ಮಂಗಳೂರು: ಕೈರಂಗಳ ಗ್ರಾಮದ ಪುಣ್ಯಕೋಟಿ ಅಮೃತಧಾರಾ ಗೋಶಾಲೆಯಿಂದ ಹಾಗೂ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ದನಗಳನ್ನು ಕಳವು ಮಾಡಿದ ಪ್ರಕರಣಗಳ ಆರೋಪಿಗಳ ಪೈಕಿ ತಲೆಮರೆಸಿದ್ದ ಪ್ರಮುಖ ಆರೋಪಿ ಮಂಜೇಶ್ವರದ ಮಚ್ಚಂಪಾಡಿಯ ಅಬ್ದುಲ್ಲ ಹುಸೈನ್ ಯಾನೆ ಹುಸೈನ್ ಮಂಜೇಶ್ವರ ಯಾನೆ ಜಾಕಿರ್‌ನನ್ನು ಕೊಣಾಜೆ ಪೊಲೀಸರು ಬಂಧಿಸಿ, ಒಂದು ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಗೋಶಾಲೆಯ ಗೋವು ಕಳವು ಪ್ರಕರಣದಲ್ಲಿ ಈ ಹಿಂದೆ 8 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿತ್ತು.
ಪಾಂಡೇಶ್ವರ ದೇವಾಲಯದ 2 ದನ ಮತ್ತು 1 ಕರುವನ್ನು ಕದ್ದ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದು, ಈ ಕೃತ್ಯಕ್ಕೆ ರಿಟ್ಜ್ ಕಾರನ್ನು ಬಳಸಿದ್ದ. ಈತನ ವಿರುದ್ಧ ದನ ಕಳವಿಗೆ ಸಂಬಂಧಿಸಿ ಕೊಣಾಜೆ ಠಾಣೆಯಲ್ಲಿ 2, ಉಳ್ಳಾಲ ಠಾಣೆಯಲ್ಲಿ 3, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 1, ಕಂಕನಾಡಿ ನಗರ ಠಾಣೆಯಲ್ಲಿ 2, ಪಾಂಡೇಶ್ವರ ಠಾಣೆಯಲ್ಲಿ ಒಂದು, ಕಾಸರಗೋಡಿನ ಕುಂಬಳೆ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈತನು ನೆತ್ತಿಲಪದವು, ಕಾಸರಗೋಡು ಮತ್ತು ವಿಟ್ಲ ಪರಿಸರದಲ್ಲಿ ಇನ್ನೂ ಕೆಲವು ದನ ಕಳವು ಮಾಡಿದ ಬಗ್ಗೆ ಮಾಹಿತಿ ಇದೆ.