ಧಾರವಾಡ: ಸಾಹಿತ್ಯ ಸಮ್ಮೇಳನಗಳಲ್ಲಿ ಹಳೇ ಸಾಹಿತಿಗಳು ತೌಡು ಕುಟ್ಟುವುದನ್ನು ನಿಲ್ಲಿಸಿ ಯುವ ಪೀಳಿಗೆಗೆ ಅವಕಾಶ ಕಲ್ಪಿಸಬೇಕು. ಮುಂದಿನ ಪೀಳಿಗೆಗೆ ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದು ಡಾ|ಮಾಲತಿ ಪಟ್ಟಣಶೆಟ್ಟಿ ಹೇಳಿದರು. ನಗರದಲ್ಲಿ ನಡೆದಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು.
ಹೊಸ ಪೀಳಿಗೆ ಸಾಹಿತಿಗಳನ್ನು ತಯಾರು ಮಾಡುವ ಜವಾಬ್ದಾರಿ ಎಲ್ಲ ಹಿರಿಯ ಸಾಹಿತಿಗಳ ಮೇಲಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಯುವಕರಿಗೆ ಪ್ರಾಧಾನ್ಯತೆ ಸಿಗಬೇಕು ಎಂದರು. ಸಾಹಿತ್ಯ ಕೃಷಿಗೆ ಮುಂದಿನ ಪೀಳಿಗೆಯವರು ಸಿದ್ಧರಾಗಬೇಕು. ಸಮ್ಮೇಳನದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ದಿಸೆಯಲ್ಲಿ ಸಾಹಿತ್ಯ ಸಮ್ಮೇಳನದ ರೂಪರೇಷೆ ಬದಲಾಗಬೇಕು.
ಸ್ವರೂಪದಲ್ಲಿ ಬದಲಾವಣೆಯಾದಾಗ ಮಾತ್ರ ಸಮ್ಮೇಳನ ಅರ್ಥ ಪೂರ್ಣವಾಗಲು ಸಾಧ್ಯ. ವಿದ್ಯಾರ್ಥಿಗಳನ್ನು, ಯುವಕರನ್ನು ಒಳಗೊಳ್ಳುವ ಕಾರ್ಯಕ್ರಮ ರೂಪಿಸಬೇಕು. ಯುವ ಸಮುದಾಯ ಸಾಹಿತ್ಯ ಸಮ್ಮೇಳನದಿಂದ ಯಾಕೆ ದೂರ ಉಳಿದಿದ್ದಾರೆ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ ಎಂದರು. ವಿದ್ಯಾರ್ಥಿ ಸಮುದಾಯಕ್ಕಾಗಿ ವಿಶೇಷ ಗೋಷ್ಠಿ, ಸಂವಾದ ಆಯೋಜಿಸಬೇಕು.
ಜ್ವಲಂತ ಸಮಸ್ಯೆಗಳ ಕುರಿತು ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ನಡೆಸುವ ಅವಕಾಶ ಸಿಗಬೇಕು. ಸಭಿಕರು ವೇದಿಕೆಗೆ ಕರೆತರುವ ಕ್ರಮ ಜಾರಿಯಾಗಬೇಕು. ಹಿರಿಯ ಸಾಹಿತಿಗಳು ಎದುರಿಗೆ ಕುಳಿತು ಕೇಳುವಂತಾಗಬೇಕು. ಸಮ್ಮೇಳನದಲ್ಲಿ ಇನ್ನಷ್ಟು ಪುಸ್ತಕ ಮಳಿಗೆಗಳಿಗೆ ಆದ್ಯತೆ ಕೊಡಬೇಕು. ಸಮಾಜದಲ್ಲಿ ಅನ್ಯಾಯವಾದರೆ ಸಾಹಿತಿಗಳಿಂದ ಅನ್ಯಾಯದ ವಿರುದ್ಧ ಧ್ವನಿ ಬರಬೇಕು ಎಂದರು.
ಡಾ|ಸೋಮಶೇಖರ ಇಮ್ರಾಪುರ ಮಾತನಾಡಿ, ಕನ್ನಡ ಪರಂಪರೆಯನ್ನು ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡುವುದು ಅವಶ್ಯ. ಸಮ್ಮೇಳನಗಳಲ್ಲಿ ಕನ್ನಡ, ಕನ್ನಡಿಗರು ಎದುರಿಸುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ವೇದಿಕೆ ಗಳಾಗಬೇಕು. ಕನ್ನಡಿಗರಿಗೆ ಕನ್ನಡದ ಬಗ್ಗೆ ಅಭಿಮಾನ ಕಡಿಮೆಯಾಗದಂತೆ, ಕನ್ನಡ ಸಾಹಿತ್ಯದ ಬಗ್ಗೆ ಒಲವು ಹೆಚ್ಚುವಂತೆ ಮಾಡಬೇಕಿದೆ. ಸಂಸ್ಕೃತಿ ಉಳಿಸುವ ಕೆಲಸವಾಗಬೇಕಿದೆ. ಅದು ಸಮಷ್ಟಿಯಾಗಿ ಬೆಳೆಯಬೇಕಿದೆ.
ಸಂಸ್ಕೃತಿಯಲ್ಲಿರುವ ಒಳ್ಳೆಯ ಸಂಗತಿಗಳನ್ನು ನಾವು ಬಳಸಿಕೊಳ್ಳುವುದು ಮುಖ್ಯ ಎಂದರು. ಸರ್ವಾಧ್ಯಕ್ಷ ವಿ.ಸಿ.ಐರಸಂಗರ ಪುತ್ರಿ ಡಾ|ರತ್ನಾ ಐರಸಂಗ ಅವರು ತಂದೆ ಬರೆದ ಕವನ ವಾಚಿಸಿದರು. ಮೋಹನ ನಾಗಮ್ಮನವರ ಸ್ವಾಗತಿಸಿದರು. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ|ಲಿಂಗರಾಜ ಅಂಗಡಿ, ಎಂ.ಡಿ.ವಕ್ಕುಂದ, ಎ.ಬಿ.ಉಪ್ಪಿನ, ಶರಣು ಗೋಗೇರಿ, ಮಂಗಲಾ ಮೆಟಗುಡ್ಡ ವೇದಿಕೆ ಮೇಲಿದ್ದರು.