ಚೆನ್ನೈ: ಮಹಾಮಾರಿ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟಲು ಅಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಚೆನ್ನೈ ಹಾಗೂ ನೆರೆಯ ತಿರುವಳ್ಳೂರ್, ಕಾಂಚೀಪುರಂ ಹಾಗೂ ಚೆಂಗಲ್ ಪಟ್ಟು ಜಿಲ್ಲೆಗಳನ್ನು ಜೂನ್ 19ರಿಂದ ಜೂನ್ 30ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ತಮಿಳುನಾಡಿನಲ್ಲಿ ಈವರೆಗೆ 31,896 ಕೋವಿಡ್ 19 ವೈರಸ್ ಪ್ರಕರಣ ದೃಢಪಟ್ಟಿದ್ದು, ಒಟ್ಟು 44,661 ಕೋವಿಡ್ ಪ್ರಕರಣ ವರದಿಯಾಗಿದೆ.
ಕೋವಿಡ್ 19 ಪ್ರಕರಣ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ವರದಿಯಾಗಿದ್ದು, ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ರಾಜ್ಯ ಸರ್ಕಾರ ಹಲವಾರು ನಿರ್ಬಂಧಗಳನ್ನು ಕೈಗೊಂಡಿದ್ದರು ಕೂಡಾ ಕೋವಿಡ್ 19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಎಂದು ವರದಿ ಹೇಳಿದೆ.
ಚೆನ್ನೈನಲ್ಲಿ ಅತೀ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಭಾನುವಾರ ಒಂದೇ ದಿನ ಚೆನ್ನೈನಲ್ಲಿ 1,415 ಕೋವಿಡ್ 19 ವೈರಸ್ ಪ್ರಕರಣ ವರದಿಯಾಗಿದೆ. ನಗರದ ಕೊಳಗೇರಿ ಪ್ರದೇಶಗಳಲ್ಲಿ ವೈರಸ್ ಹೆಚ್ಚು ಹರಡುತ್ತಿರುವುದು ಕಳವಳಕಾರಿಯಾಗಿದೆ ಎಂದು ತಿಳಿಸಿದೆ.
ಮೂಲಗಳ ಪ್ರಕಾರ, ಚೆನ್ನೈ ಹಾಗೂ ನೆರೆಯ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ನಿರ್ಬಂಧ ಜಾರಿಯಲ್ಲಿರಲಿದೆ. ಯಾವುದೇ ಕಾರು, ರಿಕ್ಷಾ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ. ತುರ್ತು ಸೇವೆ ಹೊರತುಪಡಿಸಿ ಇತರೇ ಯಾವುದೇ ವಹಿವಾಟುಗಳಿಗೆ ಅವಕಾಶ ಇಲ್ಲ. 2 ಕಿಲೋ ಮೀಟರ್ ಅಂತರದೊಳಗೆ ಅಗತ್ಯ ವಸ್ತುಗಳ ಖರೀದಿಗೆ ಸ್ವಲ್ಪ ಕಾಲಾವಕಾಶ ಒದಗಿಸಲಾಗುವುದು. ಆಸ್ಪತ್ರೆ, ಲ್ಯಾಬೋರೇಟರಿ ಮತ್ತು ಮೆಡಿಕಲ್ ತೆರೆಯಲು
ಅನುಮತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 29 ಮತ್ತು 30ರಂದು ಶೇ.33ರಷ್ಟು ಸಿಬ್ಬಂದಿಗಳೊಂದಿಗೆ ಬ್ಯಾಂಕ್ ವ್ಯವಹಾರ ನಡೆಸಲು ಅನುಮತಿ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಪೆಟ್ರೋಲ್ ಪಂಪ್ ತೆರೆದಿರಲಿದೆ.