ಬೆಂಗಳೂರು: ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ಪ್ರಕ್ರಿಯೆಯಲ್ಲಿನ ಗೊಂದಲಗಳು ನಿವಾರಣೆಯಾದ ನಂತರ ಹೆಚ್ಚಿನ ತೆರಿಗೆದಾರರು ಚಲನ್‌ಗಿಂತ ಹೆಚ್ಚಾಗಿ ಆನ್‌ಲೈನ್ ಮೂಲಕವೇ ತೆರಿಗೆ ಪಾವತಿಸಿರುವುದು ಕಂಡುಬಂದಿದೆ.
ಆಸ್ತಿ ತೆರಿಗೆ ಸಂಗ್ರಹದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2016-17ನೇ ಸಾಲಿನಲ್ಲಿ ಪಾಲಿಕೆಯಿಲ್ಲಿ ಆನ್‌ಲೈನ್ ತೆರಿಗೆ ಪಾವತಿ ಜಾರಿಗೊಳಿಸಲಾಗಿತ್ತು. ಆದರೆ, ತೆರಿಗೆ ಪಾವತಿಯಲ್ಲಿ ಸಾಕಷ್ಟು ಗೊಂದಲಗಳು ಎದುರಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಹಿಂದಿದ್ದ ಎಲ್ಲಾ ಗೊಂದಲಗಳನ್ನು ಇದೀಗ ನಿವಾರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮೊದಲೆಲ್ಲಾ ಚಲನ್‌ಗಳನ್ನು ಭರ್ತಿ ಮಾಡಿ ತೆರಿಗೆ ಪಾವತಿ ಮಾಡುತ್ತಿದ್ದ ಬಹುತೇಕ ತೆರಿಗೆದಾರರು, ಪ್ರಸ್ತುತ ಆನ್‌ಲೈನ್ ಪಾವತಿ ಮೊರೆ ಹೋಗಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 11,35,225 ಆಸ್ತಿದಾರರು ಪಾಲಿಕೆಗೆ ತೆರಿಗೆ ಪಾವತಿಸಿದ್ದಾರೆ. ಆದರೆ, ಆ ಪೈಕಿ 5,57,130 ಮಂದಿ ಚಲನ್ ಪಡೆದು ಬ್ಯಾಂಕ್‌ಗಳಿಗೆ ಹೋಗಿ ತೆರಿಗೆ ಪಾವತಿಸಿದರೆ, 5,78,095 ಮಂದಿ ಆನ್ ಲೈನ್ ಮೂಲಕ ತೆರಿಗೆ ಪಾವತಿಸಿರುವುದು ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ. ಆದರೆ, ಆಸ್ತಿ ತೆರಿಗೆ ಸಂಗ್ರಹದಲ್ಲಿ ಮಾತ್ರ ಚಲನ್ ಮೂಲಕವೇ ಹೆಚ್ಚಿನ ತೆರಿಗೆ ಅಂದರೆ 1239.50 ಕೋಟಿ ರೂ. ಸಂಗ್ರಹವಾಗಿದ್ದು, ಆನ್‌ಲೈನ್ ಮೂಲಕ 513.99 ಕೋಟಿ ರೂ.ಸಂಗ್ರಹವಾಗಿದೆ.
ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 3100 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಹೊಂದಿದ್ದು, ಆರ್ಥಿಕ ವರ್ಷ ಪೂರ್ಣಗೊಳ್ಳಲು ನಾಲ್ಕು ತಿಂಗಳು ಬಾಕಿಯಿರುವಾಗಲೇ ಶೇ.70ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಅದರಂತೆ ಶುಕ್ರವಾರದವರೆಗೆ ಒಟ್ಟು 2,170 ಕೋಟಿ ರೂ. ಸಂಗ್ರಹವಾಗಿದೆ.
ದಾಖಲೆಯ ತೆರಿಗೆ ಸಂಗ್ರಹ: ಕಳೆದ ಐದು ವರ್ಷಗಳಿಗೆ ಹೋಲಿಸಿದರೆ, ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿರುವುದು ಕಂಡುಬಂದಿದೆ. 2016-17ನೇ ಸಾಲಿನಲ್ಲಿ 2,183 ಕೋಟಿ ರೂ. ಸಂಗ್ರಹಿಸಿದ್ದು ಈವರೆಗಿನ ಅತಿ ಹೆಚ್ಚು ಮೊತ್ತದ ತೆರಿಗೆ ಸಂಗ್ರಹವಾಗಿತ್ತು. ಆದರೆ, ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳಿರುವಾಗಲೇ 2,170 ಕೋಟಿ ರೂ. ಸಂಗ್ರಹವಾಗಿದ್ದು, ಈಗಾಗಲೇ 50 ಕೋಟಿಯಷ್ಟು ತೆರಿಗೆ ಪಾವತಿಸಲು ತೆರಿಗೆದಾರರು ಚಲನ್ ಪಡೆದಿದ್ದಾರೆ. ಹೀಗಾಗಿ ಪಾಲಿಕೆಯ ಮಟ್ಟಿಗೆ ದಾಖಲೆಯ ತೆರಿಗೆ ಸಂಗ್ರಹಿಸಿದ ವರ್ಷ ಇದಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 3,100 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿ ಸುವ ಗುರಿ ಪಾಲಿಕೆ ಮುಂದಿದೆ. ಅದರಂತೆ ಈಗಾಗಲೇ ಶೇ.70ರಷ್ಟು ಗುರಿ ಸಾಧಿಸಿದ್ದು, ಪಾಲಿಕೆಯಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ದಾಖಲೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತದ್ದಾಗಲಿದೆ. ಮುಂದಿನ ಮೂರು ತಿಂಗಳಲ್ಲಿ ತೆರಿಗೆ ಅಭಿಯಾನದ ಮೂಲಕ ಹೆಚ್ಚಿನ ತೆರಿಗೆ ಸಂಗ್ರಹಿಸಲು ಪ್ರಯತ್ನಿಸಲಾಗುವುದು.
ಎಂ.ಶಿವರಾಜು, ಆಡಳಿತ ಪಕ್ಷದ ನಾಯಕ