Advertisement

ನರೇಗಾ ಕೂಲಿ ಹಣ ವಿಳಂಬವಾದರೆ ಅಧಿಕಾರಿಗಳಿಂದ ಬಡ್ಡಿ ಹಣ: ಎಚ್ಚರಿಕೆ

02:34 PM Apr 05, 2017 | |

ಧಾರವಾಡ: ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಸದೇ ಹೋದರೆ ಅದರ ಬಡ್ಡಿ ಹಣವನ್ನು ಅಧಿಕಾರಿಗಳಿಂದಲೇ ವಸೂಲಿ ಮಾಡಲಾಗುವುದು ಎಂದು ಗ್ರಾಮೀಣ ಅಭಿವೃದ್ದಿ ಸಚಿವ ಎಚ್‌.ಕೆ.ಪಾಟೀಲ್‌ ಎಚ್ಚರಿಸಿದರು. 

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯಡಿ ಬರುವ ಬರಗಾಲ ಪರಿಹಾರ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 395 ಹಳ್ಳಿಗಳಿದ್ದು, ಎಲ್ಲಾ ಹಳ್ಳಿಗಳಿಗೂ ಕನಿಷ್ಠ ಒಂದೊಂದು ಕೆಲಸವನ್ನು ಕಡ್ಡಾಯಗೊಳಿಸಬೇಕು.

20 ಅಂಶಗಳ ಕಾರ್ಯಕ್ರಮ ಅನ್ವಯ ಒಂದಾದ ಮೇಲೆ ಒಂದರಂತೆ ಕೆಲಸ ಮಾಡಿಸಬೇಕು. 15 ದಿನಗಳೊಳಗೆ ಅವರಿಗೆ ಹಣ ಪಾವತಿಸಬೇಕು. ಇಲ್ಲವಾದರೆ ಆ ಹಣದ ಮೇಲಿನ ಬಡ್ಡಿಯನ್ನು ಸರ್ಕಾರಕ್ಕೆ ಬದಲಾಗಿ ಪ್ರಮಾದ ಮಾಡಿದ ಅಧಿಕಾರಿಯಿಂದಲೇ ವಸೂಲಿ ಮಾಡುತ್ತೇವೆ ಎಂದು ಖಡಕ್ಕಾಗಿ ಎಚ್ಚರಿಸಿದರು. ಇನ್ನು ಏಪ್ರಿಲ್‌,ಮೇ ಮತ್ತು ಜೂನ್‌ ತಿಂಗಳಿನಲ್ಲಿ ನರೇಗಾದ ಕೆಲಸಗಳು ಜಿಲ್ಲೆಯಲ್ಲಿ ಚುರುಕಾಗಿ ನಡೆಯಲಿ.

ಈ ಸಂದರ್ಭದಲ್ಲಿ ನರೇಗಾ ಕೆಲಸದಲ್ಲಿ ತೊಡಗಿದ ಕಾರ್ಮಿಕರ ಮಕ್ಕಳಿಗೆ ಕೆಲಸ ನಡೆಯುವ ಸ್ಥಳದಲ್ಲಿಯೇ ಸಣ್ಣ ನೆರಳು ವ್ಯವಸ್ಥೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಈ ಎಲ್ಲ ಕಾರ್ಮಿಕರಿಗೂ ಅಗತ್ಯವಾದ ವೈದ್ಯಕೀಯ ಸೌಲಭ್ಯ ಒದಗಿಸಿಕೊಡುವಂತೆ ಜಿಲ್ಲಾಡಳಿತ ಮತ್ತು ಜಿಪಂ ಸಿಇಒ ವ್ಯವಸ್ಥೆ ಮಾಡುವಂತೆ ಸಚಿವ ಎಚ್‌.ಕೆ.ಪಾಟೀಲ ಸಲಹೆ ನೀಡಿದರು.  

ಸಿಇಒಗೆ ಸಲಹೆ: ಇನ್ನು ನರೇಗಾ ಮತ್ತು 20 ಅಂಶಗಳ ಕಾರ್ಯಕ್ರಮದ ಪ್ರಗತಿ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ ಸಚಿವ ಎಚ್‌.ಕೆ.ಪಾಟೀಲ ಅವರು ಧಾರವಾಡ ಜಿಪಂ ಸಿಇಒ ಸ್ನೇಹಲ್‌ ಅವರಿಗೆ, ಸರ್ಕಾರ ಸಾಕಷ್ಟು ಹಣ ಕೊಟ್ಟರೂ ಅಭಿವೃದ್ಧಿ ಕಾರ್ಯಗಳು ಯಾಕೆ ನಿಧಾನಕ್ಕೆ ಸಾಗುತ್ತಿವೆ.

Advertisement

ಕೂಡಲೇ ಎಲ್ಲ ಕಾಮಗಾರಿಗಳ ವೇಗ ಹೆಚ್ಚಿಸಲು ಯತ್ನಿಸುವಂತೆ ಸಲಹೆ ನೀಡಿದರು. ಇನ್ನು ತಾಲೂಕಾವಾರು ಬರ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಪಾಟೀಲ, ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸದೇ ಇರುವ  ಕುರಿತು ಬಂದಿರುವ ದೂರುಗಳ ಸಮಗ್ರ ವಿವರವನ್ನು ಅಧಿಕಾರಿಗಳಿಗೆ ನೀಡಿದರು.

ಅಷ್ಟೇಯಲ್ಲ, ಶೀಘ್ರವೇ ಅವುಗಳನ್ನು ಸರಿಪಡಿಸುವಂತೆ ಕೂಡ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಮಾತನಾಡಿ, ಬರಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೈಗೊಂಡ ತುರ್ತು ಕಾಮಗಾರಿಗಳು ಸೇರಿದಂತೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ಕುಡಿಯುವ ನೀರು ಇಲಾಖೆ ಹಿರಿಯ ಅಧಿಕಾರಿ ಪ್ರಕಾಶ, ಜಿಪಂ ಸಿಇಒ ಸ್ನೇಹಲ್‌, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ ಸೇರಿದಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next