Advertisement

ಅಖಂಡವೇ ಧ್ಯೇಯ; ಉತ್ತರ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್‌ ನಿಲುವೇನು?

06:00 AM Jul 29, 2018 | Team Udayavani |

ಬೆಂಗಳೂರು: ಉತ್ತರ ಕರ್ನಾಟಕ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.

Advertisement

ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ವ್ಯಕ್ತಪಡಿಸದೆ, ಅಖಂಡ ಕರ್ನಾಟಕದ ಪ್ರತಿಪಾದನೆ ಮಾಡುತ್ತಲೇ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದರೆ ಹೋರಾಟಕ್ಕೆ ನಾವೂ ಸಿದ್ಧ ಎಂಬ ಸಂದೇಶವನ್ನು ಪಕ್ಷ ರವಾನಿಸಿದೆ.

ನಗರದಲ್ಲಿ ಶನಿವಾರ ನಡೆದ ಬಿಜೆಪಿ ಕೋರ್‌ ಕಮಿಟಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಭುಗಿಲೆದ್ದಿರುವ ಆಕ್ರೋಶ ಕುರಿತು ಸುದೀರ್ಘ‌ವಾಗಿ ಚರ್ಚೆ ನಡೆದು ಪ್ರತ್ಯೇಕ ರಾಜ್ಯಕ್ಕೆ ಸಹಮತ ವ್ಯಕ್ತಪಡಿಸದೆ ಆ ಭಾಗದ ಜನರ ಜತೆ ಬಿಜೆಪಿ ನಿಲ್ಲಬೇಕು. ಆ ಮೂಲಕ ಜೆಡಿಎಸ್‌ ಹಾಗೂ ಕಾಂಗ್ರೆಸ್‌ಗೆ ರಾಜಕೀಯವಾಗಿ ತಿರುಗೇಟು ನೀಡಬೇಕು ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಒಡೆದು ಆಳುವ ನೀತಿ:
ಕೋರ್‌ ಕಮಿಟಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಡೆದಾಳುವ ನೀತಿ ಅನುಸರಿಸುತ್ತಿದ್ದು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದರು.
79 ಶಾಸಕರನ್ನು ಹೊಂದಿದ್ದರೂ 37 ಶಾಸಕರನ್ನು ಹೊಂದಿರುವ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ಪಕ್ಷ ಮುಖ್ಯಮಂತ್ರಿಯವರ ಹೇಳಿಕೆ ಕುರಿತು ಮೌನ ವಹಿಸುವುದು ಸರಿಯಲ್ಲ ಎಂದು ಟೀಕಿಸಿದರು.

ಎಚ್‌.ಡಿ.ಕುಮಾರಸ್ವಾಮಿ 37 ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಉತ್ತರ ಕರ್ನಾಟಕ ಭಾಗದವರು ನಮಗೆ ಮತ ಕೊಡಲಿಲ್ಲ, ನಿಮಗೇಕೆ ಅಭಿವೃದ್ಧಿ ಮಾಡಬೇಕು ಎಂಬ ಅವರ ಧೋರಣೆ ಸರಿಯಲ್ಲ. ಪದೇ ಪದೇ ಇಂತಹ ಹೇಳಿಕೆ ನೀಡುವ ಮೂಲಕ ಆ ಭಾಗದ ಜನರ ಭಾವನೆ ಕೆಣಕುವ ಕೆಲಸ ಮಾಡಲಾಗುತ್ತಿದೆ. ಕುಮಾರಸ್ವಾಮಿ ರಾಜ್ಯ ಇಬ್ಭಾಗದ ಉದ್ದೇಶ ಹೊಂದಿದ್ದಾರೆಯೇ ಎಂಬ ಶಂಕೆಯೂ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

Advertisement

ಸ್ವಾರ್ಥ ರಾಜಕಾರಣ:
ಕುಮಾರಸ್ವಾಮಿಯವರು ಅಧಿಕಾರ ದಾಹ ಹಾಗೂ ಸ್ವಾರ್ಥದಿಂದ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಜನತಾಪಕ್ಷ, ಜನತಾದಳ ಒಡೆದ ಜೆಡಿಎಸ್‌ ರಾಜ್ಯವನ್ನು  ಒಡೆಯುವ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ಹೇಳಿಕೆಯಿಂದ ಆ ಭಾಗ ಹೊತ್ತಿ  ಉರಿಯುತ್ತಿದೆ. ಬಂದ್‌ಗೆ ಕರೆ ನೀಡಲಾಗಿದೆ. ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಯಾರು ಹೊಣೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಸಾಹಿತಿಗಳು, ಕನ್ನಡಪರ ಹೋರಾಟಗಾರರ ತ್ಯಾಗದ ಫ‌ಲವಾಗಿ ಅಖಂಡ ಕರ್ನಾಟಕವಾಗಿದೆ. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ತಾರತಮ್ಯ ಯಾವುದೇ ಕಾರಣಕ್ಕೂ ಬಿಜೆಪಿ ಸಹಿಸಲ್ಲ ಎಂದು ತಿಳಿಸಿದರು.

ಈಗಲಾದರೂ ಕುಮಾರಸ್ವಾಮಿಯವರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು. ಬಾಯ್ತಪ್ಪಿ ಮಾತನಾಡಿದ್ದೇನೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ನಾನು ಬದ್ಧ. ನಾನು ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂದು ಹೇಳಬೇಕು ಎಂದು ಆಗ್ರಹಿಸಿದರು.

ಬಿಜೆಪಿಯ ಶಾಸಕರೂ ಆಗಿರುವ ಮಾಜಿ ಸಚಿವ ಶ್ರೀರಾಮುಲು ಪ್ರತ್ಯೇಕ ರಾಜ್ಯ ಬೇಕು ಎಂದು ಹೇಳಿಲ್ಲ.  ಈ ರೀತಿಯ ಹೇಳಿಕೆಗಳು ಹಾಗೂ ತಾರತಮ್ಯ ಧೋರಣೆಯಿಂದ ಅಂತಹ ಕೂಗು ಏಳುತ್ತದೆ. ಹೀಗಾಗಿ, ಸಮಗ್ರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಹೇಳಿದ್ದಾರೆ. ನಾನು ಅವರ ಬಳಿ ಸ್ಪಷ್ಟನೆ ಪಡೆದಿದ್ದೇನೆ. ಬಿಜೆಪಿ ಎಂದೂ ಪ್ರತ್ಯೇಕ ರಾಜ್ಯದ ಪರ ಅಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಕರ್ನಾಟಕದ ಎಲ್ಲ ಭಾಗಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಅಖಂಡ ಕರ್ನಾಟಕ ನಮ್ಮದು. ಇದನ್ನು ಒಡೆಯುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಕೆಲವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಬೆಳಗಾವಿಯ ಬಿಜೆಪಿಯ ಕೆಲವು ಶಾಸಕರು ಈ ಕೆಲಸ ಮಾಡುತ್ತಿದ್ದಾರೆ. ನಾವು ಅಖಂಡ ಕರ್ನಾಟಕದ ಪರವಾಗಿದ್ದೇವೆ.
– ಡಿ.ಕೆ. ಶಿವಕುಮಾರ್‌

ಜೆಡಿಎಸ್‌ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬದ್ಧತೆ ಹೊಂದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ರಾಜಕೀಯ ಕಾರಣಗಳಿಗಾಗಿ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿರುವುದು ಬಿಜೆಪಿ ಎಂಬುದು ಆ ಪಕ್ಷದ ಮುಖಂಡರು ಈ ಹಿಂದೆ ನೀಡಿದ ಹೇಳಿಕೆಯಿಂದ ಸಾಬೀತಾಗಿದೆ.
– ರಮೇಶ್‌ಬಾಬು, ಜೆಡಿಎಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next