Advertisement

APMC ಗಳಲ್ಲಿ ವಂಚನೆ ತಡೆಗೆ ವಿಚಕ್ಷಣ ದಳ ಸಕ್ರಿಯ: ಸಚಿವ ಶಿವಾನಂದ ಎಸ್‌. ಪಾಟೀಲ್‌

11:19 PM Feb 09, 2024 | Pranav MS |

ಬೆಂಗಳೂರು: ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರ ಶೋಷಣೆಯ ದೂರುಗಳು ಬರಬಾರದು. ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಮತ್ತೆ ವಿಚಕ್ಷಣ ದಳವನ್ನು ಸಕ್ರಿಯಗೊಳಿಸಬೇಕು. ಸೋರಿಕೆ ತಡೆಗಟ್ಟೆ ಎಪಿಎಂಸಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಎಸ್‌. ಪಾಟೀಲ್‌ ನಿರ್ದೇಶನ ನೀಡಿದ್ದಾರೆ.

Advertisement

ಶುಕ್ರವಾರ ಕೃಷಿ ಮಾರುಕಟ್ಟೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಪಿಎಂಸಿಗಳು ರೈತಸ್ನೇಹಿಯಾಗಿರಬೇಕು. ಆರ್ಥಿಕ ಅಪರಾಧ ಗಳಿಗೆ ಅವಕಾಶ ನೀಡಬಾರದು. ಕೆಲವು ಎಪಿಎಂಸಿಗಳ ಬಗ್ಗೆ ವ್ಯಾಪಕ ದೂರುಗಳಿವೆ. ಅಂಥವರು ಬದಲಾಗಬೇಕೆಂದು ಎಲ್ಲ ಎಪಿಎಂಸಿ ಕಾರ್ಯದರ್ಶಿಗಳಿಗೆ ಎಚ್ಚರಿಕೆ ನೀಡಿದರು.

ಕೆಲವು ಮಾರುಕಟ್ಟೆಗಳಲ್ಲಿ ದಲ್ಲಾಳಿಗಳು ರೈತರಿಂದ ಹೆಚ್ಚುವರಿ ಕಮಿಷನ್‌ ಪಡೆಯು ತ್ತಿರುವ ಹಾಗೂ ಸರಕಾರದ ಸವಲತ್ತು ಇಲ್ಲವೇ ಬೇರೆ ಬೇರೆ ಕಾರಣಕ್ಕೆ ಉದ್ದಿಮೆ ಪರವಾನಿಗೆ (ಟ್ರೇಡ್‌ ಲೈಸೆನ್ಸ್‌) ಪಡೆದಿರುವ ದೂರುಗಳಿವೆ. ಅಂಥ ಪರವಾನಿಗೆಗಳನ್ನು ಗುರುತಿಸಿ ರದ್ದುಪಡಿಸಬೇಕು. ಮಾರುಕಟ್ಟೆ ಶುಲ್ಕ ವಂಚನೆಯ ದೂರುಗಳು ಹೆಚ್ಚಾಗುತ್ತಿವೆ. ಎಪಿಎಂಸಿಗಳ ಆದಾಯ ಕಡಿಮೆಯಾಗುತ್ತಿದೆ. ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆ ಮಾಡಿ ತಡೆಗಟ್ಟಿ ಎಂದು ಸೂಚನೆ ನೀಡಿದ ಅವರು, ವಂಚನೆ ತಡಗೆ ವಿಚಕ್ಷಣ ದಳಗಳನ್ನು ಮತ್ತೆ ಸಕ್ರಿಯಗೊಳಿಸಲಾಗುವುದು ಎಂದರು.

ನಿರೀಕ್ಷಿತ ಮಟ್ಟ ತಲುಪದ ಶುಲ್ಕ ಸಂಗ್ರಹ
ಮಾರುಕಟ್ಟೆ ಶುಲ್ಕ ಸಂಗ್ರಹ ಗುರಿ ಸಾಧನೆ ತಲುಪಲು ಸಾಧ್ಯವಾಗದಿರುವುದಕ್ಕೆ ಬರ ಪರಿಸ್ಥಿತಿ ಕಾರಣ ಎಂಬ ಸಬೂಬು ಹೇಳಲಾಗುತ್ತಿದೆ. ಆದರೆ ಯಶವಂತಪುರ ಮಾರುಕಟ್ಟೆಗೆ ಈರುಳ್ಳಿ, ಬೆಳ್ಳುಳ್ಳಿ, ಬ್ಯಾಡಗಿ ಮೆಣಸಿನಕಾಯಿ ಮತ್ತು ಹುಬ್ಬಳ್ಳಿ ಮಾರುಕಟ್ಟೆಗೆ ಮೆಣಸಿನಕಾಯಿ ದ್ವಿದಳ ಧಾನ್ಯಗಳ ಬರುವುದು ಹೆಚ್ಚಾಗಿದೆ. ಈರುಳ್ಳಿ ಬೆಳ್ಳುಳ್ಳಿ ಆವಕ ಪ್ರಮಾಣ ಹಾಗೂ ಧಾರಣೆ ಗರಿಷ್ಠ ಮಟ್ಟ ತಲುಪಿದ್ದು, ಶುಲ್ಕ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಡಿಕೆ ಆವಕವೂ ಹೆಚ್ಚಳವಾಗಿದೆ. ಹಾಗಿದ್ದರೂ ಅಡಿಕೆ ವಹಿವಾಟು ಇರುವ ಎಪಿಎಂಸಿಗಳಲ್ಲಿ ಗುರಿ ತಲುಪದಿರಲು ಏನು ಕಾರಣ ಎಂದು ಪ್ರಶ್ನಿಸಿದರು. ಶುಲ್ಕ ಸಂಗ್ರಹ ಗುರಿಯಲ್ಲಿ ತೀರಾ ಕಳಪೆ ಸಾಧನೆ ಮಾಡಿರುವ ಅಧಿಕಾರಿಗಳಿಗೆ ನಿಮ್ಮ ಲೋಪ ಕಂಡುಕೊಂಡು ಸರಿಯಾಗಿ ಕೆಲಸ ಮಾಡಿ ಎಂದರು.

Advertisement

ರಿಯಾಯಿತಿ ನೀಡಿ
ಎಪಿಎಂಸಿಗಳ ಆಸ್ತಿ ರಕ್ಷಣೆ ಅಧಿಕಾರಿಗಳ ಜವಾಬ್ದಾರಿ. ಖಾಲಿ ಇರುವ ಗೋದಾಮುಗಳನ್ನು ಹಂಚಿಕೆ ಮಾಡಲು ತತ್‌ಕ್ಷಣ ಟೆಂಡರ್‌ ಕರೆಯ ಬೇಕು. ಎರಡು ಬಾರಿ ಟೆಂಡರ್‌ ಕರೆದರೂ ಸ್ಪಂದನೆ ಸಿಗದಿದ್ದರೆ ರಿಯಾಯಿತಿ ನೀಡಿ ಹಂಚಿಕೆ ಮಾಡಲು ಫೆ. 15ರೊಳಗೆ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಎಪಿಎಂಸಿ ಜಾಗ ಒತ್ತುವರಿಯಾಗಿದೆ ಎಂಬುದನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ರಾಜಕಾರಣ ಮಾಡಬೇಡಿ

ಕೆಲವು ಅಧಿಕಾರಿಗಳು ರಾಜಕಾರಣ ಮಾಡುತ್ತಿರುವ ನಿರ್ದಿಷ್ಟ ದೂರುಗಳಿವೆ. ಈ ಪ್ರವೃತ್ತಿ ಬಿಟ್ಟು ಅಧಿಕಾರಿಗಳಾಗಿ ನಿಮ್ಮ ನಿಮ್ಮ ಕೆಲಸ ಮಾಡಿ. ಮಾದರಿಯಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಗಮನಿಸಿ ಅವರ ಕಾರ್ಯಶೈಲಿಯನ್ನು ರೂಢಿಸಿಕೊಳ್ಳಿ. ಮೈಸೂರಿನ ಎಪಿಎಂಸಿಯಲ್ಲಿ ಇಂದಿರಾ ಕ್ಯಾಂಟೀನ್‌ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಕಾರ್ಯದರ್ಶಿಗಳು ಒಂದು ಬಾರಿ ಮೈಸೂರಿಗೆ ಭೇಟಿ ನೀಡಿ, ಇದೇ ಮಾದರಿಯಲ್ಲಿ ನಿಮ್ಮ ನಿಮ್ಮ ಎಪಿಎಂಸಿಗಳಲ್ಲಿ ಅನುಷ್ಠಾನಕ್ಕೆ ಪ್ರಯತ್ನಿಸಿ ಎಂದು ಸಚಿವ ಪಾಟೀಲ್‌ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next