ಬೆಂಗಳೂರು: ರಾಜ್ಯದಲ್ಲಿ ಶಿಶು ಮಾರಾಟ ಜಾಲ ಸಕ್ರಿಯವಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಕದ್ದ ಮಕ್ಕಳನ್ನು ಭಿಕ್ಷಾಟನೆ ದಂಧೆಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಧ್ಯವರ್ತಿಗಳು ಇದನ್ನು ನಿರ್ವಹಿಸುತ್ತಿದ್ದು, ಇದೊಂದು ಕೋಟ್ಯಂತರ ರೂ. ವಹಿವಾಟಿನ ಜಾಲ ಎಂಬ ಸ್ಫೋಟಕ ಸಂಗತಿ ಬಹಿರಂಗಗೊಂಡಿದೆ.
ಆಸ್ಪತ್ರೆ, ಮಾರುಕಟ್ಟೆ, ಬಸ್ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಶಿಶು ಮತ್ತು ಮಕ್ಕಳನ್ನು ಕದ್ದು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡುವುದು ಮತ್ತು ಭಿಕ್ಷಾಟನೆ ದಂಧೆಗೆ ಇಳಿಸುತ್ತಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಕದ್ದ ಮಕ್ಕಳನ್ನು ಕೂಡಿ ಹಾಕಿ ಹಿಂಸೆ ನೀಡಿ ಭಿಕ್ಷಾಟನೆಗೆ ಇಳಿಸುವ ಸಕ್ರಿಯ ತಂಡವೇ ರಾಜ್ಯಾದ್ಯಂತ ಇದೆ.
ರಾಜ್ಯದಲ್ಲಿ 2018ರಿಂದ ಈ ವರ್ಷದ ಜೂನ್‌ವರೆಗೆ ಶಿಶು ಮಾರಾಟ ಜಾಲದಲ್ಲಿ ತೊಡಗಿದ್ದ 238 ಮಂದಿಯನ್ನು ಬಂಧಿಸಲಾಗಿದೆ. ಅವರ ವಿಚಾರಣೆ ವೇಳೆ ಹಲವು ಸಂಗತಿಗಳು ಬಯಲಾಗಿದ್ದು, ಶಿಶು ಮಾರಾಟ ಮತ್ತು ಭಿಕ್ಷಾಟನೆಯಿಂದ ವಾರ್ಷಿಕ 30 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಯುತ್ತಿರುವ ವಿಷಯವನ್ನು ಬಂಧಿತರು ಬಾಯಿಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರ್ನಾಟಕ ಬಿಟ್ಟರೆ ಮಹಾರಾಷ್ಟ್ರ, ಹೈದರಾಬಾದ್, ತಮಿಳುನಾಡು, ದಿಲ್ಲಿಗಳಲ್ಲಿ ಈ ದಂಧೆ ಅಧಿಕವಾಗಿದೆ. ಗಂಡು ಶಿಶುವನ್ನು 2 ಲಕ್ಷದಿಂದ 3 ಲಕ್ಷ ರೂ.ಗಳಿಗೆ ಮಾರಿದರೆ, ಹೆಣ್ಣು ಶಿಶುವಿಗೆ 1 ಲಕ್ಷದಿಂದ 2.50 ಲಕ್ಷ ರೂ.ವರೆಗೆ ಪಡೆದು, ಮಕ್ಕಳಿಲ್ಲದ ದಂಪತಿಗಳಿಗೆ ಮಾರುತ್ತಾರೆ. ಇದಕ್ಕಾಗಿ ಒಂದು ತಂಡ ಕೆಲಸ ಮಾಡುತ್ತಿದೆ. ಆರೋಪಿಗಳು ಮಕ್ಕಳಿಲ್ಲದೆ ಚಿಕಿತ್ಸೆಗಾಗಿ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಬರುವ ಶ್ರೀಮಂತ ದಂಪತಿಯನ್ನು ಪರಿಚಯಿಸಿಕೊಂಡು 2 ರಿಂದ 1.5 ಲಕ್ಷ ರೂ.ಗಳಿಗೆ ಮಗುವನ್ನು ಮಾರುತ್ತಾರೆ.
ಬೆಂಗಳೂರು, ಕಲಬುರಗಿ, ಮೈಸೂರು, ಹಾವೇರಿ, ಚಿತ್ರದುರ್ಗ, ರಾಮನಗರ, ಬಳ್ಳಾರಿ, ರಾಯಚೂರು, ದಾವಣಗೆರೆ, ಧಾರವಾಡ, ಶಿವಮೊಗ್ಗ, ಕೊಪ್ಪಳ, ಬೀದರ್, ಬಾಗಲ ಕೋಟೆ ಭಾಗದಲ್ಲಿ ಈ ಜಾಲ ಅಧಿಕವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಪ. ಬಂಗಾಲ, ಝಾರ್ಖಂಡ್, ಅಸ್ಸಾಂ, ಆಂಧ್ರ ಪ್ರದೇಶ, ತಮಿಳುನಾಡಿನ ಗ್ರಾಮೀಣ ಭಾಗದ ಬಡ ಕುಟುಂಬಸ್ಥರನ್ನು ಸಂಪರ್ಕಿಸುವ ಮಧ್ಯ ವರ್ತಿಗಳು ಬೇಡಿಕೆಗೆ ಅನುಗುಣವಾಗಿ ಪಾಲಕರಿಗೆ ಹಣದ ಆಮಿಷವೊಡ್ಡಿ ಶಿಶುಗ ಳನ್ನು ಪಡೆದು ದುಪ್ಪಟ್ಟು ಬೆಲೆಗೆ ಮಾರುತ್ತಾರೆ. ಭಿಕ್ಷಾಟನೆಗಾಗಿ ಬಳಸಲು ಮಕ್ಕಳಕಿಗೆ ನಿದ್ದೆ ಮಾತ್ರೆ ಅಥವಾ ಚುಚ್ಚುಮದ್ದು ಕೊಡಲಾಗುತ್ತದೆ. ಹಸುಗೂಸುಗಳು 8-10 ತಾಸು ಪ್ರಜ್ಞೆ ಕಳೆದುಕೊಂಡು ಭಿಕ್ಷೆ ಬೇಡುವ ಮಹಿಳೆಯ ಕಂಕುಳಲ್ಲಿ ನೇತಾಡುತ್ತವೆ.
ಮಹಿಳೆಯರಿಗೆ ಕಮಿಷನ್
ಮಹಿಳೆಯರನ್ನೇ ಮುಂದಿಟ್ಟುಕೊಂಡು ಶಿಶು ಮಾರಾಟ ದಂಧೆ ನಡೆಸುವ ಕಿಂಗ್‌ಪಿನ್‌ಗಳು ಇದ್ದು, ಮಹಿಳೆಯರು ಒಂದು ಮಗುವನ್ನು ಮಾರಾಟ ಮಾಡಿಸಿದರೆ ಕಮಿಷನ್ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಒಂದು ರಾಜ್ಯದಲ್ಲಿ ಖರೀದಿಸಿದ ಮಗುವನ್ನು ಇನ್ನೊಂದು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತದೆ.
ಪ್ರಮುಖ ಪ್ರಕರಣಗಳು
– 2022ರ ಫೆ. 4- ಹೊನ್ನಾವರ ತಾಲೂಕಿನ ಆಶಾ ಕಾರ್ಯಕರ್ತೆ ಆಸ್ಪತ್ರೆಯಲ್ಲಿ ಅವಿವಾಹಿತೆ ಜನ್ಮ ನೀಡಿದ ಶಿಶುವಿನ ಮಾರಾಟ.
– 2021ರ ಮಾ. 5- ಮಂಗಳೂರಿನಲ್ಲಿ ಹಸುಗೂಸು ಮಾರಾಟ ಮಾಡುವ ಹೈಟೆಕ್ ಜಾಲ ಬಯಲು.
– 2021ರ ಅ. 6- ನವಜಾತ ಶಿಶುಗಳ ಮಾರಾಟ ಜಾಲ ಬೆಳಕಿಗೆ. ಐವರ ಬಂಧನ
– 2021ರ ಜೂ. 1- ಚಾಮರಾಜಪೇಟೆಯ ಬಿಬಿಎಂಪಿ ಆಸ್ಪತ್ರೆಯಲ್ಲಿ ಶಿಶು ಅಪಹರಣ. ವೈದ್ಯೆ ರಶ್ಮಿ ಬಂಧನ.
– ಸರಕಾರಿ ಆಸ್ಪತ್ರೆಗಳು ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಪಾಲಕರ ಕಣ್ಣು ತಪ್ಪಿಸಿ ಮಗು ಕದ್ದು ಶ್ರೀಮಂತರಿಗೆ ಮಾರಾಟ ಮಾಡು ತ್ತಿದ್ದ ಶಿವಾಜಿನಗರದ ದೇವಿ, ಮುಂಬಯಿಯ ರಂಜಿತಾ, ಶಂಕರ್ ನಾಯರ್ ಮತ್ತು ಆತನ ಪತ್ನಿ ಸುನಿತಾ ನಾಯರ್ ಗ್ಯಾಂಗ್ ಈ ವರ್ಷದ ಏ. 11ರಂದು ದಕ್ಷಿಣ ವಿಭಾಗದ ಮಾನವ ಕಳ್ಳ ಸಾ ಗಣೆ ನಿಯಂತ್ರಣ ವಿಶೇಷ ತಂಡದ ಕೈಗೆ ಸಿಕ್ಕಿ ಬಿದ್ದಿತ್ತು.
ಶಿಶು ಮಾರಾಟ ದಂಧೆಗೆ ಕಡಿವಾಣ ಹಾಕಲಾಗುತ್ತಿದೆ. ಮಕ್ಕಳು ಮತ್ತು ಮಹಿಳೆ ಯರನ್ನು ಭಿಕ್ಷಾಟನೆ ದಂಧೆಗೆ ದೂಡುತ್ತಿರುವುದು ಗಮನಕ್ಕೆ ಬಂದರೆ ಮಾಹಿತಿ ನೀಡಿ.
– ಸುಬ್ರಹ್ಮಣ್ಯೇಶ್ವರ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ
-ಅವಿನಾಶ್ ಮೂಡಂಬಿಕಾನ