ಮಡಿಕೇರಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪಠ್ಯೇತರ ಚಟುವಟಿಕೆಗಳ ಪ್ರತಿಭಾ ಕೌಶಲವನ್ನು ಪ್ರತಿಬಿಂಬಿಸುವ ಮತ್ತು ಪ್ರೋತ್ಸಾಹಿಸುವ ಕಾರ್ಯವನ್ನು ಗುರುವಿನ ಸ್ಥಾನದಲ್ಲಿರುವ ಅಧ್ಯಾಪಕರುಗಳು ಮಾಡುತ್ತಿರುವುದು ಶ್ಲಾಘನೀಯವೆಂದು ಕೊಡಗು ಚಾನಲ್‌ನ ನಿರ್ದೇಶಕರಾದ ಜಿ.ವಿ. ರವಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಕಾಲೇಜುಗಳ ಸಿಬಂದಿಗಳಿಗಾಗಿ ನಗರದ ಫೀ|ಮಾ| ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಕಲಿಗಳ ನಾಡಿನ ಪ್ರತೀ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಕ್ಷೇತ್ರದ ಸಾಧನೆ ಅಪಾರವಾದುದು. ವಿದ್ಯಾರ್ಥಿಗಳ ಬದುಕು ರೂಪಿಸಲು ಪ್ರತಿದಿನ ಒತ್ತಡದಲ್ಲಿ ಶ್ರಮಿಸುವ ಶಿಕ್ಷಕರು ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ಇಂತಹ ಕ್ರೀಡಾಕೂಟಗಳು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಉಪನ್ಯಾಸಕರುಗಳ ಹಾಗೂ ಸಿಬಂದಿ ವರ್ಗದ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಜಿ.ವಿ. ರವಿಕುಮಾರ್ ಅಭಿಪ್ರಾಯಪಟ್ಟರು.
ಕ್ರೀಡಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಐಎನ್‌ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಪ್ರತಿದಿನ ಶೈಕ್ಷಣಿಕವಾಗಿ ಪಠ್ಯಕ್ರಮದಲ್ಲೇ ತಮ್ಮನ್ನು ತೊಡಗಿಸಿಕೊಳ್ಳುವ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಮಂಗಳೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ಮುಖ್ಯಸ್ಥರಾದ ಡಾ| ಕಿಶೋರ್ ಕುಮಾರ್ ಮಾತನಾಡಿ, ಅಂತರ್ ಕಾಲೇಜು ಸಿಬಂದಿಗಳ ಕ್ರೀಡಾಕೂಟವನ್ನು ಮೊದಲು ಆಯೋಜಿಸಿರುವ ಕೀರ್ತಿ ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿಗೆ ಸೇರುತ್ತದೆ. ಬೋಧಕ ವರ್ಗ ಹಾಗೂ ಸಿಬಂದಿಗಳು ದೈನಂದಿನ ಕಾರ್ಯದಿಂದ ಹೊರಬಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಕ್ರೀಡಾಕೂಟಕ್ಕೆ ಅಧಿಕೃತ ಮನ್ನಣೆ ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ| ಪಾರ್ವತಿ ಅಪ್ಪಯ್ಯ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗ ಪ್ರತೀ ಕ್ಷೇತ್ರದಲ್ಲೂ ಕಾಲೇಜಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ ಎಂದರು. ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯಗಳ ಅಂತರ ಕಾಲೇಜು ಸಿಬಂದಿಗಳ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ 10 ತಂಡಗಳು, ಥ್ರೋ ಬಾಲ್‌ನಲ್ಲಿ 8 ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಸಿ.ಜೆ. ಪ್ರಿಯಾ, ಮಡಿಕೇರಿಯ ವಕೀಲ ಪವನ್ ಪೆಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ. ವಿಭಾಗದ ಮುಖ್ಯಸ್ಥ ರಾಘವ, ಉಪನ್ಯಾಸಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.