ಹೊಸದಿಲ್ಲಿ: ಇಂದಿನ ಯುವ ಜನತೆಗೆ ತಮ್ಮ ಬಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಹೀಗಾಗಿ, ಪೋಷಕರು ಮತ್ತು ಸಮಾಜ ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಗಳನ್ನು ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕರ್ನಾಟಕದ ಬೆಳಗಾವಿಯ ಜೋಡಿಯೊಂದರ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ| ಹೃಷಿಕೇಶ್ ರಾಯ್ ಅವರಿದ್ದ ದ್ವಿಸದಸ್ಯ ಪೀಠ, ಬೇರೆ ಧರ್ಮದ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡ ಕಾರಣಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ದೂರ ಮಾಡಿಕೊಳ್ಳುವುದು ಒಪ್ಪತಕ್ಕದ್ದಲ್ಲ ಎಂದು ಅಭಿಪ್ರಾಯಪಟ್ಟಿತು.
ಪ್ರಸ್ತುತದಲ್ಲಿ ವಿದ್ಯಾವಂತ ಯುವಕ, ಯುವತಿಯರು ತಮ್ಮ ಬಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂಥ ವಿವಾಹಗಳಿಗೆ ಪೋಷಕರು, ಸಮಾಜದಿಂದ ವಿರೋಧವೂ ವ್ಯಕ್ತವಾಗುತ್ತಿದೆ. ಇಂಥ ವೇಳೆಯಲ್ಲಿ ಪೊಲೀಸರು ಕಾನೂನು ಉಲ್ಲಂಘಿಸದೇ ಇರುವ ಅಂತರ್ಜಾತೀಯ ವಿವಾಹವಾದ ಜೋಡಿಗಳಿಗೆ ಭದ್ರತೆ ನೀಡಬೇಕು ಎಂದಿತು. ಅಲ್ಲದೆ ಇಂಥ ಸಂದರ್ಭದಲ್ಲಿ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಪೊಲೀಸರಿಗೆ ತರಬೇತಿ ಮತ್ತು ಆಪ್ತಸಮಾಲೋಚನೆ ನೀಡಬೇಕು ಎಂದು ಹೇಳಿತು.
ಕರ್ನಾಟಕದ ಈ ಪ್ರಕರಣದಲ್ಲಿ ಯುವತಿಯ ಪೋಷಕರು ತಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂಬ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಬಾರದು ಎಂದು ಬೆಳಗಾವಿ ಪೊಲೀಸರಿಗೆ ಸೂಚಿಸಬೇಕು ಎಂದು ಈ ಜೋಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಇವರಿಬ್ಬರೂ ಉಪನ್ಯಾಸಕರಾಗಿದ್ದು, 2018ರಲ್ಲಿ ಭೇಟಿಯಾಗಿ, 2020ರಲ್ಲಿ ವಿವಾಹವಾಗಿತ್ತು. ಸದ್ಯ ಉತ್ತರ ಪ್ರದೇಶದಲ್ಲಿ ವಾಸವಿದ್ದು, ಯುವತಿ ಕಡೆಯವರು ಮತ್ತು ಪೊಲೀಸರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.