ್ನು “ಡಿವೋರ್ಸ್‌ -ಸೇವಿಂಗ್‌ ಸೀಟ್‌’ ಎಂದು ಕರೆಯಲಾಗುತ್ತದೆ.

ಮಹಾಮೈತ್ರಿಕೂಟದ ಅಭ್ಯರ್ಥಿ ಚಂದ್ರಿಕಾ ಪ್ರಸಾದ್‌ ರಾಯ್‌, ಯಾದವ ಸಮುದಾಯದಿಂದ ಬಿಹಾರದ ಎರಡನೇ ಮುಖ್ಯಮಂತ್ರಿಯಾಗಿದ್ದ ದರೋಗಾ ಪ್ರಸಾದ್‌ ರಾಯ್‌ ಅವರ ಪುತ್ರ. ಸರಣ್‌ ಕ್ಷೇತ್ರದ ಅಭ್ಯರ್ಥಿಯ ಪುತ್ರಿ ಐಶ್ವರ್ಯಾ ಜತೆಗೆ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಜತೆಗೆ ವಿವಾಹವಾಗಿತ್ತು. ಆದರೆ ಲಾಲು ಪುತ್ರ ಕಳೆದ ವರ್ಷ ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಕ್ಷೇತ್ರದ ಮತದಾರರ ಪ್ರಕಾರ ವಿಚಾರ ಇನ್ನೂ ಇತ್ಯರ್ಥವಾಗಿಲ್ಲವಂತೆ.

ಕ್ಷೇತ್ರದ ಮತದಾರರೊಬ್ಬರ ಹೇಳಿಕೆ ಪ್ರಕಾರ ಚಂದ್ರಿಕಾ ರಾಯ್‌ ಚುನಾವಣೆ ಘೋಷಣೆಯಾಗುವುದಕ್ಕೆ ಮೊದಲು ಕಾರಾಗೃಹದಲ್ಲಿ ಲಾಲು ಪ್ರಸಾದ್‌ ಯಾದವ್‌ರನ್ನು ಭೇಟಿಯಾಗಿ ವಿವಾಹ ವಿಚ್ಛೇದನ ಅರ್ಜಿ ಹಿಂಪಡೆಯುವಂತೆ ಮಗನಿಗೆ ಹೇಳುವಂತೆ ಮನವಿ ಮಾಡಿಕೊಂಡಿದ್ದರು. 2 ಕುಟುಂಬಗಳ ನಡುವೆ ಇರುವ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸಲು ಮತ್ತು ಮುರಿದು ಹೋಗದೆ ಇರಲು ಭಾವನಿಗೆ ಈ ಸ್ಥಾನ ನೀಡಲಾಗಿದೆ. ಲಾಲು ಪುತ್ರನಿಗೆ ಮಾತ್ರ ಈ ವಿವಾಹದಲ್ಲಿ ಮನಸ್ಸಿರಲಿಲ್ಲ ಎನ್ನುತ್ತಾರೆ ಅವರು.

ಆರ್‌ಜೆಡಿ ವರಿಷ್ಠನ ಪುತ್ರ ತೇಜ್‌ ಪ್ರತಾಪ್‌ ಮಾತ್ರ ಖಂಡತುಂಡವಾಗಿ ಮಾವನಿಗೆ ಕ್ಷೇತ್ರ ಬಿಟ್ಟುಕೊಡುವುದಕ್ಕೆ ವಿರೋಧಿಸಿದ್ದರು. ಅವರೇ ಸ್ಪರ್ಧಿಸುವ ಬಗ್ಗೆಯೂ ನಿರಾಕರಿಸಿದ್ದ ತೇಜ್‌ ಪ್ರತಾಪ್‌, ಮಾವ ಎದುರು ಅಳಿಯ ಹೇಗೆ ಸ್ಪರ್ಧಿಸುವುದು ಎಂದು ಪ್ರಶ್ನಿಸಿದ್ದರು.

Advertisement

ಇನ್ನು ಬಿಜೆಪಿ ಅಭ್ಯರ್ಥಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಮತ್ತು ಜೆಡಿಯು ನೇತೃತ್ವದ ಸರ್ಕಾರದಲ್ಲಿ ಅದರಲ್ಲೂ ನಿತೀಶ್‌ ಕುಮಾರ್‌ ಜಾರಿಗೆ ತಂದಿರುವ ವಿವಿಧ ಕಾರ್ಯಕ್ರಮಗಳು, ಉತ್ತಮ ಆಡಳಿತ ನೆರವಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಲಾಲು ಪ್ರಸಾದ್‌ ಯಾದವ್‌ ಕೂಡ ಇಲ್ಲಿಂದ ನಾಲ್ಕು ಬಾರಿ ಸಂಸದರಾಗಿದ್ದರು.

ಈ ಕ್ಷೇತ್ರದ ಅಭ್ಯರ್ಥಿಗಳಾಗಿರುವ ರಾಜೀವ್‌ ಪ್ರತಾಪ್‌ ರೂಡಿ ಮತ್ತು ಚಂದ್ರಿಕಾ ರಾಯ್‌ ಶಾಲೆಯ ದಿನಗಳಿಂದಲೂ ಸ್ಪರ್ಧಿಗಳು ಎಂದು ಅವರ ಆಪ್ತ ವಲಯದ ಸದಸ್ಯರು ಕಿಚಾಯಿಸುತ್ತಾರೆ. ಪಟ್ನಾದ ಎರಡು ಪ್ರಮುಖ ಶಾಲೆಗಳಾಗಿರುವ ಸಂತ ಕ್ಸೇವಿಯರ್‌ ಮತ್ತು ಸಂತ ಮೈಕೆಲ್‌ ಶಾಲೆಯಲ್ಲಿ ಓದಿದವರು. ಚಂದ್ರಿಕಾ ರಾಯ್‌ ಬಿಎ ಆನರ್ಸ್‌ ಪದವಿಯನ್ನು ಚಿನ್ನದ ಪದಕದ ಜತೆಗೆ ಪಡೆದಿದ್ದರು.
ರೂಡಿ ಪಂಜಾಬ್‌ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದರು ಮತ್ತು ಮಗಧ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ನ್ಯಾಷನಲ್‌ ಪೊಲೀಸ್‌ ಅಕಾಡೆಮಿಯಲ್ಲಿ 20 ವರ್ಷಗಳ ಕಾಲ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾಲೇಜು ದಿನಗಳಲ್ಲಿರುವಾಗ ರೂಡಿ ವಿದ್ಯಾರ್ಥಿ ಚಟುವಟಿಕೆಗಳ ಜತೆಗೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆಯುವಂತೆಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇನ್ನು ಚಂದ್ರಿಕಾ ರಾಯ್‌ ಆರು ಬಾರಿ ಶಾಸಕರಾಗಿದ್ದರು ಮತ್ತು ಒಂದು ಬಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಈ ಇಬ್ಬರು ನಾಯಕರು ಈಗ ಹಳೆಯ ಪಟ್ಟುಗಳನ್ನೆಲ್ಲ ಉಪಯೋಗಿಸಿ ಮತಗಳನ್ನಾಗಿ ಪರಿವರ್ತಿಸುವತ್ತ ಪ್ರಯತ್ನ ನಡೆಸಿದ್ದಾರೆ. ಮೇ 6ರಂದು ಮತದಾನ ನಡೆದರೂ ಗೆಲ್ಲುವವರು ಯಾರು ಎಂದು ತಿಳಿಯಲು 23ರ ವರೆಗೆ ಕಾಯಬೇಕು.

ಈ ಬಾರಿ ಕಣದಲ್ಲಿ
– ರಾಜೀವ್‌ ಪ್ರತಾಪ್‌ ರೂಡಿ (ಬಿಜೆಪಿ)
– ಚಂದ್ರಿಕಾ ರಾಯ್‌(ಆರ್‌ಜೆಡಿ)

Advertisement

Udayavani is now on Telegram. Click here to join our channel and stay updated with the latest news.

Next