Advertisement

ಗುಪ್ತಚರ ದಳದ ಮುನ್ನೆಚ್ಚರಿಕೆಯ ನಿರ್ಲಕ್ಷ್ಯ  ಬೇಡ

12:06 AM Jan 20, 2022 | Team Udayavani |

ದೇಶದ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವು ನಾಯಕರಿಗೆ ಉಗ್ರರಿಂದ ಜೀವ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಗೃಹ ಇಲಾಖೆಗೆ ಪತ್ರ ಬರೆದಿದೆ. ಪ್ರತೀ ವರ್ಷ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಉಗ್ರ ಸಂಘಟನೆಗಳು ಬೆದರಿಕೆ ಒಡ್ಡುವುದು ಸಾಮಾನ್ಯವಾದರೂ ಈ ಬಾರಿ ಗುಪ್ತಚರ ಇಲಾಖೆ ನೀಡಿ ರುವ ಮುನ್ನೆಚ್ಚರಿಕೆಯನ್ನು ಸರಕಾರ ಗಂಭೀರವಾಗಿಯೇ ಪರಿಗಣಿಸಬೇಕಿದೆ.

Advertisement

ವಾರದ ಹಿಂದೆಯಷ್ಟೇ ಘಾಜಿಪುರದ ಹೂವಿನ ಮಾರುಕಟ್ಟೆಯಲ್ಲಿ ಅನಾಥ ಬ್ಯಾಗ್‌ ಒಂದರ ಕಬ್ಬಿಣದ ಪೆಟ್ಟಿಗೆಯಲ್ಲಿ 3 ಕೆ.ಜಿ. ತೂಕದ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿತ್ತು. ಈ ಸ್ಫೋಟಕದಲ್ಲಿ ಆರ್‌ಡಿಎಕ್ಸ್‌ ಮತ್ತು ಅಮೋನಿಯಂ ನೈಟ್ರೇಟ್‌ ಬಳಸಲಾಗಿತ್ತು. ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಸ್ಫೋಟಕ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿತ್ತು. ಪಂಜಾಬ್‌ನಲ್ಲೂ ಇಂತಹುದೇ ಸ್ಫೋಟಕ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸೋಮವಾರ ಅಫ್ಘಾನಿಸ್ಥಾನದಲ್ಲಿ ವಾಯುದಾಳಿಯಲ್ಲಿ ಇಬ್ಬರು ಭಾರತೀಯರನ್ನು ಹತ್ಯೆಗೈಯಲಾಗಿತ್ತು.

ಜ.5ರಂದು ಪಂಜಾಬ್‌ನ ಫಿರೋಜ್‌ಪುರದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ವೇಳೆ ರೈತರ ಪ್ರತಿಭಟನೆಯ ಕಾರಣದಿಂದಾಗಿ ಪ್ರಧಾನಿ ಮೋದಿ ಅವರು 20 ನಿಮಿಷ ಫ್ಲೈಓವರ್‌ ಮೇಲೆಯೇ ಸಿಲುಕುವಂತಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತಲ್ಲದೆ ಪ್ರಧಾನಿಯವರ ರಕ್ಷಣೆ ವಿಚಾರದಲ್ಲಿ ಪಂಜಾಬ್‌ ಸರಕಾರ ನಿರ್ಲಕ್ಷ್ಯ ತೋರಿದ್ದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತ ವಾಗಿತ್ತು. ಪಂಜಾಬ್‌ನ ಗುಪ್ತಚರ ಇಲಾಖೆ ಜ.2ರಂದೇ ಪಂಜಾಬ್‌ ಭೇಟಿ ವೇಳೆ ಪ್ರಧಾನಿ ಅವರಿಗೆ ಉಗ್ರ ಸಂಘಟನೆಗಳಿಂದ ಜೀವ ಬೆದರಿಕೆ ಇರುವು ದಾಗಿ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ ವರದಿ ನೀಡಿದ್ದ ವಿಚಾರ ಘಟನೆಯ ಬಳಿಕ ಬೆಳಕಿಗೆ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಯಲ್ಲಿ ರಾಜಧಾನಿ ಹೊಸದಿಲ್ಲಿ ಮತ್ತು ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ದೇಶದ ಪ್ರಮುಖ ನಗರಗಳಲ್ಲೂ ಕಣ್ಗಾ ವಲು ಇರಿಸಲಾಗಿದೆ. ಇತ್ತೀಚೆಗೆ ಉಗ್ರರು ದಾಳಿಗೆ ಅತ್ಯಾಧುನಿಕ ತಂತ್ರ ಜ್ಞಾನ ಬಳಸಲಾರಂಭಿಸಿರುವುದರಿಂದ ದಿಲ್ಲಿ ಮತ್ತು ಎನ್‌ಸಿಆರ್‌ ಪ್ರದೇಶ ದಲ್ಲಿ ಜ.20ರಿಂದ ಫೆ.15ರ ವರೆಗೆ ಡ್ರೋನ್‌, ಪ್ಯಾರಾಗ್ಲೆ„ಡರ್, ಹಾಟ್‌ ಏರ್‌ ಬಲೂನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ.

ಈಗ ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ ಬರೆದಿರುವ 9 ಪುಟಗಳ ಪತ್ರದಲ್ಲಿ ಉಲ್ಲೇಖೀಸಲಾಗಿರುವ ವಿಚಾರಗಳನ್ನು ಭದ್ರತಾ ಪಡೆಗಳು ಮತ್ತು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಪ್ರಧಾನಿ ಮತ್ತು ಹಲವು ನಾಯಕರಿಗೆ ಜೀವಬೆದರಿಕೆ ಮತ್ತು ಜನನಿಬಿಡ ಸ್ಥಳಗಳಲ್ಲಿ ದಾಳಿ ನಡೆಸುವ ಬೆದರಿಕೆ ಒಡ್ಡಿರುವ ಉಗ್ರ ಸಂಘಟನೆಗಳಲ್ಲಿ ಎಲ್‌ಇಟಿ, ಪಾಕಿಸ್ಥಾನ್‌ ತಾಲಿಬಾನ್‌, ಇಂಡಿಯನ್‌ ಮುಜಾಹಿದೀನ್‌, ಸಿಮಿ, ಹರ್ಕತ್‌ ಉಲ್‌ ಮುಜಾಹಿದೀನ್‌ ಸೇರಿದ್ದು ಈ ಖತರ್‌ನಾಕ್‌ ಉಗ್ರರ ಷಡ್ಯಂತ್ರ ನಿರ್ಲಕ್ಷಿಸಲಾಗದು. ಉಗ್ರರು ಯಾವುದೇ ಸಂಚು ಹೂಡಲು ಅವಕಾಶ ನೀಡದೆ ಗಣರಾಜ್ಯೋತ್ಸವ ದಿನವನ್ನು ಸಡಗರ, ಸಂಭ್ರಮದ ಜತೆಯಲ್ಲಿ ಶಾಂತಿಯುತ ಮತ್ತು ಸುಲಲಿತವಾಗಿ ಆಚರಿಸಲು ಅಗತ್ಯ ಕ್ರಮ ಗಳನ್ನು ಗೃಹ ಇಲಾಖೆ ಕೈಗೊಳ್ಳಬೇಕಿದೆ. ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದ ನೀಡದೆ ದೇಶದ ಏಕತೆಯನ್ನು ಎತ್ತಿ ಹಿಡಿಯುವ ಜತೆಗೆ ಉಗ್ರಗಾಮಿ ಸಂಘಟನೆಗಳು ಮತ್ತು ಉಗ್ರರ ಸಂಚನ್ನು ವಿಫ‌ಲಗೊಳಿಸುವುದೇ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next